ತೀರ್ಥಹಳ್ಳಿಯಲ್ಲಿ ಹೆಚ್ಚಾದ ಆತ್ಮಹತ್ಯೆ!
– ತಿಂಗಳಿನಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ
– ಸಣ್ಣ ಸಣ್ಣ ಕಾರಣ, ಸಾಲ, ವಯುಕ್ತಿಕ ಸಮಸ್ಯೆ, ಲವ್ ಕಾರಣ?!
NAMMUR EXPRESS NEWS
ತೀರ್ಥಹಳ್ಳಿ: ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಹೆಚ್ಚಾಗುತ್ತಿರುವ ನಡುವೆಯೂ ತೀರ್ಥಹಳ್ಳಿಯಲ್ಲಿ ದಿನದಿಂದ ದಿನಕ್ಕೆ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಒಂದು ತಿಂಗಳಿನಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಯುವಜನತೆ ಸೇರಿದಂತೆ ಪ್ರಾಣ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಮಾನಸಿಕ ಖಿನ್ನತೆ, ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ, ಶಾಲಾ ಕಾಲೇಜು ವಿಚಾರ, ಹಣದ ವಿಷಯ, ಅನಾರೋಗ್ಯದ ಸಮಸ್ಯೆ ಸೇರಿದಂತೆ ನಾನಾ ನೆಪಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುರಂತದ ಸಂಗತಿಯೆಂದರೆ ಈ ಪೈಕಿ ಯುವ ಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
20ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣ
ತೀರ್ಥಹಳ್ಳಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದ್ದು,ಜ.29 ರಂದು ಶಾಲೆಗೆ ಹೋಗು ಎಂದು ತಿಳಿ ಹೇಳಿದ್ದಕ್ಕೆ ಬಸವಾನಿಯ 9ನೇ ತರಗತಿ ವಿದ್ಯಾರ್ಥಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹಾಗೂ ಜ.22 ರಂದು ಕಟ್ಟೆಹಕ್ಕಲಿನಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದೇ ರೀತಿ ಬಿಳಾಲುಕೊಪ್ಪದಲ್ಲಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಥೈರಾಯಿಡ್ ಸಮಸ್ಯೆಗೆ ನೊಂದು ನವ ವಿವಾಹಿತೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು, ಹಣಗೆರೆಕಟ್ಟೆಯಲ್ಲಿ ವಿಷ ಕುಡಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು, ವೃದ್ಧೆ ಒಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಒಂದೇ ತಿಂಗಳಿನಲ್ಲಿ ನಡೆದಿರುವುದು ದುರಂತದ ಸಂಗತಿಯಾಗಿದೆ.
ಜೀವ ಅಮೂಲ್ಯ… ಆತ್ಮಹತ್ಯೆ ಮಹಾಪಾಪ!
ಆತ್ಮಹತ್ಯೆ ಪ್ರಕರಣಗಳು ಹೆಚ್ಚದಂತೆ ತಡೆಯಲು ಮಾನಸಿಕ ಖಿನ್ನತೆಯಲ್ಲಿರುವವರು ಕಂಡರೆ ಕೂಡಲೇ ಯಾರೇ ಆಗಲಿ ಅವರಿಗೆ ಧೈರ್ಯ ತುಂಬಲು ಯತ್ನಿಸಬೇಕು. ನಕಾರಾತ್ಮಕ ಯೋಚನೆಗಳನ್ನು ದೂರಗೊಳಿಸಿ, ಭರವಸೆ ಮೂಡಿಸುವ ಮೂಲಕ ಆತ್ಮಹತ್ಯಾ ಪ್ರಯತ್ನಗಳನ್ನು ಕಡಿಮೆ ಮಾಡೋಣ ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಈ ಮೂಲಕ ತಿಳಿಸಿದೆ.