Categories
ತೀರ್ಥಹಳ್ಳಿ

ಒಕ್ಕಲಿಗ ಸಮುದಾಯದ ಹಿರಿಯ ಕೊಂಡಿ ಕಳಚಿತು!

ಒಕ್ಕಲಿಗ ಸಮುದಾಯದ ಹಿರಿಯ ಕೊಂಡಿ ಕಳಚಿತು!
– ಶ್ರೀನಿವಾಸ ಗೌಡ ವಿಧಿವಶ: ಗಣ್ಯರ ಕಂಬನಿ
– ಸಮಾಜಕ್ಕಾಗಿ ದುಡಿದಿದ್ದ ಹಿರಿಯ ಜೀವ
– ಶಾಸಕ ಆರಗ ಜ್ಞಾನೇಂದ್ರ, ಕಿಮ್ಮನೆ, ಆರ್ ಎಂ, ಮದನ್, ಧರ್ಮೇಶ್ ಸೇರಿ ಗಣ್ಯರ ಸಂತಾಪ

NAMMUR EXPRESS NEWS
ತೀರ್ಥಹಳ್ಳಿ: ಒಕ್ಕಲಿಗ ಸಮುದಾಯದ ಹಿರಿಯ ನಾಯಕ ಕಡ್ತುರು ಶ್ರೀನಿವಾಸ ಗೌಡ (87)ಅವರು ವಯೋ ಸಹಜ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ತೀರ್ಥಹಳ್ಳಿಗೆ ಅನೇಕ ಕೊಡುಗೆ ನೀಡಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಹುಟ್ಟೂರಲ್ಲಿ ನಡೆಯಲಿದೆ. ತಾಲೂಕಿನ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದ ಶ್ರೀನಿವಾಸ್ ಗೌಡರ ಸಾವಿಗೆ ಎಲ್ಲೆಡೆ ಕಂಬನಿ ವ್ಯಕ್ತವಾಗುತ್ತಿದೆ. ಶಿವಮೊಗ್ಗದ ಆಸ್ಪತ್ರೆಯಲ್ಲಿ ಮೃತರಾಗಿದ್ದು ಭಾನುವಾರ ರಾತ್ರಿಯೆ ಕೆಟಿಕೆ ಬಳಿ ತಂದು ಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಒಕ್ಕಲಿಗ ಸಮುದಾಯದ ಗಣ್ಯರು, ಒಕ್ಕಲಿಗ ಸಂಘದ ಪದಾಧಿಕಾರಿಗಳು ಸೇರಿ 250ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಂತಾಪ ಸೂಚಿಸಿದರು. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪ್ರಮುಖರಾದ ಆರ್ ಎಂ, ಮದನ್, ಧರ್ಮೇಶ್, ಬಾಳೆಹಳ್ಳಿ ಪ್ರಭಾಕರ್ ಸೇರಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಡ್ತೂರಲ್ಲಿ ಸಂಜೆ ಅಂತ್ಯಕ್ರಿಯೆ

ಮೃತರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದ್ದು ಸಂಜೆ 3:30 ಸುಮಾರಿಗೆ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

ಸಮಾಜಕ್ಕೆ ತುಂಬಲಾರದ ನಷ್ಟ

ತೀರ್ಥಹಳ್ಳಿ ಒಕ್ಕಲಿಗ ಸಮುದಾಯದ ಹಿರಿಯ ನಾಯಕರು, ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷರು, ತಮ್ಮ ಮಾರ್ಗದರ್ಶಕರು ಆದ ಕಡ್ತೂರು ಶ್ರೀನಿವಾಸ ಗೌಡರ ಸಾವು ಸಮುದಾಯ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಮಾರ್ಗದರ್ಶನ ಸಮುದಾಯಕ್ಕೆ ಇನ್ನಷ್ಟು ಅವಶ್ಯಕತೆ ಇತ್ತು. ತಮ್ಮ ಸೌಮ್ಯ ಸ್ವಭಾವದ ಮೂಲಕ ಎಲ್ಲರನ್ನೂ ಪ್ರೀತಿಸುವ ಗುಣದ ಮೂಲಕ ಜನಾನುರಾಗಿ ಆಗಿದ್ದರು. ತೀರ್ಥಹಳ್ಳಿ ಒಕ್ಕಲಿಗ ಸಂಘದ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿ ಸಂಘ ಕಟ್ಟುವಲ್ಲಿ ಶ್ರಮಿಸಿದ್ದ ಗೌಡರದು ಆದರ್ಶಮಯ ಬದುಕು. ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದು, ಹತ್ತಾರು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ಅವರ ಸಾವು ಸಮಾಜಕ್ಕೆ ಮತ್ತು ತೀರ್ಥಹಳ್ಳಿಗೆ ತುಂಬಲಾರದ ನಷ್ಟ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಸಿರಿಬೈಲ್ ಧರ್ಮೇಶ್ ಸಂತಾಪ ಸೂಚಿಸಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ ಸಂತಾಪ

ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷರು ತಮ್ಮ ಮಾರ್ಗದರ್ಶಕರು ಆದ ಕಡ್ತೂರು ಶ್ರೀನಿವಾಸ ಗೌಡರ ನಿಧನಕ್ಕೆ ಶಾಸಕ ಆರಗ ಜ್ಞಾನೇಂದ್ರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಮಾಜ ಕಟ್ಟುವಲ್ಲಿ ತಮ್ಮದೇ ಆದ ಮಹತ್ತರ ಪಾತ್ರ ವಹಿಸಿದ್ದ ಶ್ರೀನಿವಾಸ ಗೌಡರು ತಮ್ಮ ಸೌಮ್ಯ ಸ್ವಭಾವದ ಮೂಲಕ ಎಲ್ಲರನ್ನೂ ಪ್ರೀತಿಸುವ ಗುಣದ ಮೂಲಕ ಜನಾನುರಾಗಿ ಆಗಿದ್ದರು,ನನ್ನ ಸಾರ್ವಜನಿಕ ಬದುಕಿನ ಮಾರ್ಗದರ್ಶಕರಲ್ಲಿ ಒಬ್ಬರಾಗಿ, ತೀರ್ಥಹಳ್ಳಿ ಒಕ್ಕಲಿಗ ಸಂಘದ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿ ಸಂಘ ಕಟ್ಟುವಲ್ಲಿ ಶ್ರಮಿಸಿದ್ದ ಗೌಡರು, ಸಮಾಜ ಮುಖಿಯಾಗಿ ಬದುಕಿದ್ದರು, ನನ್ನೊಂದಿಗೆ ತೀರ್ಥಹಳ್ಳಿ ಕೃಷಿಕರ ಸೌಹಾರ್ದ ಸಹಕಾರಿ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಿದ್ದ ಗೌಡರು, ರಾಜಕೀಯವಾಗಿ ಮೂಲ ಕಾಂಗ್ರೇಸಿಗರೇ ಆಗಿದ್ದರೂ ಅವರೆಂದೂ ನನ್ನನ್ನು ಬೇರೆ ಪಕ್ಷದವನು ಎಂದು ನೋಡಿದವರೇ ಅಲ್ಲಾ ನಮ್ಮೆಲ್ಲಾ ವಿಚಾರಗಳಿಗೆ ಪಕ್ಷ ಮೀರಿ ಸಹಕರಿಸುತ್ತಿದ್ದ ಶ್ರೀನಿವಾಸ ಗೌಡರ ಮರಣ ವೈಯಕ್ತಿಕವಾಗಿ ನನಗೆ, ಸಮಾಜಕ್ಕೆ ಮತ್ತು ಅವರೂರಿಗೆ ತುಂಬಲಾರದ ನಷ್ಟ ಎಂದು ಶಾಸಕ ಆರಗ ಜ್ಞಾನೇಂದ್ರ ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ,

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.