ತೀರ್ಥಹಳ್ಳಿ ಪಟ್ಟಣ ಸುತ್ತ ಮುತ್ತ ಮಂಗನ ಕಾಯಿಲೆ ಹೆಚ್ಚಳ..!!
– ಗ್ರಾಮೀಣ ಜನರಲ್ಲಿ ಆತಂಕ ಸೃಷ್ಟಿಸಿದ ಮಂಗನ ಕಾಯಿಲೆ
– ಹೆದ್ದೂರು ಗ್ರಾ.ಪಂ.ವ್ಯಾಪ್ತಿ ಅತೀ ಹೆಚ್ಚು ಪ್ರಕರಣ ದಾಖಲು
NAMMUR EXPRESS NEWS
ತೀರ್ಥಹಳ್ಳಿ : ಹಲವು ದಶಕದಿಂದ ನಿರಂತರವಾಗಿ ಕಾಡುತ್ತಿರುವ ಮಂಗನ ಕಾಯಿಲೆ ಜ್ವರ ಪ್ರಕರಣ ಈ ವರ್ಷವು ತಾಲೂಕಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗೋಚರಿಸಿದೆ. ಬೇಸಿಗೆ ಅವಧಿಯಲ್ಲಿ ಹೆಚ್ಚಾಗಿ ಕಂಡು ಬರುವ ಮಂಗನಕಾಯಿಲೆ ಜ್ವರ ಗ್ರಾಮೀಣ ಜನರನ್ನು ಆತಂಕಕ್ಕೆ ದಾರಿ ಮಾಡಿದೆ. ಜ್ವರ ನಿಯಂತ್ರಣ, ಮುನ್ನೆಚ್ಚರಿಕೆ ಕ್ರಮಕ್ಕೆ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಹಲವು ಉಪಯುಕ್ತ ಕ್ರಮಗಳ ನಡುವೆ ಜ್ವರ ಅನೇಕರಲ್ಲಿ ಕಂಡುಬಂದಿದ್ದು ಹೆದ್ದೂರು, ತ್ರಿಯಂಬಕಪುರ, ಬಸವಾನಿ, ದೇವಂಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣ ಕಂಡುಬಂದಿದೆ.
ರಕ್ತ ಪರೀಕ್ಷೆ ವರದಿ ಶೀಘ್ರ : ಈವರೆಗೆ 1569 ರಕ್ತಪರೀಕ್ಷೆ ವರದಿಗೆ ಮಾದರಿ ಸಂಗ್ರಹಿಸಲಾಗಿದೆ. ಮಂಗನಕಾಯಿಲೆ ಜ್ವರ ಪೀಡಿತರ ರಕ್ತಪರೀಕ್ಷೆಗೆ ಆರೋಗ್ಯ ಇಲಾಖೆ ತುರ್ತು ಕ್ರಮ ವಹಿಸಿದೆ. ಸರಕಾರಿ ತಾಲೂಕು ಜೆಸಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಘಟಕ, ಖಾಸಗಿ ಆಸ್ಪತ್ರೆಗಳಲ್ಲಿ ಸಂಗ್ರಹಿಸಲಾಗುವ ರಕ್ತದ ಪರೀಕ್ಷೆ ವರದಿ 24 ಗಂಟೆಯೊಳಗೆ ದೊರೆಯುವಂತೆ ವ್ಯವಸ್ಥೆ ಕಲ್ಪಿಸಿದೆ. ಶಿವಮೊಗ್ಗ ಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರ ರಕ್ತಪರೀಕ್ಷೆ ವರದಿಯನ್ನು ಅತೀ ಶೀಘ್ರವಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜ್ವರಪೀಡಿತರಿಗೆ ತ್ವರಿತ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕ್ರಮವಹಿಸಿದೆ.
2025 ಜನವರಿ ತಿಂಗಳಲ್ಲಿ 5, ಫೆಬ್ರವರಿಯಲ್ಲಿ 18, ಮಾರ್ಚನಲ್ಲಿ 25 ಮಂಗನಕಾಯಿಲೆ ಜ್ವರದ ಪ್ರಕರಣ ಪತ್ತೆ ಆಗಿದೆ. ಕಟಗಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ 31, ದೇವಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ 5, ಹಾರೋಗೊಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ 6, ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ತ್ರಿಯಂಬಕಪುರ 4, ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ 2, ಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಉಣ್ಣೆಯಲ್ಲಿ ಮಂಗನ ಕಾಯಿಲೆ ಜ್ವರ ಇರುವ ಪ್ರಕರಣ ದೃಢಪಟ್ಟಿದೆ. ಈ ವರ್ಷ ತೀರ್ಥಹಳ್ಳಿ ಸಮೀಪದ ಮೇಲಿನಕುರುವಳ್ಳಿ ಗ್ರಾಮದಲ್ಲೂ2 ಮಂಗನ ಕಾಯಿಲೆ ಜ್ವರದ ಪ್ರಕರಣ ಗೋಚರಿಸಿದೆ. ಮಾರ್ಚ್ ತಿಂಗಳಲ್ಲಿ ಅತೀ ಹೆಚ್ಚು ಪ್ರಕರಣ ಪತ್ತೆ ಆಗಬಹುದು ಎಂಬ ಲೆಕ್ಕಾಚಾರ ಆರೋಗ್ಯ ಇಲಾಖೆಯಲ್ಲಿದ್ದರೂ ನಿರೀಕ್ಷೆ ಪ್ರಕರಣ ಪತ್ತೆಯಾಗಿಲ್ಲ.
ರೋಗಗ್ರಸ್ತ ಮಂಗಕ್ಕೆ ಕಚ್ಚುವ ಉಣ್ಣೆ ಮನುಷ್ಯನಿಗೆ ಕಾಡಿಗೆ ತೆರಳಿದ್ದಾಗ ಕಚ್ಚದಂತೆ ಮುಂಜಾಗ್ರತೆ ವಹಿಸಲು ಈ ಹಿಂದೆ ಡಿಎಂಪಿ ತೈಲ ಬಳಸಲಾಗುತ್ತಿತ್ತು. ಕೈಕಾಲಿಗೆ ಹಚ್ಚುವ ಡಿಎಂಪಿ ತೈಲ ಸುಮಾರು 4 ಗಂಟೆ ಪರಿಣಾಮಕಾರಿ ಆಗಿರುತ್ತಿತ್ತು. ಈಗ 6 ಗಂಟೆ ಪ್ರಭಾವ ಇರುವ ಡಿಫಾ ತೈಲ ಸಂಶೋಧಿಸಿ ವಿತರಣೆ ಮಾಡಲಾಗಿದೆ. ಉಷ್ಣಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ಈ ವರ್ಷ ಮಂಗನಕಾಯಿಲೆ ಜ್ವರದ ಪ್ರಕರಣ ಹೆಚ್ಚು ಕಂಡು ಬರುವ ನಿರೀಕ್ಷೆ ಇತ್ತು. ಜ್ವರ ನಿಯಂತ್ರಣ, ಸೂಕ್ತ ಚಿಕಿತ್ಸೆಗೆ ಎಲ್ಲ ಕ್ರಮ ಜರುಗಿಸಲಾಗಿದೆ. ಜನರು ಆತಂಕಪಡುವ ಅಗತ್ಯ ಇಲ್ಲ. ಜ್ವರಕ್ಕೆ ತಕ್ಷಣದಲ್ಲಿ ಚಿಕಿತ್ಸೆ ಪಡೆಯಲು ಜನರು ಮುಂದಾಗಬೇಕು.
