Categories
ತೀರ್ಥಹಳ್ಳಿ

ಹೆದ್ದಾರಿಗೆ ಅನೇಕರ ಬದುಕು ಬಲಿ!?

ಹೆದ್ದಾರಿಗೆ ಅನೇಕರ ಬದುಕು ಬಲಿ!?
– ಜನ ಏನಂತಾರೆ…? ಹೈವೇ ಮಾತ್ರ ಅಭಿವೃದ್ಧಿನಾ?
– ತೋಟ, ಮನೆ, ಗದ್ದೆ, ಶಾಲೆಗಳು ಹೋದ್ರೆ ಪರವಾಗಿಲ್ವಾ?… ಅಭಿವೃದ್ಧಿ ಬೇಕು, ಆದ್ರೆ ನೋಡಿ ಮಾಡ್ಬೇಕು!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿ 169 ಉಂಟು ಮಾಡಿರುವುದು ಬದುಕಿನ ಅಳಿವು ಉಳಿವಿನ ಪ್ರಶ್ನೆ.ಈ ಹೆದ್ದಾರಿ ಹಲವರ ಬದುಕಿಗೆ ಮಾರಕವಾದಂತಿದೆ. ರಾಷ್ಟ್ರೀಯ ಹೆದ್ದಾರಿ 169 ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ, ಕೆಲವರು ವಯಕ್ತಿಕ ಹಿತಾಸಕ್ತಿಯಿಂದ ಈ ಯೋಜನೆಗೆ ಅಡ್ಡಗಾಲು ಎಂದಿದ್ದಾರೆ. ಆದರೆ ಇದರಲ್ಲಿ ಯಾರ ಹಿತಾಸಕ್ತಿ ಮತ್ತು ಯಾರಿಗಾಗಿ ಎನ್ನುವುದೇ ಯಕ್ಷ ಪ್ರಶ್ನೆ. ಈ ಚಥುಷ್ಪತ ರಸ್ತೆ ಏಕೆ? ಯಾರಿಗಾಗಿ? ಎಂಬ ಜನ ಸಾಮಾನ್ಯರ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.ತೀರ್ಥಹಳ್ಳಿ ಕೊಪ್ಪ ವೃತ್ತದಿಂದ ನೆಲ್ಲಿಸರ ಕ್ಯಾಂಪ್ ವರೆಗೆ ಮಾತ್ರ ಚತುಷ್ಪಥವಂತೆ.‌ ಮುಂದೆ ಶಿವಮೊಗ್ಗಕ್ಕೆ ಅಲ್ಲಿಂದ ಈಗಿರುವ ದ್ವಿಪಥದಲ್ಲೇ ಸಾಗಬೇಕಂತೆ.

ಅದ್ಯಾಕೆ ಹೀಗೆ?. ಮಧ್ಯದ ಈಗಿರುವ ರಸ್ತೆಯನ್ನೇ 30/35 ಕಿಲೋಮೀಟರ್ ರಸ್ತೆ ಮೇಲ್ದರ್ಜೆಗೇರಿಸಲು ಮಂಜೂರಾತಿ ಮೊತ್ತ 537 ಕೋಟಿಯಷ್ಟು ಆದರೆ ಪರಿಹಾರ ಮೊತ್ತ 74ಕೋಟಿ. ಬಡವರು, ಮಧ್ಯಮವರ್ಗದವರೆ ಹೆಚ್ಚಾಗಿ ನೆಲೆ ಕಂಡು ಬದುಕುತ್ತಿರುವ ಈ ರಸ್ತೆಯ ಅಕ್ಕಪಕ್ಕ ಹೆದ್ದಾರಿ ಸಂಚರಿಸಿದರೆ, ಮಾನವನ ಹಾಗು ಮಲೆನಾಡಿನ ಬದುಕಿನ ವಿನಾಶವೇ ಸರಿ. ಹಲವರು ಮನೆ ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಮತ್ತಷ್ಟು ಜನ ಇರುವ ಅಲ್ಪ ಸ್ವಲ್ಪ ತುಂಡು ಜಮೀನು, ಜೀವನೋಪಾಯಕ್ಕಾಗಿ ಮಾಡಿಕೊಂಡ ಕೃಷಿ ಹೊಂಡ, ನೀರಾವರಿ ವ್ಯವಸ್ಥೆ ಕಳೆದುಕೊಂಡು ಸಂತ್ರಸ್ತರಾಗುತ್ತಾರೆ. ಇದು ಬದುಕಿನ ಪ್ರಶ್ನೆ, ಬದುಕಿಗಾಗಿ ಹೋರಾಟ ಸಂತ್ರಸ್ತರಾಗುವವರಿಗೂ ಹಾಗು ಮುಂದೆ ಸಂತ್ರಸ್ತರಾಗಬಹುದಾದವರಿಗೂ ಸರಿಯಾದ ಮಾಹಿತಿಯನ್ನೇ ನೀಡದೆ ಭೂ ಸ್ವಾಧೀನಕ್ಕೆ ಮುಂದಾಗಿರುವ ಸಂಬಂಧ ಪಟ್ಟ ಇಲಾಖೆಗೆ ಏನು ಹೇಳಬೇಕು? ಅದಲ್ಲದೆ ಇಂದು ಸಂತ್ರಸ್ತರಾಗಿ ಬೀದಿಗೆ ಬೀಳಲಿರುವವರು ರಸ್ತೆ ಪರಿಹಾರದ ಮೊತ್ತ ಪಡೆಯಲು ನೂರೆಂಟು ವಿಘ್ನಗಳಿವೆ. ಹಲವಾರು ದಾಖಲೆ ಪತ್ರಗಳು ಬೇಕು.

ಮಲೆನಾಡಿನ ಯಾವ ಬಡ ರೈತನ ಬಳಿ ಯಾವ ದಾಖಲೆಗಳಿವೆ ನೀವೇ ಹೇಳಿ? ದಾಖಲೆ ಸರಿಪಡಿಸಿಕೊಳ್ಳಲು ಹತ್ತಾರು ವರ್ಷಗಳಿಂದ ಸುತ್ತುತ್ತಿರುವವರ ಪಾಡು ನಾಯಿ ಪಾಡಾಗಿರುವಾಗ ಈ ಚತುಷ್ಪಥ ಯೋಜನೆಯ ಲಾಭ ಯಾರಿಗಾಗಿ? ಯಾರ ಒಳಿತಿಗಾಗಿ? ಎಂಬುದು ಮೊದಲು ತಿಳಿಯಬೇಕಾಗುತ್ತದೆ. ಈ ಹೆದ್ದಾರಿಯಲ್ಲಿ 10,000 ವಾಹನ ಓಡಾಟ ಮಾಡುತ್ತವೆ ಎಂದು ಉದ್ದೇಶಿತ ಕಾಮಗಾರಿ ಮಂಜೂರಾತಿ ದೊರೆತಿದೆ. ಆದರೆ ಅಷ್ಟು ವಾಹನ ಸಂಚಾರ ದಟ್ಟಣೆ ಇದೆಯೇ ಎಂಬುದೇ ಅನುಮಾನ. ಹಾಗಿರುವಾಗ ಬಹಿರಂಗವಾಗಿ ಇದರ ಮಾಹಿತಿ ಹಂಚಿಕೊಳ್ಳಬೇಕು.

ಮಲೆನಾಡನ್ನು ಉಳಿಸುವುದು ಹೀಗಾ?

ಮಲೆನಾಡಿನ ಪರಿಸರ ಅತೀ ಸೂಕ್ಷ್ಮ ಪರಿಸರ ಎಂದೆಲ್ಲ ವರದಿಗಳ ಮೇಲೆ ವರದಿಗಳನ್ನು ಮಾಡುತ್ತಿರುವವರು, ರಸ್ತೆ ಅಗಲೀಕರಣ ಯೋಜನೆಯಿಂದ ಪರಿಸರ ಸರ್ವ ನಾಶವಾಗುತ್ತಿರುವ ಬಗ್ಗೆ ಮೌನ ವಹಿಸಿರುವುದು ವಿಪರ್ಯಾಸವೇ ಸರಿ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಾಗಲಿರುವ ಈ ಹೆದ್ದಾರಿಯಲ್ಲಿ ಹಲವಾರು ಅಳಿವಿನಂಚಿನಲ್ಲಿರುವ ಮರಗಳ ಮಾರಣ ಹೋಮಕ್ಕೆ ಈ ಹೆದ್ದಾರಿ ವಿಸ್ತರಣೆ ಸಾಕ್ಷಿಯಾಗಲಿದೆ. 4 ಪಥದ ರಸ್ತೆಗೆ ಟೋಲ್ ಇದೆಯೋ ಇಲ್ಲವೇ ಎಂಬ ಬಗ್ಗೆ ಗೊಂದಲವಿದೆ. ಯಾವುದೇ ಸ್ಪಷ್ಟ ಮಾಹಿತಿ ಜನ ಸಾಮಾನ್ಯರಿಗೆ ಇನ್ನೂ ತಿಳಿದಿಲ್ಲ.

ಅರಣ್ಯ ಇಲಾಖೆಯ ನಿರ್ಲಕ್ಷ್ಯ ಏಕೆ?

ಸಾಮಾನ್ಯ ರೈತರು ಮರ ಕಡಿದರೆ, ಕೇಸು ಕೋರ್ಟ್ ಎಂದು ಬರುವ ಅರಣ್ಯ ಇಲಾಖೆ ಇಡೀ ಹೆದ್ದಾರಿ ವಿಸ್ತರಣೆಗೆ ಜಾಣ ಮೌನವಹಿಸಿ ಅನುಮತಿ ನೀಡಿರುವುದು ಯಾರ ಒತ್ತಡಕ್ಕೆ ಮಣಿದು ಎಂದು ಆ ದೇವರೇ ಬಲ್ಲ. ಈಗಾಗಲೇ ಬರಿದಾಗುತ್ತಿರುವ ನೀರಿನ ಹರಿವು, ತುಂಗಾ ನದಿಗೆ ಸೇರುವ ಹಳ್ಳ ಕೊಳ್ಳಗಳ ಮೇಲೆ ಗುಡ್ಡಗಳನ್ನೇ ನುಂಗಿ ಮಣ್ಣು ಸುರಿದು ನೀರಿನ ಹರಿವು ಬದಲಾದರೆ, ಮತ್ತು ಪ್ರಕೃತಿ ತನ್ನ ಮಾರ್ಗದಲ್ಲಿ ಸಂಚರಿಸಿ ಪ್ರಕೃತಿ ಸಹಜವಾದ ತನ್ನ ರೌದ್ರವತಾರ ಪ್ರದರ್ಶಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇದಕ್ಕೆ ಹೊಣೆ ಯಾರು ಎಂಬುದೇ ಆ ದಿನ ಪ್ರಶ್ನೆಯಾಗಿ ಉಳಿಯಬಹುದು.

ಸರ್ಕಾರಿ ಶಾಲೆಗಳು ವಿನಾಶದತ್ತ!

ವರ್ಷಗಳ ಇತಿಹಾಸವಿರುವ ಸಾರ್ವಜನಿಕ ಶಾಲೆಗಳನ್ನು ಗುರಿಯಾಗಿಸಿರುವ ಈ ರಸ್ತೆ ವಿಸ್ತರೀಕರಣ, ನಾಳೆ ದಿನ ಬಡವರ ಮಕ್ಕಳ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ಕೊಂಡೊಯ್ಯಬಹುದು ಎಂಬುದು ಸಾರ್ವಜನಿಕರ ವಲಯದಲ್ಲಿರುವ ಅಭಿಪ್ರಾಯ. ಸರ್ವಿಸ್ ರಸ್ತೆ ಇದೆಯೇ ಎಂದರೆ ಯಾರ ಬಳಿಯೂ ಉತ್ತರವಿಲ್ಲ. ನೆಲ್ಲಿಸರ ಕ್ಯಾಂಪ್ ನಂತರ ರಸ್ತೆ ವಿಸ್ತರಣೆಗೆ ಶೆಟ್ಟಿಹಳ್ಳಿ ಅಭಯಾರಣ್ಯ ದೊಡ್ಡ ತಡೆಗೋಡೆಯಾಗಿ ನಿಂತಿದೆ. ಆದರೆ ಅರಣ್ಯ ಉಳಿಸುವ ಮಾತನಾಡುವ ಇಲಾಖೆ ಮೌನವಾಗಿ ಈ ಯೋಜನೆಗೆ ಸಮ್ಮತಿ ಸೂಚಿಸಿ ಕೈ ಚೆಲ್ಲಿ ಕುಳಿತಂತಿದೆ. ಇದೆಲ್ಲ ಅರಿತ ರೈತರು ಜನಸಾಮಾನ್ಯರು ಈ ಹೆದ್ದಾರಿ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನೈಜ ಅರಣ್ಯ ನಾಶಕ್ಕೆ ಈ ಹೆದ್ದಾರಿ ವಿಸ್ತರಣೆ ಸಹಜ ಅರಣ್ಯ ಪ್ರದೇಶದ ಮೇಲೆ ತನ್ನ ಕದಂಬ ಬಾಹುಗಳನ್ನು ಚಾಚಿ ಬಿಟ್ಟಿದೆ.

ಜನರ ಬದುಕು ಮಾಯ!

ಸೂಕ್ತವಾದ ಪರಿಹಾರ ಬರುವ ಯಾವ ಸಾಧ್ಯತೆಯೂ ಇಲ್ಲದೆ ಸಂತ್ರಸ್ತರಿಗೆ ಯಾರ ಬಳಿ ನೋವು ತೋಡಿಕೊಳ್ಳುವುದೋ ಎಂಬ ಸಂಕಟ ಎದುರಾಗಿದೆ. ಈ ರೀತಿಯಾಗಿ ಜನರ ಜೀವನಕ್ಕೆ ಬೆಂಕಿ ಇಡುವ ಯೋಜನೆ ಕೈ ಬಿಟ್ಟು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ಕೇಳುತ್ತಿದ್ದಾರೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಈ ಹೆದ್ದಾರಿ ಅಗಲೀಕರಣದ ವಿರುದ್ಧ ಹೋರಾಟ ಮಾಡುತ್ತಿಲ್ಲ. ಅಳಿವು ಉಳಿವಿನ ಪ್ರಶ್ನೆ ತುತ್ತು ಅನ್ನದ ಪ್ರಶ್ನೆ ಇದಾಗಿದ್ದು ಸೂಕ್ತ ಪರಿಹಾರ, ಪರ್ಯಾಯ ವ್ಯವಸ್ಥೆಗಳು,ಈ ಯೋಜನೆ ಜನರ ಮತ್ತು ಪ್ರಕೃತಿ ಪರ ಇಲ್ಲದೇ‌ ಹೋದಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂಬುದಾಗಿ ನೊಂದ ಸಂತ್ರಸ್ತರು, ಸಾರ್ವಜನಿಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.