Categories
ತೀರ್ಥಹಳ್ಳಿ

ತೀರ್ಥಹಳ್ಳಿ ಎಳ್ಳಮವಾಸ್ಯೆಗೆ ಸಿದ್ಧತೆ ಶುರು

ತೀರ್ಥಹಳ್ಳಿ ಎಳ್ಳಮವಾಸ್ಯೆಗೆ ಸಿದ್ಧತೆ ಶುರು
– ಜಾತ್ರಾ ಸಮಿತಿ ಸುದ್ದಿಗೋಷ್ಠಿ: ಸರ್ವರ ಸಹಕಾರ ಕೋರಿದ ಸಮಿತಿ
– 18 ಲಕ್ಷರೂ ಬಜೆಟ್: ಧಾರ್ಮಿಕ – ಸಾಂಸ್ಕೃತಿಕ ವೈಭವ!

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ರಾಮೇಶ್ವರ ದೇವರ ಅದ್ಧೂರಿ ಜಾತ್ರೆಗೆ ಸಕಲ ರೀತಿಯ ತಯಾರಿಗಳೂ ನಡೆಯುತ್ತಿದ್ದು, ರಥಬೀದಿ ಸಿದ್ಧಗೊಳ್ಳುತ್ತಿದೆ. ಜನವರಿ 11, 12,13ರಂದು ಮೂರು ದಿನಗಳ ಕಾಲ ನಡೆಯಲಿರುವ ಪುರಾಣ ಪ್ರಸಿದ್ಧ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯನ್ನು ಶ್ರದ್ಧೆ, ಭಕ್ತಿಯೊಂದಿಗೆ ಅತ್ಯಂತ ವೈಭವಯುತವಾಗಿ ನೆರವೇರಿಸಲು ಸಿದ್ಧತೆ ಶುರುವಾಗಿದೆ. ಈ ಕುರಿತು ಮಾಹಿತಿ ನೀಡಲು ಜ.3ರಂದು ಜಾತ್ರಾ ಸಮಿತಿ ಪದಾ ಧಿಕಾರಿಗಳು ರಾಮೇಶ್ವರ ಕಲ್ಯಾಣ ಮಂದಿರದಲ್ಲಿ ಸುದ್ದಿ ಗೋಷ್ಠಿ ನಡೆಸಿದರು.

ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್‌ಕುಮಾರ್, ವಿಜಯಾ ಪದ್ಮನಾಭ, ವಾಣಿ ಗಣೇಶ್, ನಯನಾ ಶೆಟ್ಟಿ, ಶಶಿಧರ ಹಂದೆ, ಅಶೋಕ ಶೆಟ್ಟಿ, ಕುಕ್ಕೆ ಪ್ರಶಾಂತ್, ಸಿರಿಬೈಲ್ ಧರ್ಮೇಶ್, ಸುರಭಿ ಕಿಶೋರ್, ಜಯ ಪ್ರಕಾಶ್ ಶೆಟ್ಟಿ, ಲ.ಪಾಂಡುರಂಗಪ್ಪ, ಕುರುವಳ್ಳಿ ಪದ್ಮನಾಭ,ಶರಶ್ಚಂದ್ರ, ಚೇತನ್‌ ಕುಮಾ‌ರ್ ಹಾಜರಿದ್ದು ಈ ಬಾರಿ ಜಾತ್ರೋತ್ಸವವನ್ನು ಚೆಂದಗಾಣಿಸಲು ಸಮಸ್ತ ಮಹಾ ಜನತೆಯ ಸಹಕಾರಕ್ಕೆ ಮನವಿ ಮಾಡಿದರು. ಈ ಬಾರಿ ಜಾತ್ರೆಗೆ 18 ಲಕ್ಷ ರೂಪಾಯಿಗಳ ಬಜೆಟ್ ನಿಗಧಿ ಮಾಡಲಾಗಿದೆ. ಭಕ್ತಾಧಿಗಳು, ದಾನಿಗಳ ಸಹಕಾರದಿಂದ ಕಾಣಿಕೆ ಸಂಗ್ರಹಿಸಲಾಗುತ್ತದೆ. ಉದಾರ ಹೃದಯದಿಂದ ಸಹಕಾರಿಸಬೇಕಾಗಿ ಕೇಳಲಾಗಿದೆ.

ಕಾರ್ಯಕ್ರಮಗಳ ವಿವರ:

ಜ.9ರ ಮಂಗಳವಾರ: ಶ್ರೀ ಗಣಪತಿ ಪೂಜೆ, ಪುಣ್ಯಾಹ, ಶತರುದ್ರಾಭಿಷೇಕ, ದೇವನಾಂದಿ, ಧ್ವಜಾರೋಹಣ, ಸಾಯಂಕಾಲ ರಂಗಪೂಜೆ, ಅಂಕುರಾರೋಪಣ, ಭೇರಿತಾಡನ, ಕೌತುಕ ಬಂಧನ, ಬಲಿ ಉತ್ಸವಗಳು ನಡೆಯಲಿದೆ. ಜ.10ರ ಬುಧವಾರ ಅಗ್ನಿಜನನ, ಅಧಿವಾಸ ಹೋಮ, ಮಹಾಪೂಜೆ, ಬಲಿ, ಸಂಜೆ 4ಕ್ಕೆ ಪುರೋತ್ಸವ, ನಂತರ ರಂಗಪೂಜೆ, ಬಲಿ ಸೇರಿ ಇತರ ಪೂಜೆ ನಡೆಯಲಿದೆ. ಜ.11ರ ಗುರುವಾರ ಉಷಃ ಕಾಲದಲ್ಲಿ ಶ್ರೀ ಪರಶುರಾಮ ತೀರ್ಥಪೂಜೆ ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ, ಪ್ರಾತಃ ಕಾಲದಲ್ಲಿ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಬಲಿ, ಉತ್ಸವ ಹಾಗೂ ಸಂಜೆ ರಂಗಪೂಜೆ, ರಾತ್ರಿ ಬಲಿ ಉತ್ಸವ ನಡೆಯಲಿದೆ.

ಜ.12ರ ಶುಕ್ರವಾರ ಬೆಳಿಗ್ಗೆ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಉತ್ಸವ ಬಲಿ, ಶುಭ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಮನ್ಮಹಾರಥಾರೋಹಣ, ರಾತ್ರಿ ಭೂತ ಬಲಿ, ಶಯನೋತ್ಸವ ನಡೆಯಲಿದೆ. ಜ.13ರ ಶನಿವಾರ ಪ್ರಭೋದೋತ್ಸವ, ಚೂರ್ಣೋತ್ಸವ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಬಲಿ, ಸಾಯಂಕಾಲ ಉತ್ಸವ ರಾತ್ರಿ 7ಕ್ಕೆ ಅದ್ಧೂರಿ ತೆಪ್ಪೋತ್ಸವ, ಸಂಧಾನ, ಪೂರ್ಣಾಹುತಿ, ಧ್ವಜ ಅವರೋಹಣ, ಪ್ರಸಾದ ವಿತರಣೆ ನಡೆಯಲಿದೆ. ಜ.15ರ ಭಾನುವಾರದಂದು ಶುಭ ಅಭಿಜಿನ್ ಮುಹೂರ್ತ ದಲ್ಲಿ ಮಕರ ಸಂಕ್ರಾಂತಿ ರಥೋತ್ಸವ ನಡೆಯಲಿದೆ. ಈಗಾಗಲೇ ಜೈಂಟ್ ವೀಲ್ ಬಂದಿಳಿದಿದ್ದು, ಬೀದಿಯ ಜಾಗವನ್ನು ವ್ಯಾಪಾರಿಗಳು ಆಕ್ರಮಿಸಿಕೊಳ್ಳುತ್ತಿದ್ದಾರೆ. ತೀರ್ಥಹಳ್ಳಿಯ ಜಾತ್ರೆಗೆ ದಿನಗಣನೆ ಆರಂಭವಾಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.