ನೂರಾರು ಕನಸು ಹೊತ್ತ ಹುಡುಗನ ಬಲಿ ಪಡೆದ ಕೃಷಿ ಹೊಂಡ!
– ಅಗಲಿದ ಪೃಥ್ವಿನ್ ಗೆ ಮಲ್ನಾಡ್ ಕ್ಲಬ್ ಶ್ರದ್ಧಾಂಜಲಿ
– ಸಹೋದರಿ, ತಾಯಿಗೆ ಸಹಾಯ ಹಸ್ತ
NAMMUR EXPRESS NEWS
ತೀರ್ಥಹಳ್ಳಿ: ಬದುಕು ಕಟ್ಟಿಕೊಳ್ಳುವ ಹಂಬಲದಲ್ಲಿದ್ದ ಹುಡುಗನೊಬ್ಬ ಬದುಕಿಗಾಗೇ ಶ್ರಮಿಸುತ್ತಾ ಜೀವಕಳೆದುಕೊಂಡ ಮನ ಕಲಕುವ ಘಟನೆಯೊಂದು ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಸಮೀಪದ ಉಬ್ಬೂರಿನ ಹಾರ್ಕೋಡು ಎಂಬಲ್ಲಿ ಇತ್ತೀಚೆಗೆ ನಡೆದಿದೆ. ಈಗ ಆತನ ಕುಟುಂಬಕ್ಕೆ ಮಲ್ನಾಡ್ ಕ್ಲಬ್ ಸಹಾಯ ಹಸ್ತ ನೀಡಿದೆ. ಮೋಟಾರ್ ನೀರು ಹಾಕಲು ಹೋಗಿ ಆಯ ತಪ್ಪಿ ಕಾಲುಜಾರಿ ಕೆರೆಗೆ ಬಿದ್ದು, 19 ವರ್ಷದ ಬಾಲಕ ಪೃತ್ವಿನ್ ಮೃತಪಟ್ಟಿದ್ದು, ಈತ ದಿ. ಸುಬ್ರಹ್ಮಣ್ಯ ಮತ್ತು ವೀಣಾ ದಂಪತಿಗಳ ಪುತ್ರ. ಇತ್ತೀಚಿಗೆ ಓದು ಮುಗಿಸಿ ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಅಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಇನ್ನೇನು ಬದುಕು ಚೆನ್ನಾಗಿ ಹೋಗುತ್ತಿರುವ ವೇಳೆ ವಿಧಿ ಆತನ ಬಲಿ ಪಡೆದಿದೆ. ಪೃಥ್ವಿನ್ ಕಳೆದ ಗುರುವಾರ ಜಮೀನಿಗೆ ನೀರು ಬಿಡಲು ಹೋದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತರಾಗಿರುತ್ತಾರೆ.
ಮಲ್ನಾಡ್ ಕ್ಲಬ್ ಶ್ರದ್ಧಾಂಜಲಿ..!
ಅತ್ಯಂತ ಚುರುಕಿನ ಬುದ್ದಿವಂತ ಹುಡುಗ ಪೃಥ್ವಿನ್, ಉತ್ತಮ ರೀತಿಯಲ್ಲಿ ಕೆಲಸ ಮಾಡಿಕೊಂಡು ಎಲ್ಲರೊಂದಿಗೆ ಬೆರೆತು ಚಟುವಟಿಕೆಯಿಂದಿದ್ದ ಹುಡುಗ. ಭವಿಷ್ಯದ ಬಗ್ಗೆ ಬಹಳ ಕನಸು ಕಂಡಿದ್ದ. ನನಸು ಮಾಡಿಕೊಳ್ಳಲು ಹಾಗೆಯೇ ಶ್ರಮಿಸುತ್ತಿದ್ದ ಕೂಡ. ಈ ಹುಡುಗನ ಅಗಲಿಕೆ ಬಹಳ ನೋವನ್ನುಂಟು ಮಾಡಿದ್ದು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಮಲ್ನಾಡ್ ಕ್ಲಬ್ ವತಿಯಿಂದ ಪೃಥ್ವಿನ್ ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತೀರ್ಥಹಳ್ಳಿ ಮಲ್ನಾಡ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷರಾದ ಕಡಿದಾಳ್ ದಯಾನಂದ್, ಅಧ್ಯಕ್ಷರಾದ ಸುಂದರೇಶ್, ಕಾರ್ಯದರ್ಶಿ ರಾಘವೇಂದ್ರ ಎಸ್, ನಿರ್ದೇಶಕರು ಕುಣಜೆ ಕಿರಣ್, ಲಕ್ಷ್ಮಣ್ ಗಂಟೆಹಕ್ಲು, ಕ್ಲಬ್ ನ ಸದಸ್ಯರು ಮತ್ತು ಸಿಬ್ಬಂದಿಗಳು, ಪೃಥ್ವಿನ್ ಅವರ ಗ್ರಾಮಸ್ಥರು ಹಾಜರಿದ್ದು, ಪೃಥ್ವಿನ್ ಕುಟುಂಬದ ಸಹಾಯಾರ್ಥ ದೇಣಿಗೆ ನೀಡಲು ಕ್ಲಬ್ ನ ಸದಸ್ಯರು ಮತ್ತು ನಿರ್ದೇಶಕರು ನಿರ್ಧರಿಸಿದ್ದು ಈ ವಾರವೇ ಹಣವನ್ನು ಸಂಗ್ರಹ ಮಾಡಲಾಗಿದೆ. ಈವರೆಗೂ ಸುಮಾರು ಮೂರು ಲಕ್ಷ ಹಣ ಸಂಗ್ರಹಿಸಲಾಗಿದೆ. ಕುಟುಂಬದವರಿಗೆ ನೆರವು ನೀಡುವ ಉದ್ದೇಶದಿಂದ ಜೊತೆಗೆ ಪೃಥ್ವಿನ್ ಅವರ ಸಹೋದರಿಗೆ ಉದ್ಯೋಗ ಕೊಡಿಸುವಲ್ಲಿ ಕ್ಲಬ್ ಸದಸ್ಯರು ಕೆಲಸ ಮಾಡುತ್ತಿದ್ದಾರೆ.
