Categories
ತೀರ್ಥಹಳ್ಳಿ

ಹಿಲಿಕೆರೆ ಗಣೇಶೋತ್ಸವಕ್ಕೆ ಇಂದು ಅದ್ದೂರಿ ತೆರೆ!

ಹಿಲಿಕೆರೆ ಗಣೇಶೋತ್ಸವಕ್ಕೆ ಇಂದು ಅದ್ದೂರಿ ತೆರೆ!
– ಲಕ್ಷಾಂತರ ರೂ.ಪಟಾಕಿ ಸಿಡಿತದೊಂದಿಗೆ ಮೂಡಲಿದೆ ಸಣ್ಣ ತೆಪೋತ್ಸವ!
– ತೀರ್ಥಹಳ್ಳಿ ತಾಲೂಕಿನಲ್ಲೆ ವಿಜೃಂಭಣೆಯ ಗಣಪತಿ ವಿಸರ್ಜನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿಯೇ ವಿಜೃಂಭಣೆಯ ಗಣೇಶೋತ್ಸವಕ್ಕೆ ಹೆಸರಾಗಿರುವ ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಲಿಕೆರೆಯಲ್ಲಿ ಶುಕ್ರವಾರ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಕಳೆದ ಐದು ದಿನಗಳಿಂದ ಅದ್ದೂರಿ ಸಾಂಸ್ಕೃತಿಕ ಸ್ಪರ್ಧೆ, ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಅನ್ನಸಂತರ್ಪಣೆ, ಸತ್ಯನಾರಾಯಣ ವ್ರತ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆದವು. ಸಾವಿರಾರು ಜನ ಗಣಪತಿ ಕಾರ್ಯಕ್ರಮದಲ್ಲಿ ಭಾಗಿಯಾದರು.

47ನೇ ವರ್ಷದ ಸಂಭ್ರಮದಲ್ಲಿ ಹೊಸ ಸಮುದಾಯ ಭವನ!

ವಾಟಿಗಾರು, ಹಡಗಿನ ಮಕ್ಕಿ, ಹಿಲಿಕೆರೆ ಗಣೇಶೋತ್ಸವದ ಅಂಗವಾಗಿ ಈಗಾಗಲೇ ಅತಿ ದೊಡ್ಡ ಸಮುದಾಯ ಭವನ ಹಾಗೂ ವೇದಿಕೆಯನ್ನು ಗಣೇಶೋತ್ಸವ ಹಾಗೂ ಸ್ಥಳೀಯ ಅಂಟಿಗೆ ಪಿಂಟಿಗೆ ತಂಡದ ಹಣ ಸಂಗ್ರಹಿಸಿ ನಿರ್ಮಾಣ ಮಾಡಲಾಗಿದೆ. ಸಾವಿರ ಜನರ ಕಾರ್ಯಕ್ರಮಕ್ಕೆ ಸುಸಜ್ಜಿತ ವ್ಯವಸ್ಥೆ ಇದೆ. ಇಲ್ಲಿನ ಒಗ್ಗಟ್ಟು ಗಮನ ಸೆಳೆದಿದೆ. ವಾಟಿಗಾರು ಸದಾನಂದ ಗೌಡ ಗೌರವ ಅಧ್ಯಕ್ಷರಾಗಿರುವ, ಸುಬ್ರಮಣ್ಯ ಅಂಚೆಮನೆ ಅಧ್ಯಕ್ಷರಾಗಿ ನೂರಾರು ಯುವಕರ ಸಂಘಟನೆಯ ಶ್ರಮದಿಂದ ಸಾಮಾಜಿಕವಾಗಿಯೂ ಕೂಡ ಮಾದರಿ ಕೆಲಸವನ್ನು ಹಿಲಿಕೆರೆ ಸಮಿತಿ ಮಾಡಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ಹೊಸತೋಟ ಶಿಕ್ಷಕ ಅಣ್ಣಪ್ಪ ಅರಬಗಟ್ಟೆ ಹಾಗೂ ಸ್ಥಳೀಯರನ್ನು ಹಾಗೂ ಮುರಾರ್ಜಿ ಶಾಲೆಯಲ್ಲಿ ಕ್ರೀಡಾಕೂಟಕ್ಕೆ ನೆರವು ನೀಡಿದ ಸುಹಾಸ್ ಹಾಗೂ ಸತೀಶ್ ಅವರನ್ನು ಕೂಡ ಗೌರವಿಸಲಾಗಿದೆ. ಜೊತೆಗೆ ಅನೇಕ ಪ್ರತಿಭೆಗಳನ್ನು ಇಲ್ಲಿ ಗೌರವಿಸಲಾಗುತ್ತಿದೆ. ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಇದೀಗ ಕೊನೆಯ ಹಂತಕ್ಕೆ ಬಂದಿದೆ.

ಮಧ್ಯ ರಾತ್ರಿ ಮೆರವಣಿಗೆ: ಪಟಾಕಿ ರಂಗು!

ಶ್ರೀ ಗಜಾನನ ಸೇವಾ ಸಮಿತಿ ಹಿಲಿಕೆರೆ ವತಿಯಿಂದ 47 ನೇ ಗಣೇಶೋತ್ಸವಕ್ಕೆ ಇಂದು ಅದ್ದೂರಿ ತೆರೆ ಬೀಳಲಿದೆ. ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ಲಕ್ಷಾಂತರ ರೂ ಪಟಾಕಿಯನ್ನು ದೇವಂಗಿ ಸರ್ಕಲ್ ನಲ್ಲಿ ಸಿಡಿಸಲಾಗುತ್ತದೆ. ಅದ್ದೂರಿ ಅಲಂಕಾರ, ಲೈಟಿಂಗ್ಸ್, ನಡುವೆ ದೇವಂಗಿ ಮತ್ತು ಹಿಲಿಕೆರೆ ಎರಡು ಗಣಪತಿಗಳ ಸಮಾಗಮವಾಗಲಿದೆ. ಶಾಂತಿಯುತವಾಗಿ ಕಳೆದ ಎಲ್ಲ ವರ್ಷಗಳಲ್ಲೂ ಗಣಪತಿ ಉತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಹಿಲಿಕೆರೆ ಮತ್ತು ದೇವಂಗಿ ಗಣೇಶೋತ್ಸವಗಳು ನಡೆಸಿಕೊಂಡು ಬಂದಿದೆ. ಈ ಎರಡು ಗಣಪತಿಗಳು ತಾಲೂಕಿನಲ್ಲೆ ಗಮನ ಸೆಳೆದಿದೆ. ಅದ್ದೂರಿ ಮೆರವಣಿಗೆ ಹಾಗೂ ರಾಜಬೀದಿ ಉತ್ಸವ ಹಾಗೂ ಪಟಾಕಿಸಿಡಿತ ಎಳ್ಳಮಾವಾಸೆಯನ್ನು ನೆನಪು ಮಾಡಿಕೊಡಲಿದೆ. ಸರ್ವರನ್ನು ಗಣೇಶ ಸಮಿತಿ ಸ್ವಾಗತಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.