ಅಸಲು ಪಾವತಿಸಿದರೆ ಬಡ್ಡಿಮನ್ನಾ: ಫೆ.29 ಗಡುವು
– ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಸುಸ್ಥಿದಾರರಾಗಿರುವ ರೈತರಿಗೆ ಅವಕಾಶ
– ರೈತರಿಗೆ ವಿಜಯದೇವ್ ಮಾಹಿತಿ
NAMMUR EXPRESS NEWS
ತೀರ್ಥಹಳ್ಳಿ: ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಸುಸ್ಥಿದಾರರಾಗಿರುವ ರೈತರು, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ವಿಶೇಷ ಯೋಜನೆ ಸರ್ಕಾರ ಜಾರಿಗೆ ತಂದಿದ್ದು, ರೈತರು ಇಂತಹ ಉಪಯುಕ್ತ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ತೀರ್ಥಹಳ್ಳಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರು, ರಾಜ್ಯ ಭೂ ಬ್ಯಾಂಕಿನ ನಿರ್ದೇಶಕರು, ಶಿವಮೊಗ್ಗ ಡಿಸಿಸಿ ಬ್ಯಾಂಕಿನ ನಿರ್ದೇಶಕರು ಆದ ಬಸವಾನಿ ವಿಜಯ್ ದೇವ್ ಮನವಿ ಮಾಡಿದ್ದಾರೆ. ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕುಗಳು, ಜಿಲ್ಲಾ ಬ್ಯಾಂಕ್ ಗಳಲ್ಲಿ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ಕ್ರೆಡಿಟ್ ಸೊಸೈಟಿ ಮತ್ತು ಮಾರ್ಕೆಟಿಂಗ್ ಸೊಸೈಟಿ ಗಳಿಗೆ ಅನ್ವಯವಾಗುವುದಿಲ್ಲ.
ಇದನ್ನು ಮನಗಾಣ ಬೇಕೆಂದು ವಿನಂತಿಸಿದ್ದಾರೆ.2023 ಡಿಸೆಂಬರ್ 31ಕ್ಕೆ ಸುಸ್ತಿದಾರರಾಗಿರುವವರು ಅಸಲು ಕಟ್ಟಿದರೆ ಬಡ್ಡಿಮನ್ನದ ಈ ಯೋಜನೆ ಸದುಪಯೋಗಪಡಿಸಿಕೊಳ್ಳಬಹುದು. ಇದು ಸರ್ಕಾರದ ಕೊನೆಯ ಅವಕಾಶವಾಗಿದ್ದು, ಸುಸ್ತಿದಾರರಾಗಿರುವ ರೈತರು ಈ ಅವಕಾಶವನ್ನು ಕಳೆದುಕೊಳ್ಳಬಾರದೆಂದು ಅವರು ಮನವಿ ಮಾಡಿದ್ದಾರೆ. ಈಗಾಗಲೇ ಅನೇಕ ಬಾರಿ ಈ ಯೋಜನೆ ಕುರಿತು ಮಾಹಿತಿ ನೀಡಿದ್ದು, ಸಾಕಷ್ಟು ರೈತರು ಇದರ ಸದುಪಯೋಗಪಡಿಸಿಕೊಂಡಿದ್ದಾರೆ. ಈಗಾಗಲೇ ಸಹಕಾರಿ ಬ್ಯಾಂಕುಗಳಲ್ಲಿ ಅಸಲಿಗಿಂತಲೂ ಬಡ್ಡಿಯೇ ಹೆಚ್ಚಾಗಿದ್ದು, ಈ ಸಂಕಷ್ಟದಿಂದ ರೈತರನ್ನು ಪಾರು ಮಾಡುವುದೇ ಯೋಜನೆಯ ಉದ್ದೇಶವಾಗಿದೆ ಎಂದಿದ್ದಾರೆ.
