ಸರ್ಕಾರಿ ಆಸ್ಪತ್ರೆ ಗುತ್ತಿಗೆ ನೌಕರರಿಗೆ ಸಿಗದ ಸಂಬಳ..!
– ಸಾಲ ಮಾಡಿ ಬದುಕು ಸಾಗಿಸುವ ದುಸ್ಥಿತಿ
– ಆಸ್ಪತ್ರೆಯಲ್ಲಿ ಎಲ್ಲಾ ಕೆಲಸ ಇವರದ್ದೇ..ಆದ್ರೆ ಸೌಲಭ್ಯ ಇಲ್ಲ
– ಶಿಕ್ಷಣ ಸಚಿವರ ತವರಲ್ಲಿ 4 ತಿಂಗಳಿಂದ ಸಂಬಳ ಇಲ್ಲ!
NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಗುತ್ತಿಗೆ ಸಿಬ್ಬಂದಿಗೆ 4 ತಿಂಗಳಿಂದ ಸಂಬಳ ನೀಡದೇ ನಿರ್ಲಕ್ಷಿಸಲಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ದಿನನಿತ್ಯ ಆಸ್ಪತ್ರೆ ಸ್ವಚ್ಛತೆ, ವೈದ್ಯರಿಗೆ ಸಕಾಲಕ್ಕೆ ಟೀ, ಕಾಫಿ, ಬಿಸ್ಕೆಟ್, ರೋಗಿಗಳ ಬಗ್ಗೆ ಕಾಳಜಿ, ಲ್ಯಾಬೋರೋಟರಿಯಲ್ಲಿ ಉತ್ಪತ್ತಿಯಾದ ತ್ಯಾಜ್ಯ, ಆಸ್ಪತ್ರೆಯಲ್ಲಿನ ಬೆಡ್ ಸ್ವಚ್ಛವಾಗಿಡುವುದು, ನೆಲ ಒರೆಸುವುದು ಸೇರಿ ಹತ್ತು ಹಲವಾರು ಕೆಲಸಗಳಲ್ಲಿ ತೊಡಗಿಕೊಂಡವರ ಸ್ಥಿತಿ ಸಂಬಳವಿಲ್ಲದೆ ಶೋಚನೀಯವಾಗಿದೆ.
ಸಾಲ ಪಡೆಯುವ ದುಸ್ಥಿತಿ: ಈ ಕೆಲಸವನ್ನೇ ನೆಚ್ಚಿಕೊಂಡಿರುವ ನೌಕರರ ಪಾಡು ಹೇಳತೀರದಾಗಿದೆ. ಮಕ್ಕಳ ಶಾಲೆಯ ಶುಲ್ಕ, ಪೋಷಕರ ಔಷಧೋಪಚಾರ ಹಾಗೂ ತಿಂಗಳ ರೇಷನ್ ತರುವುದಕ್ಕೂ ಕಷ್ಟವಾಗಿ ಮತ್ತೂಬ್ಬರ ಬಳಿ ಕೈಯೊಡ್ಡುವ ದುಸ್ಥಿತಿ ನಿರ್ಮಾಣ ವಾಗಿದೆ. ಸಾಲ ಮಾಡಿ ಸಂಸಾರ ತೂಗಿಸಿದ್ದು, ಈಗ ಕೆಲವರು ಸಾಲ ಹಿಂದಿರುಗಿಸುವಂತೆಯೂ, ಹೊಸದಾಗಿ ಮತ್ಯಾರೂ ಸಾಲ ಕೊಡದಂತೆಯೂ ಆಗಿದ್ದು, ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲದಂತಾಗಿದೆ ಎಂದು ಕೆಲ ನೌಕರರು ಅಳಲು ತೋಡಿಕೊಂಡಿದ್ದಾರೆ.
ಸಂಬಳವಿಲ್ಲದೆ ಶೋಚನೀಯ ಸ್ಥಿತಿ!
ಕಳೆದ 4 ತಿಂಗಳಿನಿಂದ ವೇತನ ಸಿಗದೆ ನೌಕರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬದುಕು ಸಾಗಿಸುವುದಕ್ಕೆ ಪರದಾಡುತ್ತಿದ್ದಾರೆ.
ಜನರ ಕಷ್ಟಕ್ಕೆ ತುರ್ತಾಗಿ ಸ್ಪಂದಿಸುವ ನೌಕರರ ಸಂಬಳದ ಬಗ್ಗೆ ಸರ್ಕಾರಕ್ಕೆ ಎಷ್ಟು ಕೇಳಿದರೂ ಕೂಡ ಗಮನಹರಿಸುತ್ತಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗನ ಕಾಯಲೆ ನೋಡಿಕೊಳ್ಳೋರು ಇವರೇ..!
ತೀರ್ಥಹಳ್ಳಿ ಸೇರಿದಂತೆ ಮಲೆನಾಡಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಂಗನ ಕಾಯಲೆ ಸೇರಿ ಎಲ್ಲಾ ಸಣ್ಣ ಪುಟ್ಟ ಕೆಲಸ ಮಾಡುವ ಸಿಬ್ಬಂದಿಗೆ ತಿಂಗಳುಗಟ್ಟಲೆ ಸಂಬಳ ಕೊಡದಿದ್ದರೆ ಕಥೆ ಏನು..? ಬದುಕು ಸಾಗಿಸುವುದು ಹೇಗೆ? ನೊಂದವರ ಬದುಕಿಗೆ ನಗು ಮೊಗದ ಸೇವೆ ಕೊಡುವುದು ಹೇಗೆ? ತಕ್ಷಣ ಅರೋಗ್ಯ ಇಲಾಖೆ, ಸರ್ಕಾರ, ಜಿಲ್ಲಾಡಳಿತ ತಕ್ಷಣ ಗಮನಿಸಲಿ.
