ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ತಯಾರಕರ ಉಗ್ರ ಪ್ರತಿಭಟನೆ!
– ಅಳಲು ತೋಡಿಕೊಂಡು ತೀರ್ಥಹಳ್ಳಿಯಲ್ಲಿ ಮುಷ್ಕರ
ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ಸಲ್ಲಿಸಿದ ಮಹಿಳೆಯರ ದಂಡು!
NAMMUR EXPRESS NEWS
ತೀರ್ಥಹಳ್ಳಿ: ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ತೀರ್ಥಹಳ್ಳಿ ಸಮಿತಿಯಿಂದ ಜ. 13ರಂದು ಸೋಮವಾರ ಉಗ್ರ ಪ್ರತಿಭಟನೆ ನಡೆಯಿತು. ಕುಶಾವತಿ ಪಾರ್ಕ್ ನಿಂದ ಹೊರಟ ಪ್ರತಿಭಟನೆ ಬಿಸಿಯೂಟ ತಯಾರಿಸುವ ಮಹಿಳೆಯರು ಆಗುಂಬೆ ಸ್ಟಾಂಡ್ನಲ್ಲಿ ಪ್ರತಿಭಟನೆ ನಡೆಸಿ ಮೆರವಣಿಗೆಯ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ ತಹಶೀಲ್ದಾರ್ ಕಚೇರಿಯ ಮ್ಯಾನೇಜರ್ಗೆ ಮನವಿ ಪತ್ರ ನೀಡಿದರು. 2025-2026 ರ ಬಜೆಟ್ ನಲ್ಲಿ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಕರೆಯ ಮೇರೆಗೆ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿದಂತೆ ಕಿರಿಯ/ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕ ಮಹಿಳೆಯರು ಅತ್ಯಂತ ಕಡಿಮೆ ಗೌರವ ಸಂಭಾವನೆಗೆ ದುಡಿಯುತ್ತಿದ್ದಾರೆ.
ಮುಖ್ಯ ಅಡುಗೆಯವರಿಗೆ ಮಾಸಿಕ ರೂಪಾಯಿ 3,700/- ಹಾಗೂ ಸಹಾಯಕ ಅಡುಗೆಯವರಿಗೆ ರೂಪಾಯಿ 3600/- ಮಾತ್ರ ಗೌರವ ಸಂಭಾವನೆ ಬರುತ್ತಿದ್ದು, ಇದರಿಂದ ಬಿಸಿಊಟ ತಯಾರಕರು ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಇವರಿಗೆ 2025- 26 ರ ಬಜೆಟ್ ನಲ್ಲಿ ವೇತನ ಹೆಚ್ಚಳ ಮಾಡುವುದು, ಮರಣ ಪರಿಹಾರ ಜಾರಿಗೊಳಿಸುವುದು, ನಿವೃತ್ತರಾದವರಿಗೆ ಇಡುಗಂಟು ಹಣವನ್ನು ಕನಿಷ್ಠ 2 ಲಕ್ಷ ರೂಪಾಯಿಗೆ ಏರಿಸುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು 2025-2026 ರ ಬಜೆಟ್ ನಲ್ಲಿ ಜಾರಿಗೊಳಿಸಬೇಕೆಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸುವುದರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಬಿಸಿಯೂಟ ತಯಾರಕರ ಬೇಡಿಕೆಗಳಾವುವು?
ವೇತನ ಹೆಚ್ಚಳದ ಆರನೇ ಗ್ಯಾರಂಟಿ ಜಾರಿಗಾಗಿ,ಇಡುಗಂಟು ಹಣ ಜಾರಿಗಾಗಿ, ಮರಣ ಪರಿಹಾರ, ಆಸ್ಪತ್ರೆ ಚಿಕಿತ್ಸೆ ವೆಚ್ಚ, ಈ ಮೊದಲು ಇದ್ದಂತೆ ಬ್ಯಾಂಕ್ ಜಂಟಿ ಖಾತೆ ಮುಂದುವರಿಸಿ ಎಂದು ವಿನಂತಿ ಮಾಡಿ, (ಗ್ರಾಚುಯಿಟಿ) ಉಪಧನ ಜಾರಿಗೊಳಿಸಿ, ಮೊಟ್ಟೆ ಸುಲಿಯುವ ಭತ್ಯೆ ಹೆಚ್ಚಿಸಿ, 5ನೇ ತಾರೀಖಿಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳಿ, ವಿನಾಃ ಕಾರಣ ಕಿರುಕುಳ ನಿಲ್ಲಿಸಿ, ಬರಗಾಲ ಕಾರ್ಯಕ್ರಮದ ವೇತನ ಪಾವತಿಯಾಗಿರುವುದಿಲ್ಲ ಎಂಬ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ಈಗ ಇರುವ ವೇತನಕ್ಕೆ ಬದಲಾಗಿ ಮಾಸಿಕ 6,000 ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಮತ್ತು ಇದನ್ನು 6ನೇ ಗ್ಯಾರಂಟಿಯಾಗಿ ಘೋಷಣೆ ಮಾಡುತ್ತಿದ್ದು, ಪ್ರಿಯಾಂಕ ಗಾಂಧಿಯವರು ನೀಡಿದ ಭರವಸೆಯಂತೆ ಬಿಸಿಯೂಟ ತಯಾರಕರಿಗೆ ವೇತನವನ್ನು ಮಾಸಿಕ 6,000 ರೂಪಾಯಿಗೆ ಏರಿಸಿ ಜಾರಿಗೊಳಿಸಬೇಕು.
ಎಂದು ಮನವಿ ಪತ್ರ ಸಲ್ಲಿಸುವ ಮೂಲಕ ಬೇಡಿಕೆಯನ್ನಿಟ್ಟರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಪರಮೇಶ ಹೊಸಕೊಪ್ಪ, ತಾಲ್ಲೂಕು ಅಧ್ಯಕ್ಷರು ಆಶಾ, ಕಾರ್ಯದರ್ಶಿ ಕಲಾವತಿ, ಉಪಕಾರ್ಯದರ್ಶಿ ಕಲಾವತಿ, ಉಪಾಧ್ಯಕ್ಷರು ವಿನಂತಿ, ಸಹ ಕಾರ್ಯದರ್ಶಿ ಶೋಭಾ, ಹಾಗೂ ಖಜಾಂಚಿ ಪದ್ಮಾವತಿಯವರು ಭಾಗವಹಿಸಿದ್ದರು.
