ಸರ್ಕಾರಿ ಜೂನಿಯರ್ ಕಾಲೇಜಿನ ಗೇಟಿಗೆ ಬೀಗ ಹಾಕಲ್ಲ!
– ಸುತ್ತಮುತ್ತ ಪುಂಡಪೋಕರಿಗಳ, ಗಾಂಜಾ ಸೇವನೆಯ ಅಡ್ಡ
– ಕಾಲೇಜು ಆಡಳಿತ ಮಂಡಳಿ ತಕ್ಷಣ ಗಮನಿಸಲಿ!
NAMMUR EXPRESS NEWS
ತೀರ್ಥಹಳ್ಳಿ: ಸಾವಿರಾರು ವಿದ್ಯಾರ್ಥಿಗಳ ಜೀವನ ಉಜ್ವಲವಾಗಲು ಕಾರಣವಾಗಿರುವ ತೀರ್ಥಹಳ್ಳಿಯ ಪ್ರತಿಷ್ಠಿತ ಜೂನಿಯರ್ ಕಾಲೇಜಿನ ಹೊರ ಗೇಟುಗಳು ಸದಾ ತೆರೆದಿರುವುದು ಇದೀಗ ಪುಂಡಪೋಕರಿಗಳಿಗೆ ಕೆಟ್ಟ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾದರೆ ಪುಂಡಪೋಕರಿಗಳು, ಕುಡುಕರು, ಗಾಂಜಾ ಸೇವನೆಯ ಅಡ್ಡವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದು ತಕ್ಷಣ ಆಡಳಿತ ಗಮನ ವಹಿಸಬೇಕಿದೆ.
ಅನೈತಿಕ ಚಟುವಟಿಕೆಗಳ ತಾಣ: ಸಂಜೆ ಯಾಗುತ್ತಿದ್ದಂತೆ ಕುಡುಕರು ಕಾಲೇಜ್ ಮೈದಾನದಲ್ಲಿ ಕುಡಿದು ಅಲ್ಲೇ ಮೂತ್ರ ವಿಸರ್ಜನೆ, ಮಾಡಿ ಗಬ್ಬುನಾರುತ್ತಿದೆ, ಗಾಂಜಾ ಸೇವನೆಗೆ ಕೂಡ ಬಳಸಿಕೊಳ್ಳುತ್ತಿದ್ದಾರೆ. ಕೆಲ ಕುಡುಕರು ಕಾಲೇಜ್ ಮೈದಾನವನ್ನೆ ಮನೆಯನ್ನಾಗಿಸಿ ಕೊಂಡು ರಾತ್ರಿ ಅಲ್ಲೇ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟವರು ತಕ್ಷಣ ಗಮನಿಸಿ: ತಾಲೂಕಿನ ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಕಾಲೇಜಿಗೆ ಸಮರ್ಪಕ ಗೇಟ್ ಇಲ್ಲದಿರುವುದು, ಸಂಜೆ ಆಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಜಾಗವಾಗಿ ಮಾರ್ಪಾಟಾಗಿದೆ. ಕಾಲೇಜಿನ ಈ ದುಸ್ಥಿತಿ ಕಂಡೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಸರಕಾರದ ಅಧೀನದಲ್ಲಿ ಬರುವ ಈ ಜಾಗ ಈಗ ಹಾಳಾಗುತ್ತಿರುವುದು ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಸಂಬಂಧಪಟ್ಟವರು ತಕ್ಷಣ ಈ ಬಗ್ಗೆ ಗಮನಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
