ಭಾರೀ ಮಳೆ: ಮುಳುಗುವ ಹಂತದಲ್ಲಿ ರಾಮ ಮಂಟಪ!
– ತೀರ್ಥಹಳ್ಳಿ ತಾಲೂಕಿನಾದ್ಯಂತ ಶಾಲಾ ಕಾಲೇಜಿಗೆ ರಜೆ
– ಮಳೆ ಕಾರಣ ಜನ ಜೀವನ ಅಸ್ತವ್ಯಸ್ತ
– ಹೊಸ ನಗರ ತಾಲೂಕಲ್ಲಿ ಕೂಡ ರಜೆ ಘೋಷಣೆ
NAMMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಾದ್ಯಂತ ನಿರಂತರವಾಗಿ ಮಳೆ
ಸುರಿಯುತ್ತಿರುವುದರಿಂದ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಗುರುವಾರ ಬೆಳಿಗ್ಗೆ ಹೊತ್ತಿಗೆ ಕೆಲವೇ ಅಡಿ ಬಾಕಿ ಇದ್ದು ತುಂಗಾ ನದಿಯ ರಾಮ ಮಂಟಪ ಮುಳುಗುವ ಹಂತದಲ್ಲಿದೆ.
ತೀರ್ಥಹಳ್ಳಿಯಲ್ಲಿ ರಾಮ ಮಂಟಪ ಮುಳುಗಿದರೆ ಅತೀ ಹೆಚ್ಚು ಮಳೆ ಬಂದಿದೆ ಎಂದರ್ಥ. ಕಳೆದ 2 ದಿನದಿಂದ ಭಾರೀ ಮಳೆ ಆಗುತ್ತಿದೆ.
ಶಾಲಾ ಕಾಲೇಜುಗಳಿಗೆ ರಜೆ!
ಮುಂಜಾಗೃತಾ ಕ್ರಮವಾಗಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ, ಪದವಿ ಕಾಲೇಜುಗಳಿಗೆ 3-7-2025 ರ ಗುರುವಾರ ರಜೆಯನ್ನು ಘೋಷಿಸಿ ತಹಸೀಲ್ದಾರ್ ರಂಜಿತ್ ಆದೇಶ ಹೊರಡಿಸಿದ್ದಾರೆ.
ಕಳೆದ 24 ಗಂಟೆಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು ಇದರಿಂದ ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆಯಾಗುವ ಮುನ್ಸೂಚನೆಯಿಂದ,ತಾಲೂಕಿನ ಎಲ್ಲಾ ಹಳ್ಳಕೊಳ್ಳಗಳು ತಂಬಿ ಹರಿಯುತ್ತಿದ್ದು ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ದೃಷ್ಠಿಯಿಂದ ರಜೆ ಘೋಷಿಸಲಾಗಿದೆ. ಈಗ ನೀಡಿರುವ ರಜೆಯನ್ನು ಮುಂದಿನ ಶನಿವಾರದಂದು ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ.
ಮಳೆ ವೇಳೆ ಕೆಲಸ ಮಾಡುವಾಗ ಎಚ್ಚರ. ಭಾರೀ ಗಾಳಿ ಮಳೆ ಕಾರಣ ಕೆಲಸ ಮಾಡುವಾಗ ಎಚ್ಚರ. ಭಾರೀ ಮಳೆ ಕಾರಣ ನದಿ ತೀರ, ಹಳ್ಳಗಳ ಬಳಿ ಹೋಗಬೇಡಿ.
ಹೊಸ ನಗರ ತಾಲೂಕಲ್ಲಿ ಕೂಡ ರಜೆ ಘೋಷಣೆ
ಭಾರೀ ಮಳೆ ಕಾರಣ ಹೊಸನಗರ ತಾಲೂಕಿನ ಶಾಲೆ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.
