ಗದ್ದೆ ತೋಟಗಳಿಗೆ ನುಗ್ಗಿದ ಕಾಡಾನೆ..!
– ಸಿಂಗನಬಿದಿರೆ ಗ್ರಾಮದಲ್ಲಿ ಆನೆ ದಾಳಿಗೆ ಆತಂಕಗೊಂಡ ಗ್ರಾಮಸ್ಥರು
– ತೋಟದ ಗೇಟು ಪುಡಿಗೈದು ಅಡಿಕೆ ಗಿಡಗಳ ಹಾಳು ಮಾಡಿದ ಕಾಡಾನೆ
– ಆಗುಂಬೆ, ತೀರ್ಥಹಳ್ಳಿಗೂ ಆನೆ ಕಾಟ..!
NAMMUR EXPRESS NEWS
ತೀರ್ಥಹಳ್ಳಿ: ಕಾಡಾನೆಯೊಂದು ಗದ್ದೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ಫಸಲು ಬರುತ್ತಿದ್ದ ಅಡಕೆ ಗಿಡಗಳು, ಭತ್ತ ನೆಲ ಕಚ್ಚಿದೆ. ತೋಟದ ಗೇಟುಗಳನ್ನು ಪುಡಿಗೈದಿದೆ. ತೀರ್ಥಹಳ್ಳಿ ತಾಲೂಕು ಸಿಂಗನಬಿದಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಲೆ ಭಾಗದಲ್ಲಿ ಭಾನುವಾರ ರಾತ್ರಿ ಘಟನೆ ಸಂಭವಿಸಿದೆ. ಕಾಡಾನೆ ದಾಳಿಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ನಿರ್ಮಲಾ, ಯೋಗೀಶ್, ಪದ್ಮಾವತಿ, ಉದಯ ಶೆಟ್ಟಿ, ಪುಷ್ಪಾ ಸೀತಾಲಕ್ಷ್ಮೀ ಅವರ ಗದ್ದೆ ತೋಟಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ತೀರ್ಥಹಳ್ಳಿ ತಾಲೂಕಲ್ಲಿ ಆನೆ ಕಾಟ!
ತೀರ್ಥಹಳ್ಳಿ ತಾಲೂಕಿನಲ್ಲಿ ಆನೆಗಳ ಕಾಟ ಹೆಚ್ಚಾಗಿದೆ. ಆಗುಂಬೆ ಭಾಗದ ಮಲ್ಲಂದೂರು ಭಾಗದಲ್ಲಿ ಕಳೆದ ಒಂದು ದಶಕದಿಂದ ಒಂಟಿ ಸಲಗದ ಕಾಟ ಹೆಚ್ಚಿರುವ ನಡುವೆ ಇತ್ತೀಚೆಗೆ ಹೆಬ್ರಿ ಭಾಗದ ಆಗುಂಬೆ ಭಾಗದಲ್ಲೂ ಕೂಡ ಆನೆಗಳ ಕಾಟ ಹೆಚ್ಚಾಗಿದ್ದು ಇದರಿಂದ ಜನ ಭಯಭೀತರಾಗಿದ್ದರು. ರೈತರು ಕಂಗಾಲಾಗಿದ್ದರು. ಇನ್ನು ಶೇಡ್ಗಾರು, ದೇವಂಗಿ, ತೀರ್ಥಹಳ್ಳಿ ಪಟ್ಟಣಕ್ಕೂ ಈ ಬಾರಿ ಒಂದು ಆನೆ ಬಂದಿದ್ದು ಅದನ್ನು ಬೇರೆ ಕಡೆ ಕಳಿಸಲು ಅರಣ್ಯ ಇಲಾಖೆ ಹರ ಸಾಹಸ ಪಟ್ಟಿದ್ದರು. ಇದೀಗ ತೀರ್ಥಹಳ್ಳಿಯ ಮತ್ತೊಂದು ಕಡೆ ಆನೆಕಾಟ ಶುರುವಾಗಿದೆ. ಒಟ್ಟಿನಲ್ಲಿ ಆನೆ ಕಾಟ ತೀರ್ಥಹಳ್ಳಿಯ ರೈತರು ಮತ್ತು ಜನರನ್ನು ಕಂಗೆಡಿಸಿದೆ.