ಎಲೆ ಚುಕ್ಕಿ ರೋಗಕ್ಕೆ ಹೆದರಿ ರೈತ ಆತ್ಮಹತ್ಯೆ!
– ತೀರ್ಥಹಳ್ಳಿ ತಾಲೂಕಿನ ದಂಡಿನಮನೆ ಬಳಿ ಘಟನೆ
– ವಿಷ ಸೇವಿಸಿ ಮಂಗಳೂರು ಆಸ್ಪತ್ರೆಯಲ್ಲಿ ಸಾವು
– ಸಾಲ ಬಾಧೆ: ಕಡೂರಿನಲ್ಲಿ ಯುವ ರೈತ ಆತ್ಮಹತ್ಯೆ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡನ್ನು ಕಾಡುತ್ತಿರುವ ಎಲೆ ಚುಕ್ಕಿ ರೋಗದಿಂದ ಈಗಾಗಲೇ ಅನೇಕ ರೈತರು ಜೀವ ಕಳೆದುಕೊಂಡಿದ್ದಾರೆ. ಈ ನಡುವೆ ತೀರ್ಥಹಳ್ಳಿಯಲ್ಲಿ ಸಣ್ಣ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಸಹಳ್ಳಿ ಗ್ರಾಮ ಪಂಚಾಯತ್ ದಂಡಿನಕೊಡಿಗೆ ಗ್ರಾಮದ ನಾರಾಯಣ ಪೂಜಾರಿ (68 ವರ್ಷ ) ಮೃತ ಸಣ್ಣ ರೈತ.
ಅರ್ಧ ಎಕರೆ ಜಮೀನು ಇದ್ದು 3 ಗಂಡು ಮಕ್ಕಳಿದ್ದಾರೆ. ಎಲೆ ಚುಕ್ಕಿ ರೋಗದಿಂದ ಬೇಸತ್ತು ಜೀವನದಲ್ಲಿ ನೊಂದು ವಿಷ ಸೇವಿಸಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.
ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ
ಚಿಕ್ಕಮಗಳೂರು: ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಿರೇನಲೂರು ಹೋಬಳಿಯ ಕೇದಿಗೆರೆ ಗ್ರಾಮದಲ್ಲಿ ನಡೆದಿದೆ. ಮಂಜುನಾಥ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಮಂಜುನಾಥ ತನ್ನ ತಂದೆಗೆ ಸೇರಿದ 2 ಎಕರೆ ಜಮೀನಿನಲ್ಲಿ, ವ್ಯವಸಾಯ ಮಾಡಿಕೊಂಡಿದ್ದ ಇತ್ತೀಚೆಗೆ ಸೂರ್ಯಕಾಂತಿ, ನೆಲಗಡಲೆ, ಈರುಳ್ಳಿ ಬೆಳೆಯಲು ವಿವಿಧ ಬ್ಯಾಂಕ್ ಹಾಗೂ ಫೈನಾನ್ಸ್ ಮತ್ತಿತರ ಕಡೆಗಳಲ್ಲಿ ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದ, ಬೆಳೆ ಸರಿಯಾಗಿ ಬರದ ಕಾರಣ ಮನನೊಂದು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪತ್ನಿ ರೇಣುಕಮ್ಮ ನೀಡಿದ ದೂರಿನ ಆಧಾರದಲ್ಲಿ ಯಗಟಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಶವಪರೀಕ್ಷೆ ನಡೆಸಿ ವರದಿ ನೀಡಿದ್ದಾರೆ.