ಮಾಧ್ಯಮ ಪ್ರಕಟಣೆ
– ಜಲ ಜೀವನ್ ಮಿಷನ್ ಯೋಜನೆ ಅವೈಜ್ಞಾನಿಕ ಜಾರಿ ವಿರುದ್ಧ ಜನ ಹೋರಾಟ
– ಮುಳಬಾಗಿಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು
ಹಾಗೂ ಭೀಮೇಶ್ವರ ಸಂಗಮ ಉಳಿಸಿ ಸಂಘಟನೆಗಳ ಪತ್ರಿಕಾ ಹೇಳಿಕೆ
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ 36 ಗ್ರಾಮ ಪಂಚಾಯಿತಿಗಳ 1617 ಜನ ವಸತಿಗಳ(ಮಜರೆ)ಹೆಸರಿನಲ್ಲಿ 344 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಜಾರಿಯಾಗುತ್ತಿರುವ ಅವೈಜ್ಞಾನಿಕ ಯೋಜನೆ ವಿರೋಧಿ ಹೋರಾಟದ ಭಾಗವಾಗಿ 23-02-2024ರಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಕರೆದ ಸಭೆಯನ್ನು ಧಿಕ್ಕರಿಸಲಾಗಿದೆ. ತಾಲೂಕಿಗೆ ವೈಜ್ಞಾನಿಕ ಕುಡಿಯುವ ನೀರಿನ ಯೋಜನೆ ಜಾರಿಗೆ ಹೋರಾಟ ಮುಂದುವರಿಯಲಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಮುಂದೆ ತೀರ್ಥಹಳ್ಳಿ ತಾಲೂಕು, ಮುಳಬಾಗಿಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ, ತಾಲೂಕು ರೈತ ಸಂಘದ ಪರವಾಗಿ ಈ ಮಾಹಿತಿ ನೀಡ ಬಯಸುತ್ತೇವೆ:
ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಎರಡು ನದಿಗಳ ಸಂಗಮ ಸ್ಥಳವನ್ನು ಉಳಿಸಿಕೊಳ್ಳಲು ಹಾಗೂ ಅವೈಜ್ಞಾನಿಕ ಹಾಗೂ ಅಸಂವಿಧಾನಾತ್ಮಕ ರೀತಿಯಲ್ಲಿ ಜಾರಿಗೆ ತರಲು ಹೊರಟಿರುವ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಸ್ಥಳೀಯರು ಚಳವಳಿ ನಡೆಸಿಕೊಂಡು ಬಂದಿರುವುದು ತಮಗೆ ಗೊತ್ತೇ ಇದೆ. ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಹೆಸರಿನಲ್ಲಿ, ತಾಲೂಕು ರೈತ ಸಂಘದ ನೇತೃತ್ವದಲ್ಲಿ ಸಂಘಟಿತರಾದ ಗ್ರಾಮಸ್ಥರು ಸದರಿ ಯೋಜನೆಯ ಸುದ್ದಿ ತಿಳಿದಾಗಿನಿಂದಲೂ ಆತಂಕವನ್ನು ವ್ಯಕ್ತಪಡಿಸಿಕೊಂಡೇ ಬಂದಿದ್ದಾರೆ.
ವಿಶ್ವದ ಕೆಲವೇ ಪರಿಸರ ಸೂಕ್ಷ್ಮ ಪ್ರದೇಶಗಳ ಸಾಲಿನಲ್ಲಿ ಬರುವ ತೀರ್ಥಹಳ್ಳಿಯಲ್ಲಿ ಇಂತಹದೊಂದು ಯೋಜನೆ ಸ್ಥಳೀಯರ ಕೃಷಿ ಹಾಗೂ ವಾಸ ಭೂಮಿಗೆ ಮಾತ್ರವೇ ಕಂಟಕವಾಗುವುದಿಲ್ಲ, ಬದಲಿಗೆ ಭವಿಷ್ಯದಲ್ಲಿ ಮಲೆನಾಡಿನ ಪರಿಸರದಲ್ಲೂ ನೀರಿನ ಹಾಹಾಕಾರವನ್ನು ಕೃತಕವಾಗಿ ಸೃಷ್ಟಿಸುವ ಸಾಧ್ಯತೆ ಇದೆ. ಜತೆಗೆ, ವಿಕೇಂದ್ರಿಕರಣಕ್ಕಾಗಿ ಸಂವಿಧಾನಕ್ಕೆ ತರಲಾದ 73ನೇ ತಿದ್ದುಪಡಿಯ ಅಡಿಯಲ್ಲಿ ಮೂಡಿಬಂದ ‘ಜಲ್ ಜೀವನ್ ಮಿಷನ್’ನ ಮೂಲ ಆಶಯವನ್ನೇ ಇಲ್ಲಿ ಬಲಿಕೊಡಲಾಗಿದೆ. ಕಳೆದ ಆರು ತಿಂಗಳಿನಿಂದ ಈ ವಿಚಾರಗಳನ್ನು ಹಲವು ಸ್ವರೂಪಗಳಲ್ಲಿ ಸಾರ್ವಜನಿಕ ಅವಗಾಹನೆಗೆ ತರಲಾಗಿದೆ.
ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಳಕೆಯಿಂದ ಹಿಡಿದು, ಆಹೋರಾತ್ರಿ ಸತ್ಯಾಗ್ರಹವನ್ನು ಸಂಘಟಿಸುವ ಮೂಲಕ, ಶಕ್ತಿಕೇಂದ್ರ ವಿಧಾನಸೌಧದ ಕೊಠಡಿಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಸದರಿ ಯೋಜನೆಯ ಕುರಿತು ಆತಂಕಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿಕೊಂಡು ಬರಲಾಗಿದೆ. ಕುಡಿಯುವ ನೀರಿನ ನೆಪ ಮುಂದಿಟ್ಟು 350 ಕೋಟಿ ರೂಪಾಯಿಯ ಯೋಜನೆಯ ಅನುಷ್ಠಾನದ ಕುರಿತಾದ ಮೂಲಭೂತ ಪ್ರಶ್ನೆಗಳನ್ನು ಆಡಳಿತ ಮುಂದೆ ಹಲವು ಬಾರಿ ಇಡಲಾಗಿದೆ.
ದಿ-27-01-2024ರಂದು ಸಂಗಮ ಸಮಿತಿ, ತೀರ್ಥಹಳ್ಳಿ ತಾಲೂಕು ರೈತ ಸಂಘದ ಮುಖಂಡರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತ್ತು. ಅವರ ತೀರ್ಮಾನದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರೈತರ ಮುಖಾಮುಖಿ ಚರ್ಚೆಗೆ ವಿಕಾಸಸೌಧದಲ್ಲಿ ಸಭೆ ಏರ್ಪಡಿಸಲಾಗಿತ್ತು. ಆದರೆ, ಸಭೆಯು ‘ಪ್ರಗತಿ ಪರಿಶೀಲನೆ’ ಎಂದು ತೇಪೆ ಹಚ್ಚುವ ಪಿಪಿಟಿಯ ಮೂಲಕ ಆರಂಭವಾಯಿತು. ಸರ್ಚ್ ಎಂಜಿನ್ನಿಂದ ಎಬ್ಬಿದ ಮಕ್ಕಳ ಚಿತ್ರಗಳನ್ನು ತೀರ್ಥಹಳ್ಳಿ ಆರಗ ಗ್ರಾಮ ಪಂಚಾಯ್ತಿಯ ಫ್ಲೋರೈಡ್ ಪತ್ತೆ ಸುದ್ದಿಗೆ ಅಂಟಿಸಲಾಗಿತ್ತು.
ಗೂಗಲ್ ಮ್ಯಾಪ್ ಮೂಲಕ ಮಲೆನಾಡಿನ ಇಳಿತಗ್ಗುಗಳನ್ನು ಅರ್ಥಮಾಡಿಸುವ ವ್ಯರ್ಥ ಪ್ರಯತ್ನವನ್ನು ಅಧಿಕಾರಿಗಳು ಮಾಡಿದರು. ಈ ಸಮಯದಲ್ಲಿ ಅವರು ತೋರಿಸುತ್ತಿದ್ದ ಆತುರ, ಆಕರ ತಂದ ಅನುಮಾನಾಸ್ಮದ ಅಂಕಿ- ಅಂಶಗಳು ಯೋಜನೆಯ ಅವೈಜ್ಞಾನಿಕತೆಯನ್ನು ಎತ್ತಿತೋರಿಸಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಬಹುದು ಎಂಬ ಆಶಯದಲ್ಲಿ ಊರಿಗೆ ಮರಳಲಾಗಿತ್ತು. ಇದಾದ ನಂತರವೇ ರೈತರಿಗೆ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಿಂದ ಮಾತುಕತೆಗೆ ಆಹ್ವಾನಿಸಲಾಗಿತ್ತು.
ನಿರಾಶಾದಾಯಕ ಬೆಳವಣಿಗೆ ಏನೆಂದರೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಷ್ಟೂ ಚರ್ಚೆ ಪೂರ್ವಾಗ್ರಹಪೀಡಿತವಾಗಿತ್ತು. ತಾರ್ಕಿಕ ಪರಿಹಾರ ಕಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ ಟೆಂಡರ್ ಕಾಮಗಾರಿಗಷ್ಟೆ ಆದ್ಯತೆ ನೀಡುತ್ತಿರುವುದು ಸ್ಪಷ್ಟಪಡಿಸಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಕುರಿತು ಭಾಗವಹಿಸಿದ ರೈತರ ಪ್ರತಿಕ್ರಿಯೆ ಇಷ್ಟೆ: “ರೈತರಿಗೆ ಯೋಜನೆಯ ಅವೈಜ್ಞಾನಿಕತೆಯನ್ನು ಜಿಲ್ಲಾಡಳಿತಕ್ಕೆ ಮನವರಿಗೆ ಮಾಡಿಕೊಡಲು ಆಗದೇ ಹೋಗಿರಬಹುದು ಅಥವಾ ರೈತರು ಮುಂದಿಕೊಂಡು ಬಂದ ವಿಚಾರವನ್ನು ಕಡೆಗಣಿಸುವುದಕ್ಕಾಗಿಯೇ ಪೂರ್ವಾಗ್ರಹಪೀಡಿತರಾಗಿ ಇಂತಹದೊಂದು ಸಭೆಯನ್ನು ಆಯೋಜಿಸಿರುವ ಸಾಧ್ಯತೆಯೂ ಇದೆ ಅನ್ನಿಸಿತು. ಹೀಗಾಗಿ, ಸಭೆಯಿಂದ ಮಧ್ಯೆದಲ್ಲಿಯೇ ಹೊರಬರುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಜತೆಗೆ, ಹೋರಾಟದ ಹಾದಿಯೇ ನಿರ್ಣಾಯಕ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಜನ ಚಳವಳಿಯ ಭಾಷೆಯಲ್ಲಿಯೇ ಸರಕಾರಕ್ಕೆ ಯೋಜನೆಯ ಅವೈಜ್ಞಾನಿಕತೆಯನ್ನು ಮುಂದಿನ ದಿನಗಳಲ್ಲಿ ಅರ್ಥಪಡಿಸಲಾಗುವುದು.”
ಜಿಲ್ಲಾಡಳಿತ ಬಲಪ್ರಯೋಗವನ್ನೇ ಅಸ್ತ್ರವನ್ನಾಗಿ ನಂಬಿಕೊಂಡಂತಿದೆ. ಆದರೆ ಮಲೆನಾಡಿನ ಶಾಂತ ಪರಿಸರದಲ್ಲಿ ಅಂತಹದೊಂದು ನಡೆ ಭವಿಷ್ಯವನ್ನು ಇನ್ನಷ್ಟು ಆತಂಕಕ್ಕೆ ದೂಡುವ ಸಾಧ್ಯತೆ ಇದೆ. ಈ ಹಿನ್ನೆಯಲ್ಲಿ ರೈತರು ಮುಂದಿಟ್ಟುಕೊಂಡು ಬಂದಿರುವ ಬೇಡಿಕೆಯನ್ನು ಸರಕಾರಕ್ಕೆ ಅರ್ಥಮಾಡಿಕೊಳ್ಳಬೇಕು ಎಂದು ಆಶಿಸುತ್ತೇವೆ. ಜತೆಗೆ, ಭೀಮೇಶ್ವರ ಉಳಿಸಿ ಸಂಗಮ ಸಮಿತಿ, ತಾಲೂಕು ರೈತ ಸಂಘ ಮುಂದಿನ ದಿನಗಳಲ್ಲಿ ಸದರಿ ಯೋಜನೆಯ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಆತಂಕಗಳನ್ನು ದೂರಮಾಡುವ ನಿಟ್ಟಿನಲ್ಲಿ ಹೋರಾಟ ಮುಂದುವರಿಸಲಿವೆ. ತಾಲೂಕಿಗೆ ವೈಜ್ಞಾನಿಕವಾಗಿರುವ ಮತ್ತು ಶಾಶ್ವತವಾಗಿರುವ ಕುಡಿಯುವ ನೀರಿನ ಯೋಜನೆ ಜಾರಿಗಾಗಿ ಚಳವಳಿ ಜಾರಿಯಲ್ಲಿರಲಿದೆ.
ದಿನಾಂಕ: 24.02.2024
ಸ್ಥಳ: ತೀರ್ಥಹಳ್ಳಿ
ಇಂತಿ,
ಮುಳಬಾಗಿಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು
ಹಾಗೂ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ, ತೀರ್ಥಹಳ್ಳಿ ತಾಲೂಕು ರೈತ ಸಂಘ.