ವಾಗ್ದೇವಿ ಪಿ.ಯು ಕಾಲೇಜಿನ ಫ್ರೆಶರ್ ಡೇ ನವೀನತೆಗೆ ಸಾಕ್ಷಿ!
– ಮೊಬೈಲ್, ಇಂಟರ್ನೆಟ್ ಬಳಕೆ ಬಗ್ಗೆ ಅನಂತ ಪ್ರಭು ಟೆಕ್ ಪಾಠ
– ವಿದ್ಯಾರ್ಥಿಗಳಿಗೆ ಜ್ಞಾನದ ಹರಿವು: ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್
NAMMUR EXPRESS NEWS
ತೀರ್ಥಹಳ್ಳಿ : ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವುದು ಎಲ್ಲಾ ಕಾಲೇಜುಗಳಲ್ಲಿ ಸರ್ವೇ ಸಾಮಾನ್ಯ. ಆದರೆ ತೀರ್ಥಹಳ್ಳಿಯ ವಾಗ್ಗೇವಿ ಪಿಯು ಕಾಲೇಜಿನಲ್ಲಿ ವಿನೂತನ ರೀತಿಯಲ್ಲಿ ಪ್ರಥಮ ಪಿ ಯು ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಬೆಳೆಯುತ್ತಿರುವ ನಾಗರಿಕ ಸಮಾಜದ ಮಧ್ಯದಲ್ಲಿ ಈಗ ತಾನೆ ನಾಗರಿಕತ್ವವನ್ನು ಪಡೆದುಕೊಳ್ಳಲಿರುವ ವಿದ್ಯಾರ್ಥಿಗಳನ್ನು ಗುರಿಯಲ್ಲಿಟ್ಟುಕೊಂಡು ಅವರ ಜವಾಬ್ದಾರಿಗಳನ್ನು ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕೆ ಅವರ ಸಹಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಹಾಗೂ ದಿಕ್ಕೂಚಿ ಭಾಷಣಕಾರರಾಗಿ ಆಗಮಿಸಿದ್ದ ಉಪನ್ಯಾಸಕರು ಹಾಗೂ ಸೈಬರ್ ಸೆಕ್ಯೂರಿಟಿ ಎಕ್ಸ್‌ರ್ಟ್ ಮತ್ತು ಸೈಬರ್ ಲಾ ಟ್ರೈನರ್ ಆಗಿರುವ ಡಾ. ಅನಂತ ಪ್ರಭು ಜಿ ಇವರು, ಹದಿಹರೆಯದ ಯುವಕ-ಯುವತಿಯರು ಅತಿಯಾಗಿ ಬಳಸುವ ಮೊಬೈಲ್ ಮತ್ತು ಇಂಟರ್ನೆಟ್ ಕುರಿತಾಗಿ ಅತ್ಯಮೂಲ್ಯವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಅದರ ಅನನುಕೂಲತೆಗಳನ್ನು ಸೂಕ್ಷ್ಮವಾಗಿ ತಿಳಿಸಿದರು.
ಸೈಬರ್ ಕ್ರೈಮ್ ಎನ್ನುವುದರ ಕುರಿತಂತೆ ಡೆಬಿಟ್ – ಕ್ರೆಡಿಟ್ ಕಾರ್ಡ್ ಗಳನ್ನು ಯಾವ ರೀತಿ ಬಳಸಬೇಕೆಂದು, ಆಧಾರ್ ಕಾರ್ಡ್ ಬಗ್ಗೆ ಅರಿವು ಮುಂತಾದ ವಿಷಯಗಳನ್ನು ಸವಿಸ್ತಾರವಾಗಿ ಉದಾಹರಣೆ ಸಹಿತ ವಿವರಿಸಿದರು. ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಗಳಿಂದಾಗಿ ಆಗುತ್ತಿರುವ ಅಪರಾಧ, ಅನಾಹುತ ಮತ್ತು ಅನ್ಯಾಯಗಳ ವಿರುದ್ಧ ಇಂದಿನ ಯುವಕ ಯುವತಿಯರು ಹೇಗೆ ಜಾಗರೂಕರಾಗಿರಬೇಕು, ಅವುಗಳನ್ನು ಯಾವ ರೀತಿಯಲ್ಲಿ ಬಳಸಬೇಂಕೆಂಬುದರ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಪಥ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಜಗದೀಶ್ ಕೆ.ಎಸ್ ವಹಿಸಿದ್ದರು.
ಉದ್ಘಾಟನೆಯನ್ನು ಟ್ರಸ್ಟ್ ನ ಕಾರ್ಯದರ್ಶಿಗಳಾದ ಆರ್.ಮದನ್ ನೆರವೇರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಪೂರ್ವಿತಾ ನಿರಂಜನ್, ಖಜಾಂಚಿಗಳಾದ ಶಶಿಧರ್ ಹೆಚ್.ಪಿ, ಸದಸ್ಯರಾದ ಬಿ.ಎಂ ಕೃಷಮೂರ್ತಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಮಮತಾ ಶಿವಕುಮಾರ್ ಉಪಸ್ಥಿತರಿದ್ದರು. ಕುಮಾರಿ ಶ್ರದ್ದಾ ಎ ಹಾಗೂ ಸಿಂಚನಾ ಹೆಚ್, ಕಾರ್ಯಕ್ರಮವನ್ನು ನಿರೂಪಿಸಿ, ನಿಧಿ ಎಸ್ ಪ್ರಾರ್ಥಿಸಿ, ಶಾರಂಘ್ರವ ಜವಳಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಭಿನ್ನ ಕಾರ್ಯಕ್ರಮ ಮಕ್ಕಳ ಗಮನ ಸೆಳೆಯಿತು.
