ತೀರ್ಥಹಳ್ಳಿ ನೂತನ ತಾಪಂ ಕಟ್ಟಡಕ್ಕೆ ಕಚೇರಿ ಶಿಫ್ಟ್!
– ತಾಲೂಕು ಪಂಚಾಯತಿ ಗ್ರಾಮೀಣಾಭಿವೃದ್ಧಿ ಭವನದ ಮೊದಲನೇ ಮಹಡಿಗೆ ಸ್ಥಳಾಂತರ
– ತೀರ್ಥಹಳ್ಳಿ ಪಟ್ಟಣಕ್ಕೆ ಹೊಸ ಕಳೆ ಕೊಟ್ಟಿರುವ ಕಟ್ಟಡ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಪಂಚಾಯಿತಿಯ ನೂತನ ಕಟ್ಟಡಕ್ಕೆ ಸರ್ಕಾರಿ ಕಚೇರಿಗಳು ಶಿಫ್ಟ್ ಆಗುತ್ತಿವೆ. ಕಟ್ಟಡದ ನಿರ್ಮಾಣ ಕಾಮಗಾರಿ ಜಾರಿಯಲ್ಲಿದ್ದ ಕಾರಣ ತಾಲೂಕು ಪಂಚಾಯತ್ ಕಚೇರಿ ಕಳೆದ ಮೂರು ವರ್ಷಗಳಿಂದ ರಥಬೀದಿಯ ರಾಮಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ತಾಲೂಕು ಪಂಚಾಯತ್ ನೂತನ ಕಟ್ಟಡ ಪೂರ್ಣಗೊಂಡಿರುವುದರಿಂದ, ತಾಲೂಕು ಪಂಚಾಯತ್ ಕಚೇರಿಯನ್ನು ರಥಬೀದಿಯ ರಾಮಮಂದಿರದಿಂದ ನೂತನವಾಗಿ ನಿರ್ಮಾಣವಾದ ಗ್ರಾಮೀಣಾಭಿವೃದ್ಧಿ ಭವನದ ಮೊದಲನೇ ಮಹಡಿಗೆ ಸ್ಥಳಾಂತರಿಸಲಾಗಿದೆ. ಸಾರ್ವಜನಿಕರು ಯಾವುದೇ ಪತ್ರ ವ್ಯವಹಾರ ಮಾಡುವುದಾದಲ್ಲಿ ಹೊಸ ಕಟ್ಟಡ ವಿಳಾಸವನ್ನು ಬಳಸಲು ತಾಲೂಕು ಪಂಚಾಯತ್ ಆಡಳಿತ ಕೋರಿದೆ.
ತೀರ್ಥಹಳ್ಳಿ ಪಟ್ಟಣಕ್ಕೆ ಹೊಸ ಕಳೆ!
ತೀರ್ಥಹಳ್ಳಿ ಪಟ್ಟಣಕ್ಕೆ ಕಳೆ ನೀಡುವಂತೆ ತಾಲೂಕು ಪಂಚಾಯತ್ ನೂತನ ಕಟ್ಟಡ ಗ್ರಾಮಾಭಿವೃದ್ಧಿ ಭವನದ ಬೃಹತ್ ಕಟ್ಟಡ ತೀರ್ಥಹಳ್ಳಿ ಮಧ್ಯ ಭಾಗದಲ್ಲಿ ತಲೆ ಎತ್ತಿದೆ.
ಆರಗ ಜ್ಞಾನೇಂದ್ರ ಅವಧಿಯಲ್ಲಿ ವಿಶೇಷ ಕಟ್ಟಡ
ಸರ್ಕಾರದ ವಿಶೇಷ ಅನುದಾನದಲ್ಲಿ ಆರಗ ಜ್ಞಾನೇಂದ್ರ ಅವರ ವಿಶೇಷ ಫಲವಾಗಿ ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಗೊಂಡಿದೆ. ತೀರ್ಥಹಳ್ಳಿ ತಾಲೂಕಿನ ಎಲ್ಲಾ ಕಚೇರಿಗಳು ಒಂದೇ ಕಟ್ಟಡಕ್ಕೆ ಬರಲಿವೆ. ಇದರಿಂದಾಗಿ ತಾಲೂಕಿನ ಜನತೆಗೆ ಅತ್ಯಂತ ಅನುಕೂಲವಾಗಲಿದೆ. ರಾಜ್ಯದಲ್ಲೇ ಮಾದರಿಯಂತಿರುವ ಹಾಗೂ ತೀರ್ಥಹಳ್ಳಿಯ ಹೆಗ್ಗುರುತು ಆಗಿರುವ ಈ ಗ್ರಾಮೀಣಾಭಿವೃದ್ಧಿ ಭವನದಲ್ಲಿ ಬಹುತೇಕ ಎಲ್ಲಾ ಇಲಾಖೆ ಬರಲಿವೆ.
ಯಾವ ಯಾವ ಇಲಾಖೆ?
ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೈಗಾರಿಕಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ, ತಾಲೂಕು ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅಕ್ಷರ ದಾಸೋಹ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಹಾಗೂ ಕೈಗಾರಿಕಾ ಇಲಾಖೆ ಒಂದೇ ಸೂರಿನಡಿ ಸೇವೆ ಸಲ್ಲಿಸಲಿವೆ ಜೊತೆಗೆ ತಾಲೂಕು ಪಂಚಾಯಿತಿಯ ಆಡಳಿತ ಕಚೇರಿ, ಸಮ್ಮೇಳನ ಸಭಾಂಗಣ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಕೊಠಡಿಗಳು ಬರುತ್ತವೆ.
ಗಮನ ಸೆಳೆದ ಗಡಿಯಾರ!
ನೂತನ ಕಟ್ಟಡದ ಮೇಲ್ಬಾಗದಲ್ಲಿ ದೊಡ್ಡ ಗಡಿಯಾರ ಕೂಡ ಜೋಡಣೆ ಮಾಡಿದ್ದು ಇಡೀ ತೀರ್ಥಹಳ್ಳಿ ಪಟ್ಟಣಕ್ಕೆ ಗಂಟೆ ನಿನಾದವನ್ನು ಮೊಳಗಿಸಲಿದೆ. ಕಟ್ಟಡ ಅತ್ಯಂತ ಸುಂದರವಾಗಿದ್ದು ತೀರ್ಥಹಳ್ಳಿಗೆ ಒಂದು ಹೊಸ ಲುಕ್ ಕೊಟ್ಟಿದೆ.
