Categories
ತೀರ್ಥಹಳ್ಳಿ ವಿಶೇಷ ಸುದ್ದಿ

ಅಂತ್ಯದಿಂದ ಅಗ್ರಸ್ಥಾನಕ್ಕೆ: ಸರ್ಕಾರಿ ಶಾಲೆಯ ಅಚ್ಚರಿ ಪಯಣ!

ಅಂತ್ಯದಿಂದ ಅಗ್ರಸ್ಥಾನಕ್ಕೆ: ಸರ್ಕಾರಿ ಶಾಲೆಯ ಅಚ್ಚರಿ ಪಯಣ!
* ಅಂದು ಮರೆಯಾಗುತ್ತಿದ್ದ ಹಿರೇಕಲ್ಲಹಳ್ಳಿ ಶಾಲೆ, ಇಂದು ಮಾದರಿ ಶಾಲೆ
* ಶಿಕ್ಷಕಿಯ ಶ್ರಮದಿಂದ ಶಾಲೆಗೆ ಪುನರ್ಜನ್ಮ: ಮೂಕಾಂಬಿಕಾ ಶೆಟ್ಟಿ ಪ್ರಶಸ್ತಿ ಗರಿ

ಶಿಕ್ಷಕರ ದಿನದ ವಿಶೇಷ

ವರದಿ: ಉಮೇಶ್ ದೇಮ್ಲಾಪುರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರೇಕಲ್ಲಹಳ್ಳಿ ಶಾಲೆಯನ್ನು ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆಯ ದಿನದಂದು ತಾಲೂಕು ಉತ್ತಮ ಕಿರಿಯ ಪ್ರಾಥಮಿಕ ಶಾಲೆ ಎಂದು ಗುರುತಿಸಲಾಗಿದೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರೇಕಲ್ಲಹಳ್ಳಿ 1962ರಲ್ಲಿ ಪ್ರಾರಂಭಗೊಂಡು ಅನೇಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾ ದಾನವನ್ನು ನೀಡಿದ ದೇಗುಲವಾಗಿದೆ, ಈ ಪ್ರಾಥಮಿಕ ಶಾಲೆಯಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ಮಹೋನ್ನತವಾದ ಸಾಧನೆಯನ್ನು ಮಾಡಿದ್ದಾರೆ. ಕೆಲವರು ಯಾವುದೇ ರೀತಿಯ ಸಾಧನೆ ಮಾಡದಿದ್ದರೂ ತಮ್ಮ ಜೀವನವನ್ನು ಸುಂದರಗೊಳಿಸಿಕೊಳ್ಳಲು ಈ ಪ್ರಾಥಮಿಕ ಶಾಲೆಯು ಒಂದು ಚಿರಸ್ಮರಣೀಯ ಮೆಟ್ಟಿಲಾಗಿದೆ.
ಕ್ರಮೇಣ ಈ ಪ್ರಾಥಮಿಕ ಶಾಲೆಗೆ ಶಿಕ್ಷಕರ ಕೊರತೆಯಿಂದ ಹಾಗೂ ಖಾಸಗಿ ಶಾಲೆಗಳ ಅಂದ ವ್ಯಾಮೋಹದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣದತ್ತ ಮುಖ ಮಾಡುತ್ತಿದ್ದರು.ಇರುವ ವಿದ್ಯಾರ್ಥಿಗಳು ವಿದ್ಯೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹಾಗೂ ಶಾಲೆಯು ಸ್ವಚ್ಛತೆಯಲ್ಲಿ ಬಹಳಷ್ಟು ಹಿಂದುಳಿದಿತ್ತು.
ಇಂತಹ ಸಮಯದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರೇಕಲ್ಲಳ್ಳಿಗೆ 2023 ರಲ್ಲಿ ಶಿರಸಿಯ ಹೆಬ್ಬಾಳ ಗದ್ದೆಯಿಂದ ವರ್ಗಾವಣೆಗೊಂಡ ಮೂಕಾಂಬಿಕಾ ಶೆಟ್ಟಿ ಎಂಬ ಶಿಕ್ಷಕಿ ಇಲ್ಲಿ ಕೇವಲ 11 ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಪ್ರಾರಂಭಿಸಿದರು. ತಮ್ಮ ಚಾಕಚಕ್ಯತೆಯಿಂದ ಹಾಗೂ ತನಗಿರುವ ಜ್ಞಾನದಿಂದ ಮಕ್ಕಳನ್ನು ಆಕರ್ಷಿಸಲು ಪ್ರಾರಂಭಿಸಿದರು. ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಮೂಲಕ ಗ್ರಾಮದ ಪೋಷಕರ ಹಾಗೂ ಹಳೆಯ ವಿದ್ಯಾರ್ಥಿಗಳ ನೆರವು ಮತ್ತು ಅವರು ಹಿಂದೆ ಬೋಧಿಸಿದ ವಿದ್ಯಾರ್ಥಿಗಳ ನೆರವು ಪಡೆದು ಶಾಲೆಯನ್ನು ಉತ್ತಮ ಅಭಿವೃದ್ಧಿಗೊಳಿಸಿದ್ದಾರೆ. ಹಾಗೂ ಹಲವು ದಾನಿಗಳನ್ನು ಸಂದರ್ಶಿಸಿ ಶಾಲೆಗೆ ದಾನಿಗಳು ನೆರವಾಗುವಂತೆ ಮಾಡಿದ್ದಾರೆ. ಈಗ ಶಾಲೆಯ ಸದೃಢ ಅಭಿವೃದ್ಧಿಯೊಂದಿಗೆ ಮಕ್ಕಳ ಆಟ ಪಾಠದಲ್ಲಿ ಸಾಂಸ್ಕೃತಿ ಕಾರ್ಯಕ್ರಮಗಳಲ್ಲೂ ಮುಂಚಣೆಗೆ ಬರುವಂತೆ ಈ ಗೌರವಾನ್ವಿತ ಶಿಕ್ಷಕಿಯು ಕಾರ್ಯನಿರ್ವಹಿಸಿದ್ದಾರೆ.
ರಮ್ಯ ರಮಣೀಯವಾಗಿ ಇರುವ ಪ್ರಕೃತಿ ಸೌಂದರ್ಯದ ಮಧ್ಯೆ ಕುವೆಂಪುವಿನ ಕವಿಶೈಲವನ್ನು ಹೋಲುವ ವಿದ್ಯಾ ಮಂದಿರದಲ್ಲಿ ಪ್ರಸ್ತುತ ಸ್ವಗ್ರಾಮದಿಂದ ಹಾಗೂ ಅಕ್ಕ ಪಕ್ಕದ ಗ್ರಾಮಗಳಿಂದಲೂ ಹಲವು ವಿದ್ಯಾರ್ಥಿಗಳನ್ನು ಈ ಶಾಲೆ ಆಕರ್ಷಿಸಿದೆ. ಖಾಸಗಿ ಶಾಲೆಗಳತ್ತ ಮುಖ ಮಾಡುವ ಪೋಷಕರುಗಳು ಇಂತಹ ಶಾಲೆಯ ಕಡೆ ಒಮ್ಮೆ ತಿರುಗಿ ನೋಡುವಂತೆ ಮಾಡಿದೆ. ಈ ಶಾಲೆಗೆ ಕಳೆದ ಹಲವು ವರ್ಷಗಳಿಂದ ಶಾಸಕರು, ಉನ್ನತ ಅಧಿಕಾರಿಗಳು ಒಮ್ಮೆಯೂ ಭೇಟಿ ನೀಡಲಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನ. ಜನ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಇಲ್ಲಿನ ಕುಂದು ಕೊರತೆಗಳನ್ನು ನಿವಾರಿಸಲು ಪ್ರಯತ್ನ ಪಡಬೇಕು, ಆಗ ಇಂತಹ ಸಾವಿರಾರು ಸರಕಾರಿ ಶಾಲೆಗಳು ಉಳಿಯುತ್ತವೆ. ಬಡ ಮಧ್ಯಮ ವರ್ಗದ ಮಕ್ಕಳಿಗೆ ಜ್ಞಾನ ನೀಡುತ್ತವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.