Categories
ತೀರ್ಥಹಳ್ಳಿ

ತೀರ್ಥಹಳ್ಳಿ ಚರ್ಚ್ ವತಿಯಿಂದ ಪರಿಸರ ದಿನಾಚರಣೆ

ತೀರ್ಥಹಳ್ಳಿ ಚರ್ಚ್ ವತಿಯಿಂದ ಪರಿಸರ ದಿನಾಚರಣೆ
– ಪರಿಸರ ಜಾಗೃತಿ ಕಾರ್ಯಗಾರ ಹಾಗೂ ಗಿಡಗಳ ಉಚಿತ ವಿತರಣೆ
– ಮಕ್ಕಳಿಗೆ ಪರಿಸರ ಜಾಗೃತಿ: ಉಚಿತವಾಗಿ ಗಿಡಗಳ ವಿತರಣೆ

NAMMUR EXPRESS NEWS 
ತೀರ್ಥಹಳ್ಳಿ: ತೀರ್ಥಹಳ್ಳಿಯ ಲೂರ್ದುಮಾತೆಯ ದೇವಾಲಯದ 125ನೇ ಜ್ಯೂಬಿಲಿ ವರ್ಷದಲ್ಲಿ ಮತ್ತೊಂದು ಅರ್ಥಪೂರ್ಣ ಕಾರ್ಯಕ್ರಮ ಭಾನುವಾರ ಪರಿಸರ ದಿನಾಚರಣೆ ಅಂಗವಾಗಿ ‘ಪರಿಸರ ಜಾಗೃತಿ ಕಾರ್ಯಗಾರ’ವನ್ನು ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ‘ಕಥೋಲಿಕ್ ಅಸೋಸಿಯೇಷನ್’ ಸಂಘಟನೆ ಹಾಗೂ ‘ಶ್ರೀ ಸಾಮಾನ್ಯರು ಮತ್ತು ಪರಿಸರ ಆಯೋಗ’ ಕಾರ್ಯಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟವು.
ಹಿಂದೊಮ್ಮೆ ಕೃಷಿ ಕುಟುಂಬಗಳೇ ಹೆಚ್ಚಾಗಿದ್ದ ತೀರ್ಥಹಳ್ಳಿಯ ಕ್ರೈಸ್ತ ಸಮುದಾಯದ ಇಂದಿನ ಮಕ್ಕಳು ಅಧುನಿಕತೆಯ ವೇಗದಲ್ಲಿ ಪರಿಸರದಿಂದ ದೂರವಾಗುತ್ತಿರುವುದನ್ನು ಮನಗಂಡು, ಲೂರ್ದುಮಾತೆಯ ದೇವಾಲಯದ ಗುರುಗಳಾದ ವಂದನೀಯ ವೀರೇಶ್ ವಿಕ್ಟರ್ ಮೋರಸ್ ರವರು ‘ಪರಿಸರ ಜಾಗೃತಿ ಕಾರ್ಯಗಾರ’ ದ ಮೂಲಕ ಮಕ್ಕಳಲ್ಲಿ ಪರಿಸರದ ಕುರಿತು ಕುತೂಹಲ ಹಾಗೂ ಕಳಕಳಿ ಮೂಡಿಸುವ ವಿಭಿನ್ನ ಪ್ರಯೋಗಕ್ಕೆ ನಾಂದಿ ಹಾಡಿದರು. ಯೂನಿಟ್ ಹಾಲ್ ನಲ್ಲಿ ಪ್ರಾರ್ಥನೆಯ ಬದಲಾಗಿ ಪರಿಸರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡರೆ, ಮನೆಯೊಳಗೂ ಬೆಳಸಬಹುದಾದ ಹಾಗೂ ಅತಿ ಹೆಚ್ಚು ಅಮ್ಲಜನಕ ಸೂಸುವ ‘ಚೈನಾಡಾಲ್’ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೊಪ್ಪ ವಲಯದ ‘ವಲಯ ಅರಣ್ಯಾಧಿಕಾರಿ’ ಗಳಾದ ಶ್ರೀ ಆದರ್ಶ್.ಎಂ.ಪಿ ಇವರು ಆಗಮಿಸಿದ್ದರು. ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಇವರು, ಈ ವರ್ಷದ ಪರಿಸರ ದಿನದ ಘೋಷ ವಾಕ್ಯವಾದ ‘ಬೀಟ್ ದಿ ಪ್ಲಾಸ್ಟಿಕ್’ ಅಂದರೆ ಪ್ಲಾಸ್ಟಿಕ್ ಮಾಲಿನ್ಯವನ್ನು ಹೊಡೆದೋಡಿಸುವುದು ಎಷ್ಟು ತುರ್ತಾಗಿ ಆಗಬೇಕಾಗಿದೆ ಎಂಬುದನ್ನು ವಿವರಿಸಿದರು. ಜಪಾನ್ ನ ಮಾದರಿಯಲ್ಲಿ ಮನೆಯ ಸುತ್ತಮುತ್ತ ಅಥವಾ ಬಡಾವಣೆಗಳಲ್ಲಿ ಇರುವ ಕೆಲವೇ ಅಡಿಗಳಷ್ಟು ಜಾಗದಲ್ಲಿ ಪುಟ್ಟ ಕಾಡುಗಳನ್ನು ಬೆಳಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡುವಂತೆ ಕರೆ ನೀಡಿದರು. ಇಲಾಖೆಯಲ್ಲಿನ ತಮ್ಮ ಗುರುತರ ಸೇವೆಗಾಗಿ 2024ನೇ ಸಾಲಿನ ಮುಖ್ಯ ಮಂತ್ರಿ ಪದಕ ಪಡೆದಿರುವ ಶ್ರೀಯುತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕ್ರೈಸ್ತ ಸಮುದಾಯದ ಎಲ್ಲಾ ಮಕ್ಕಳು ತಮ್ಮ ಪೋಷಕರೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗುರುಗಳಾದ ವೀರೇಶ್ ವಿಕ್ಟರ್ ಮೋರಸ್ ರವರು ಬೈಬಲ್ ನಲ್ಲಿ ಪರಿಸರ ಸಂರಕ್ಷಣೆಗೆ ಅತಿ ಹೆಚ್ಚು ಪ್ರಾತಿನಿಧ್ಯವನ್ನು ನೀಡಲಾಗಿದೆ ಎಂಬುದನ್ನು ಉಲ್ಲೇಖಿಸಿ ವಿವರಿಸಿದರು. ಪ್ರಕೃತಿಯನ್ನು ಪ್ರೀತಿಸುವ ಅದನ್ನು ರಕ್ಷಿಸುವ ಹೊಣೆಯನ್ನು ದೇವರು ಮಾನವನಿಗೆ ನೀಡಿದ್ದಾರೆಂಬುದನ್ನು ತಿಳಿಸಿದರು.
ಬಂದಿದ್ದ ಎಲ್ಲರಿಗೂ ವಿವಿಧ ಜಾತಿಯ ಗಿಡಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಥೋಲಿಕ ಅಸೋಸಿಯೇಷನ್ ಉಪಾಧ್ಯಕ್ಷರಾದ ಶ್ರೀಮತಿ ಆಶಾ ಡ್ಯಾನಿಯೆಲ್ ಕಾರ್ಯಕ್ರಮವನ್ನು ಉತ್ತಮವಾಗಿ ನಿರೂಪಿಸಿದರು. ಸಹಾಯಕ ಗುರುಗಳಾದ ವಂ.ಫಾ|| ಮಿಲ್ಟನ್, ಅಸಿಸ್ಸಿ ಕಾನ್ವೆಂಟ್ ನ ಸಿಸ್ಟರ್ಸ್, ‘ಕಥೋಲಿಕ್ ಅಸೋಸಿಯೇಷನ್’ ಅಧ್ಯಕ್ಷರೂ ‘ಶ್ರೀ ಸಾಮಾನ್ಯರು ಮತ್ತು ಪರಿಸರ ಆಯೋಗʼದ ಸಂಯೋಜಕರೂ ಆಗಿರುವ ಶ್ರೀ ಅನಿಲ್ ಡಿʼಸೋಜ, ಪಾಲನಾ ಪರಿಷತ್ ಕಾರ್ಯದರ್ಶಿ ಶ್ರೀ ಓವಿನ್ ಡಿʼಸೋಜ, ಆರ್ಥಿಕ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸಿಲ್ವಿಯಾ ರೇಗೋ, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.