ಅರಣ್ಯ ಒತ್ತುವರಿ ಇನ್ನು ಸಲೀಸಲ್ಲ: ಒತ್ತುವರಿ ಖಚಿತ!
– ತೀರ್ಥಹಳ್ಳಿ ಭಾರತಿಪುರ ಬಳಿ ರೆಸಾರ್ಟ್ ಒತ್ತುವರಿ ಜಾಗ ತೆರವು
– ಆಗುಂಬೆ, ಆಯನೂರು, ಮೇಗರವಳ್ಳಿ, ಕುರುವಳ್ಳಿ ಭಾಗದಲ್ಲೂ ತೆರವು
– ಗ್ರಾಮ ಮಟ್ಟದಲ್ಲಿ ಅಕ್ರಮ ತೆರವು ಶುರು?
NAMMUR EXPRESS NEWS
ತೀರ್ಥಹಳ್ಳಿ: ಅಕ್ರಮ ಒತ್ತುವರಿ ತೆರವು ಮುಂದಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಥಹಳ್ಳಿ ತಾಲೂಕಿನ ಭಾರತೀಪುರದ ತುಂಗಾ ನದಿ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಎಂಬ ಖಾಸಗಿ ರೆಸಾರ್ಟ್ ಸೇರಿದ ಅಂದಾಜು 2.20 ಎಕರೆ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. ಇದಲ್ಲದೆ ಹತ್ತಾರು ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ನೋಟಿಸ್ ನೀಡಲಾಗಿದೆ.
ಭಾರತೀಪುರ ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಕಂಬ ತಂತಿ ಬೇಲಿ ನಿರ್ಮಿಸಿ ಅಡಿಕೆ ಕಾಫಿ ಇನ್ನಿತರೆ ಬೆಳೆ ಬೆಳೆದಿದ್ದು, ಅಲ್ಲದೆ ಮನೆ ಮತ್ತು ಇತರೆ ಕಟ್ಟಡಗಳನ್ನು ನಿರ್ಮಿಸಿ ಕಾನೂನು ಬಾಹಿರ ಒತ್ತುವರಿ ಮಾಡಿಕೊಂಡಿದ್ದರು. ಡಿಸಿಎಫ್‌ಒ ನೇತೃತ್ವದಲ್ಲಿ ವಿಹಂಗಮ ಹಾಲಿಡೇ ರೆಸಾರ್ಟ್ ಪ್ರದೇಶದ ಅಂದಾಜು 2.20 ಎಕರೆ ಅಕ್ರಮ ಒತ್ತುವರಿಯನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.
ಆಗುಂಬೆ ವಲಯದಲ್ಲಿ ಒತ್ತುವರಿ ತೆರವು ಶುರುವಾಗಿದೆ
ಆಗುಂಬೆ ವಲಯಾರಣ್ಯ ವ್ಯಾಪ್ತಿಯ ಆಲಗೇರಿ, ಬಿದರಗೋಡು ಗ್ರಾಮದಲ್ಲಿ ಒಟ್ಟು 2 ಪ್ರಕರಣದ 13.24 ಎಕರೆ, ಮಂಡಗದ್ದೆ ವಲಯಾರಣ್ಯ ವ್ಯಾಪ್ತಿಯ ಕುಡುವಳ್ಳಿ ಗ್ರಾಮದ 6 ಎಕರೆ, ತೀರ್ಥಹಳ್ಳಿ ವಲಯಾರಣ್ಯ ವ್ಯಾಪ್ತಿಯ ಭಾರತೀಪುರ, ಮೇಲಿನಕುರುವಳ್ಳಿ ಗ್ರಾಮದ 3 ಸ್ಥಳದಲ್ಲಿ ಒಟ್ಟು 7.20 ಎಕರೆ, ಆಯನೂರು ವಲಯಾರಣ್ಯ ವ್ಯಾಪ್ತಿಯ ಗುಂಡಿಚಟ್ನಳ್ಳಿ ಗ್ರಾಮದ 2 ಎಕರೆ ಒತ್ತುವರಿಯನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.