ತೀರ್ಥಹಳ್ಳಿಯ ಸ್ವಾತಿಗೆ ಮಿಸ್ ಕರ್ನಾಟಕ ಪ್ರಶಸ್ತಿ!
– ರಾಷ್ಟ್ರ, ರಾಜ್ಯ ಮಟ್ಟದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಗೆಲುವು
– ಕೋಣಂದೂರು ನಿವಾಸಿ ಮಂಜುನಾಥ, ಪಾರ್ವತಿ ದಂಪತಿಗಳ ಪುತ್ರಿ
NAMMUR EXPRESS NEWS
ತೀರ್ಥಹಳ್ಳಿ: ಮಾಡೆಲಿಂಗ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ತೀರ್ಥಹಳ್ಳಿ ಹುಡುಗಿ ಸ್ವಾತಿ ಕಿರೀಟ ತನ್ನದಾಗಿಸಿಕೊಂಡಿದ್ದಾರೆ.
ಕೋಣಂದೂರು ಮುಖ್ಯರಸ್ತೆಯ ನಿವಾಸಿಗಳಾದ ಮಂಜುನಾಥ ಮತ್ತು ಪಾರ್ವತಿ ದಂಪತಿಗಳ ಪುತ್ರಿ ಕೆ.ಎಂ.ಸ್ವಾತಿ ಈಚೆಗೆ ನಡೆದ ವಿವಿಧ ವಿಭಾಗದ ಮಾಡೆಲಿಂಗ್ ಸ್ಪರ್ಧೆಯಲ್ಲಿ (ಸೌಂದರ್ಯ) ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭರವಸೆಯ ಮಾಡಲಿಂಗ್ ಆಗಿ ಹೊರಹೊಮ್ಮುತ್ತಿದ್ದಾರೆ.
ಕಳೆದ ಒಂದು ವರ್ಷದಿಂದೀಚೆಗಷ್ಟೇ ಪ್ರಾರಂಭವಾದ ತಮ್ಮ ಮಾಡೆಲಿಂಗ್ ಜರ್ನಿ ಅನೇಕ ವಿಶೇಷ ಮತ್ತು ಅಚ್ಚರಿಗಳಿಗೆ ಸಾಕ್ಷಿಯಾಗಿದೆ.
ಹಲವು ಪ್ರಶಸ್ತಿಗಳನ್ನು ಗೆದ್ದ ಸ್ವಾತಿ
2023ರ ಮಾರ್ಚ್ ತಿಂಗಳಲ್ಲಿ ಹೈದರಾಬಾದಿನಲ್ಲಿ ನಡೆದ ಮಿಸ್ ಶಿವಮೊಗ್ಗ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆಯುವ ಮೂಲಕ ತಮ್ಮ ಮಾಡೆಲಿಂಗ್ ಜರ್ನಿ ಪ್ರಾರಂಭಿಸಿದರು. ದೆಹಲಿಯಲ್ಲಿ ನಡೆದ ಮಿಸ್ ರೈಸಿಂಗ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಗ್ಲೋರಿ ಆಫ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ದೆಹಲಿಯಲ್ಲಿ ಕಳೆದ ಮೇ 27ರಂದು ನಡೆದ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ಐಕಾನ್ ಅವಾರ್ಡ್, ಜೊತೆಗೆ ಮಿಸ್ ಭಾರತ್ ಸೌತ್ ಇಂಡಿಯಾಸ್ ಗ್ಲೋರಿ ಅವಾರ್ಡ್, ಅಮೈಟಿ ಮತ್ತು ಪೀಸ್ ಕೆಟಗರಿಯಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಮತ್ತಷ್ಟು ಭರವಸೆ ಮೂಡಿಸಿದರು. ಬಿಹಾರದಲ್ಲಿ ಜೂನ್ 8ರಂದು ನಡೆದ ಎಫ್.ಬಿ.ಬಿ.ಗ್ಲೋಬಲ್ ಇಂಡಿಯಾ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮಿಸ್ ಕರ್ನಾಟಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ. ಇದರೊಂದಿಗೆ ಹೆಸರಾಂತ ಸೀರೆ ಹಾಗೂ ಆಭರಣಗಳ ರಾಯಭಾರಿಯನ್ನಾಗಿ ಸಹ ಇವರಿಗೆ ಅವಕಾಶಗಳು ಬರುತ್ತಿವೆ.
ಬಾಲ್ಯದಿಂದಲೂ ಮಾಡೆಲ್ ಆಗುವಾಸೆ…!
ಬಾಲ್ಯದಿಂದಲೂ ಮಾಡೆಲಿಂಗ್ ಆಗಬೇಕೆನ್ನುವ ಬಯಕೆಗೆ ವೇದಿಕೆಯನ್ನು ಸಂಪಾದಿಸುವಲ್ಲಿ ಈಕೆಗೆ ನೆರವಾಗಿದ್ದು, ತಮ್ಮ ಸ್ವಾಭಾವಿಕ ಮೈಕಾಂತಿ. ಯಾವುದೇ ಸೌಂದರ್ಯವರ್ಧಕಗಳನ್ನು ಇವರು ಬಳಸುವುದಿಲ್ಲ. 5 ರಿಂದ 10 ವಿಭಿನ್ನ ಸುತ್ತುಗಳಲ್ಲಿ ನಡಿಗೆ, ಪ್ರಶ್ನೋತ್ತರ, ಪ್ರಾದೇಶಿಕ ವಿಭಿನ್ನತೆ ಪ್ರದರ್ಶನ, ಹವ್ಯಾಸಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ. ತೀರಾ ಅಪರೂಪದ ನವೀನ ಜರ್ನಿಯಲ್ಲಿ ಸಾಗುತ್ತಿರುವ ಸ್ವಾತಿಯವರ ಮುಂದೆ ಅಚ್ಚರಿಯ ಆಯ್ಕೆ, ಅವಕಾಶಗಳಿವೆ.
