ತೀರ್ಥಹಳ್ಳಿಯಲ್ಲಿ ಹೊಸದಾಗಿ ಕಟ್ಟಿರುವ ಕಟ್ಟಡಗಳು ಸೋರುತ್ತಿದೆ..!
– ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು!
– ಆರ್ ಎಂ ಮಂಜುನಾಥ್ ಗೌಡ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಕಾಂಗ್ರೆಸ್ ಗಾಂಧಿ ಭವನದಲ್ಲಿ ಬುಧವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ಎಂ ಮಂಜುನಾಥ್ ಗೌಡ ಅವರು ತೀರ್ಥಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮೀಣ ಸೌಧ, ಪೊಲೀಸ್ ಸ್ಟೇಷನ್, ಅಗ್ನಿಶಾಮಕ ಕೇಂದ್ರ ಹಾಗು ರಸ್ತೆಗಳ ಅವೈಜ್ಞಾನಿಕ ಕಾಮಗಾರಿಗಳ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್ ಎಂ ಮಂಜುನಾಥ್ ಗೌಡ ಅವರು ಎರಡು ಮೂರು ದಿನಗಳಿಂದ ಮಳೆ ಹೆಚ್ಚಾಗಿದೆ, ಆದರೆ ಮಳೆಗೆ ಸಂಬಂಧಪಟ್ಟಂತೆ ತೀರ್ಥಹಳ್ಳಿ ತಾಲೂಕಿನಲ್ಲಿ ಹೊಸದಾಗಿ ಕಟ್ಟಿರುವಂತಹ ಕಟ್ಟಡಗಳು ಸೋರುತ್ತಿದೆ. ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಬರಗಾಲ ಬರುತ್ತದೆ ಎಂದು ಆರೋಪ ಮಾಡಿದವರು. ಮಳೆ ಬಿಸಿಲಿಗು, ಸರ್ಕಾರ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಪೊಲೀಸ್ ಕಟ್ಟಡದ ಉದ್ಘಾಟನೆಗೆ ಗೃಹ ಸಚಿವ ಪರಮೇಶ್ವರ್ ರವರು ಬರಬೇಕಾಗಿತ್ತು, ಹವಾಮಾನದ ವೈಪರಿತ್ಯದಿಂದಾಗಿ ಅವರು ಬರುವಂತಹ ವಿಮಾನ ಕೆಳಗೆ ಇಳಿಯಲು ಆಗದೆ ವಾಪಸ್ ಹೋಗುವ ಸಂದರ್ಭ ಬಂದಾಗ ಮಧು ಬಂಗಾರಪ್ಪ ಅವರು ತೀರ್ಥಹಳ್ಳಿಗೆ ಬಂದು ಉದ್ಘಾಟನೆಯಲ್ಲಿ ಪಾಲ್ಗೊಂಡರು.
ಒಂದು ಸರ್ಕಾರಿ ಕಟ್ಟಡಗಳು ಪ್ರಾರಂಭವಾಗಿ ಕೇವಲ ಆರು ಏಳು ತಿಂಗಳಿನ ಒಳಗೆ ಅತ್ಯಂತ ಹೆಚ್ಚು ಹಣವನ್ನು ವ್ಯಯ ಮಾಡುವುದರ ಜೊತೆಗೆ ತಾಂತ್ರಿಕ ತಜ್ಞರ ಮತ್ತು ವಿನ್ಯಾಸಕಾರರ ಇಟ್ಟುಕೊಂಡು ಮುಂದುವರೆದ ಸಂದರ್ಭದಲ್ಲಿ ಈ ತರ ಆಗಿರುವುದು ಸರಿನಾ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ.
ವಿಶೇಷವಾಗಿ ನಮ್ಮ ಗ್ರಾಮೀಣ ಸೌಧದ ಉದ್ಘಾಟನಾ ಸಂದರ್ಭದಲ್ಲಿ ಕೂಡ ನಾನು ಭಾಗವಹಿಸಿದ್ದೆ, ಮೊನ್ನೆ ಡೆಂಗ್ಯೂ ಬಗ್ಗೆ ನಡೆದ ಮೀಟಿಂಗ್ನಲ್ಲಿ ನಾನು ಭಾಗವಹಿಸಿದಾಗ ನಮ್ಮ ಪಟ್ಟಣ ಪಂಚಾಯಿತಿಯವರು, ಚುನಾಯಿತ ಪ್ರತಿನಿಧಿಗಳು ಎಲ್ಲರೂ ಕೂತಿದ್ದೆವು ಆಗಲೇ ಮೂಲೆ ಮೂಲೆಯಲ್ಲಿ ನೀರು ಸೋರುತಿತ್ತು. ಮಳೆ ಪ್ರಾರಂಭವಾಗುತ್ತಿದ್ದಂತೆ ಅಲ್ಲಿ ಸೋರುತಿತ್ತು ಎಂದರೆ ನಾವು ಯೋಚನೆ ಮಾಡಬೇಕು. ಗುತ್ತಿಗೆದಾರರು ಇಂಜಿನಿಯರ್ ಹಾಗೂ ಸಂಬಂಧಪಟ್ಟ ಸಚಿವರಿಗೆ ನಾವು ಕೇಳಬೇಕಾಗುತ್ತದೆ. ತೀರ್ಥಹಳ್ಳಿಯಲ್ಲಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಹಾಗೂ ವಿನ್ಯಾಸಕಾರರಿಗೆ ತನಿಖೆ ಆಗಬೇಕು ಮತ್ತು ಅವರಿಗೆ ಕ್ರಮ ತೆಗೆದುಕೊಳ್ಳಬೇಕು ಎಂದರು. ತೀರ್ಥಹಳ್ಳಿಯ ಕಟ್ಟಡಗಳು ಸರ್ಕಾರದ ಅಂದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಕಟ್ಟಿದಂತಹ ವ್ಯವಸ್ಥೆಗಳು. ನಾನು 2002 ರಲ್ಲಿ ಮನೆ ಕಟ್ಟಿದ್ದೆ ಸುಮಾರು ಹತ್ತು ಹದಿನೈದು ವರ್ಷಗಳ ನಂತರ ಈಗ ಸೋರುತಿದೆ, ಆದರೆ ಇಲ್ಲಿ ಕಟ್ಟಡಗಳು ಕಟ್ಟಿ ಆರು ತಿಂಗಳು ಒಳಗೆ ಸೋರುತಿದೆ ಎಂದರೆ ಗುತ್ತಿಗೆದಾರರು ಅಥವಾ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಪೋಲಿಸ್ ವ್ಯವಸ್ಥೆಗೆ ನೈತಿಕ ಬೆಂಬಲ ಕೊಡಬೇಕು, ಪೊಲೀಸ್ ಗೆ ಯಾವ ಕಾರಣಕ್ಕೂ ಹಿನ್ನಡೆ ಆಗಬಾರದು ಎಂದರು. ತೀರ್ಥಹಳ್ಳಿಯ ಎಲ್ಲಾ ಕಟ್ಟಡಗಳು ಸೋಲುತ್ತಿದ್ದು ಈ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ತನಿಖೆ ಆಗಬೇಕು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು. ಹಾಗೂ ಮುಂದಿನ ದಿನಗಳಲ್ಲಿ ಈ ಹಗರಣಗಳ ಬಗ್ಗೆ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್,ಎಂ ಮಂಜುನಾಥಗೌಡ, ಕೆಸ್ತೂರ್ ಮಂಜುನಾಥ್, ಡಾ. ಸುಂದರೇಶ್, ಸಚಿಂದ್ರ ಹೆಗಡೆ, ವಿಶ್ವನಾಥ್ ಶೆಟ್ಟಿ, ದತ್ತಣ್ಣ, ಹಾರೋಗೊಳಗಿ ಪದ್ಮನಾಭ, ಹಾಗೂ ಪಕ್ಷದ ನಾಯಕರು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
