Categories
ತೀರ್ಥಹಳ್ಳಿ

ಮಂಜುನಾಥ ಗೌಡ ಮನದಾಳದ ಮಾತು!

ಮಂಜುನಾಥ ಗೌಡ ಮನದಾಳದ ಮಾತು!
– ಕಾರ್ಯಕ್ರಮದಲ್ಲಿ ತಮ್ಮ ನೋವು ಬಿಚ್ಚಿಟ್ಟ ಸಹಕಾರ ನಾಯಕ
– ನಷ್ಟದಲ್ಲಿದ್ದ ಡಿಸಿಸಿ ಬ್ಯಾಂಕ್ ಬೆಳೆಸಿದ್ದೇನೆ.. ಆದರೂ ನನ್ನ ವಿರುದ್ಧ ಪಿತೂರಿ: ಬೇಸರ
– ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್. ಎಂ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಹಕಾರ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡರ ತವರೂರು ಸನ್ಮಾನ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಅಭಿಮಾನ ಕಂಡು ಮಂಜುನಾಥ ಗೌಡ ಭಾವಪರವಶವಾದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, 1996ರಲ್ಲಿ 21 ಕೋಟಿ ನಷ್ಟದಲ್ಲಿದ್ದ ‌ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಲಾಭಗಳಿಸುವಂತೆ ಮಾಡಿದ್ದೇನೆ. ಸಹಕಾರಿ ಕ್ಷೇತ್ರದಲ್ಲಿ ಶಾಸಕ, ಸಚಿವರು ಮಾಡಲಾಗದ ಸಾಹಸವನ್ನು ಮಾಡಿದ್ದೇನೆ. ಗುಡ್ಡೇಕೊಪ್ಪ ಸೊಸೈಟಿ ಸೇರಿದಂತೆ ಮುಚ್ಚುತ್ತಿದ್ದ 100ಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಪುನರ್‌ ಸ್ಥಾಪನೆ ಮಾಡಿದ್ದೇನೆ. ಯಡಿಯೂರಪ್ಪನವರ ಕಷ್ಟದ ಸಂದರ್ಭದಲ್ಲಿ ಜೊತೆಯಾಗಿದ್ದೇನೆ. ಜೈಲಿನಲ್ಲಿದ್ದ ಸಂದರ್ಭ ನನ್ನ ಕೈಹಿಡಿದುಕೊಂಡು ಅಂಗಲಾಚಿಕೊಂಡಿದ್ದರು. ಅವರ ಮಾತು ಕೇಳಿ ರಾಜಕೀಯಕ್ಕೆ ಪ್ರವೇಶಿಸಿದ್ದೇ ನಾನು ಮಾಡಿದ ಮೊದಲ ತಪ್ಪಾ. ಆದ್ದರಿಂದಲೇ ಇಡಿ, ಸಿಬಿಐ, ಐಟಿ ದಾಳಿ ನಡೆಸುತ್ತಿದ್ದಾರಾ ಎಂದರು.

ಇಲ್ಲ ಸಲ್ಲದ ಆರೋಪ ಮಾಡಿದರು!

ಡಿಸಿಸಿ ಬ್ಯಾಂಕ್‌ ಈಗಿನ ಸಾವಿರಾರು ಕೋಟಿ ವ್ಯವಹಾರಕ್ಕೆ ನಾನು ಅಂದು ತೆಗೆದುಕೊಂಡ ನಿರ್ಧಾರಗಳೇ ಪ್ರಮುಖ ಕಾರಣ. ಇಷ್ಟೆಲ್ಲ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡಿದರೂ ನನ್ನ ಮೇಲೆ ಇಲ್ಲಸಲ್ಲದ ಆರೋಪ ಕಟ್ಟಿದರು. ದೇಶದ ಎಲ್ಲಾ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸಹಕಾರ ಮತ್ತು ರಾಜಕೀಯವಾಗಿ ಮುಗಿಸಲು ಸಂಚು ನಡೆಸಿದ್ದರು. ಕಟ್ಟಿ ಬೆಳೆಸಿದ ಸಂಸ್ಥೆಯಿಂದ ಕೆಟ್ಟ ಹೆಸರು ಬಂತೆಂಬ ಬೇಜಾರು ಇದೆ. ಪೂರ್ಣ ಪ್ರಮಾಣದಲ್ಲಿ ಡಿಸಿಸಿ ಬ್ಯಾಂಕ್‌ನಲ್ಲಿ ತೊಡಗಿಸಿಕೊಳ್ಳಲು ಮನಸ್ಸಾಗುತ್ತಿಲ್ಲ. ಹೆಂಡತಿ ಮಾತಿಗೆ ಕಟ್ಟುಬಿದ್ದು ಪುನಃ ಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಿದ್ದೇನೆ. ಅಪೆಕ್ಸ್‌ ಬ್ಯಾಂಕ್‌ನಲ್ಲಿ 50 ಸಾವಿರ ಕೋಟಿ ಬಜೆಟ್‌ ಇದ್ದರು ಅವ್ಯವಹಾರ ಆರೋಪ ಇಲ್ಲ. ರಾಜ್ಯದ ಕಾಲುಭಾಗದ ಬಜೆಟ್‌ ಇದ್ದರು ಪೈಸೆಗಳಿಗೂ ಲೆಕ್ಕ ಕೊಟ್ಟಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಆರಗ ವಿರುದ್ಧ ಕಿಡಿ… ಬೆನ್ನಿಗೆ ಚೂರಿ ಹಾಕಿದರು!

“ಮಾಜಿ ಶಾಸಕ ಬಿ.ಎಸ್‌. ವಿಶ್ವನಾಥ್‌ ದೇಶದಲ್ಲಿ ಸಾವಿರಾರು ಕೋಟಿ ವೆಚ್ಚದ ಸಹಕಾರಿ ಸಂಸ್ಥೆಗಳನ್ನು ಕಟ್ಟಿದ್ದಾರೆ. ಅವರು ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡ ಓರ್ವ ಸಹಕಾರಿ ಸಂಘಟಕ. ಅಂತವರ ಸಾವಿನ ಕೊನೆಯ ಗಳಿಗೆಯಲ್ಲಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಬಿ.ಪಿ., ಶುಗರ್‌, ಸ್ಟ್ರೋಕ್‌ ಆಗಲು ಕಾರಣರಾದವರು ಹೊಗಳಿಕೆಯ ಹಾದಿ ಹಿಡಿದಿದ್ದಾರೆ. ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳ ಸ್ಥಿತಿ ಏನಾಗುತ್ತಿದೆ ಎಂಬ ಬಗ್ಗೆ ನನಗೆ ಅರಿವಿದೆ. ಹಿಂದಿನಿಂದ ಕಾಲೆಳೆದು ಮುಂದಿನಿಂದ ಹೊಗಳುವವರ ಸಂಖ್ಯೆ ಹೆಚ್ಚಿದೆ. ಸಹಕಾರಿ ಸಂಘಗಳನ್ನು ಮುಚ್ಚಿದವರಿಗೆ ನನ್ನ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ” ಎಂದು ಪರೋಕ್ಷವಾಗಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದಿಂದ ಸಹಕಾರ ವ್ಯವಸ್ಥೆ ಮುಗಿಸಲು ಸಂಚು!

ಗುಜರಾತ್‌ನಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದರೂ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಲು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರಿಗೆ ಸಾಧ್ಯವಾಗಿಲ್ಲ. ಕೇಂದ್ರದಿಂದ ಸಹಕಾರಿ ಸಂಸ್ಥೆ ಮುಗಿಸುವ ಹುನ್ನಾರ ನಡೆಯುತ್ತಿದೆ. ನಬಾರ್ಡ್‌ನಿಂದ ಬರಬೇಕಾದ ರಾಜ್ಯದ ಪಾಲು ₹6,430 ಕೋಟಿ ಹಣ ಬಂದಿಲ್ಲ. ಸಹಕಾರಿ ಶ್ರೀಮಂತರ ವ್ಯವಸ್ಥೆಯಲ್ಲ ಸಾಮಾನ್ಯ ಜನರ ಚಳುವಳಿಯಾಗಬೇಕು ಎಂದು ಹೇಳಿದರು.

ಸಹಕಾರಿ ವೇದಿಕೆ ಅಧ್ಯಕ್ಷ ಬಸವಾನಿ ವಿಜಯದೇವ್‌ ಪ್ರಾಸ್ತವಿಕವಾಗಿ ಮಾತನಾಡಿದರು. ಮುಖ್ಯ ಬಸ್‌ ನಿಲ್ದಾಣದಿಂದ ಬೈಕ್‌ ರ್ಯಾಲಿ ಮೂಲಕ ಮಂಜುನಾಥ ಗೌಡರನ್ನು ಅದ್ದೂರಿಯಾಗಿ ವೇದಿಕೆಗೆ ಕರೆತರಲಾಯಿತು. ಸುಮಾರು 300 ಕೆ.ಜಿ. ತೂಕದ ಹಣ್ಣಿನ ಹಾರವನ್ನು ಅಭಿಮಾನಿಗಳು ಮಂಜುನಾಥ ಗೌರಿಗೆ ಅರ್ಪಿಸಿದರು. ವೇದಿಕೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಶಿಮುಲ್ ಅಧ್ಯಕ್ಷ ಶ್ರೀಪಾಲ್ ಹೆಗ್ಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಎನ್ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಸಹಕಾರಿಗಳಾದ ಕೆ.ರತ್ನಾಕರ್, ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಷಡಕ್ಷರಿ, ಕಲಗೋಡು ರತ್ನಾಕರ ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.