ತೀರ್ಥಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಖೋ ಖೋ!
– ದೇಶದ ಮೂಲೆ ಮೂಲೆಯಿಂದ ಬರಲಿವೆ ತಂಡ
– ಮಾರಿಕಾಂಬಾ ಜಾತ್ರೆ ಪ್ರಯುಕ್ತ ಶ್ರೀ ಮಾರಿಕಾಂಬ ಕಪ್
– ಮಾರ್ಚ್ 14,15,16 &17ರಂದು ತೀರ್ಥಹಳ್ಳಿಯಲ್ಲಿ ಪಂದ್ಯಾಟ
NAMMUR EXPRESS NEWS
ತೀರ್ಥಹಳ್ಳಿ: ಏಕಲವ್ಯ ಸ್ಪೋರ್ಟ್ಸ್ ಕ್ಲಬ್ (ರಿ.) ತೀರ್ಥಹಳ್ಳಿ ಶ್ರೀ ಮಾರಿಕಾಂಬ ದೇವಸ್ಥಾನ (ರಿ), ತೀರ್ಥಹಳ್ಳಿ ಇವರ ಸಹಭಾಗಿತ್ವದಲ್ಲಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಗೆ ಭರ್ಜರಿ ಸಿದ್ಧತೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಕ್ರೀಡಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶ್ರೀ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಶ್ರೀ ಮಾರಿಕಾಂಬ ಕಪ್ 2024 ರಾಷ್ಟ್ರಮಟ್ಟದ ಪುರುಷರ ಹಾಗೂ ಮಹಿಳೆಯರ ಖೋ-ಖೋ ಪಂದ್ಯಾವಳಿ ನಡೆಸುತ್ತಿದ್ದು, ಮಾರ್ಚ್ 14,15,16 ಮತ್ತು 17ರಂದು ತೀರ್ಥಹಳ್ಳಿಯ ಎಪಿಎಂಸಿ ಪಕ್ಕ ನಡೆಸಲಾಗುವುದು. ಈ ಪಂದ್ಯಾವಳಿಯಲ್ಲಿ ಹೊರ ರಾಜ್ಯದ 14 ತಂಡಗಳು ಭಾಗವಹಿಸುತ್ತಿವೆ. ಎಪಿಎಂಸಿ ಪಕ್ಕ ಈಗಾಗಲೇ ಮೈದಾನ ಸಿದ್ಧತೆ ನಡೆದಿದೆ.
ಏಕಲವ್ಯ ಕ್ಲಬ್ ವತಿಯಿಂದ 2ನೇ ರಾಷ್ಟ್ರಮಟ್ಟದ ಟೂರ್ನಿ
ಏಕಲವ್ಯ ಕ್ಲಬ್ ವತಿಯಿಂದ 2ನೇ ರಾಷ್ಟ್ರಮಟ್ಟದ ಪುರುಷರ ಹಾಗೂ ಮಹಿಳೆಯರ ಈ ಖೋ-ಖೋ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ತೀರ್ಥಹಳ್ಳಿಯನ್ನು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದ ಏಕಲವ್ಯ ಕ್ಲಬ್ನ ಆಟಗಾರರಾಗಿದ್ದು ನಮ್ಮನ್ನು ಅಗಲಿರುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ದಿ। ವಿನಯ್ ಗೌಡ ಹಾಗೂ ದಿ|| ನಂದಿಕೇಶ್ವರ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುವುದು. ಭಾರತದ ಕ್ರೀಡಾ ನಕಾಶೆಯಲ್ಲಿ ತೀರ್ಥಹಳ್ಳಿಯ ಹೆಸರನ್ನು ರಾರಾಜಿಸುವಂತೆ ಮಾಡುವ ಈ ಐತಿಹಾಸಿಕ ಹಾಗೂ ಭಾವನಾತ್ಮಕ ಖೋ-ಖೋ ಪಂದ್ಯಾವಳಿಗೆ ಕ್ರೀಡಾ ಪೋಷಕರು, ಕ್ರೀಡಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ, ಭಾಗವಹಿಸಿ ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಬೇಕಾಗಿ ಆಯೋಜಕರು ಮನವಿ ಮಾಡಿದ್ದಾರೆ. ತೀರ್ಥಹಳ್ಳಿಯ ನೂರಾರು ಮಂದಿ ಯುವಕರು ಈ ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
