ರೈತ ಸಂಘದಿಂದ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ
– ಡಿ.21ರಂದು ಎನ್.ಡಿ.ಸುಂದರೇಶ್ ಅವರ ನೆನಪು
– ಕಡಿದಾಳು ಶಾಮಣ್ಣ ಅವರಿಗೆ ತವರೂರು ಸನ್ಮಾನ
– ಸರ್ವರನ್ನು ಸ್ವಾಗತಿಸಿದ ತೀರ್ಥಹಳ್ಳಿ ರೈತ ಸಂಘ
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಾಜ್ಯ ರೈತರ ಸಂಘ, ತಾಲೂಕು ಘಟಕ ತೀರ್ಥಹಳ್ಳಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಡಿ.21ರಂದು ಎನ್ ಡಿ, ಸುಂದರೇಶ್ ಅವರ ನೆನಪು ಮತ್ತು ಕಡಿದಾಳು ಶಾಮಣ್ಣ ಅವರಿಗೆ ತವರೂರು ಸನ್ಮಾನ ,ರೈತೋಪಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ರೈತ ನಾಯಕ ರಾಜೇಂದ್ರ ಕಂಬಳಿಗೆರೆ, ರಾಜ್ಯ ರೈತ ಸಂಘ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಕಡಿದಾಳು ಶಾಮಣ್ಣ. ಇತ್ತೀಚಿನ ಪೀಳಿಗೆಗೆ ಇವರ ವಿಷಯ ತಿಳಿದಿಲ್ಲ. ಹೊಸ ಜಗತ್ತಿಗೆ, ಆಲೋಚನೆಗೆ ಇವರ ವಿಷಯಗಳನ್ನು ತಿಳಿಸಬೇಕಾಗಿದೆ. ಹಾಗಾಗಿ ಅಂತಹ ನಾಯಕರಿಗೆ ರೈತೋಪಚಾರ ಮಾಡಲು ತೀರ್ಮಾನಿಸಲಾಗಿದೆ. ಜತೆಗೆ ರೈತ ಸಂಘದ ಪ್ರಮುಖರಾದ ಸುಂದರೇಶ್ ಅವರ ಜನ್ಮ ದಿನದಂದು ನೆನಪಿನ ಕಾರ್ಯಕ್ರಮ ನಡೆಸಲಾಗುತ್ತದೆ. ಸರ್ವರನ್ನು ಸ್ವಾಗತಿಸಲಾಗುವುದು ಎಂದರು.
ಮಲೆನಾಡಿನ ರೈತ ಹೋರಾಟವೇ ಅತ್ಯಂತ ವೈಶಿಷ್ಟ್ಯವಾದುದು.1980ರ ದಶಕದ ಆರಂಭದಲ್ಲಿ ಹುಟ್ಟಿಕೊಂಡ ಕರ್ನಾಟಕದ ರೈತರ ಸ್ವಾಭಿಮಾನದ ಚಳವಳಿಯನ್ನು ಮೇಲಿನ ಚಾರಿತ್ರಿಕ ಮಹತ್ವ ಮತ್ತು ಗುಣಲಕ್ಷಣಗಳೊಂದಿಗೆ ಸಮೀಕರಿಸಿ ಹುಟ್ಟು ಹಾಕಿದವರದಲ್ಲಿ ಎನ್.ಡಿ. ಸುಂದರೇಶ್ ಪ್ರಮುಖರು. ಇವರಷ್ಟೆ ಪ್ರಮುಖ ಪಾತ್ರವಹಿಸಿದವರಲ್ಲಿ ಇದೇ ಊರಿನ ಪೂರ್ಣಚಂದ್ರ ತೇಜಸ್ವಿ ಮತ್ತು ಕಡಿದಾಳು ಶಾಮಣ್ಣ ಕೂಡ ಇದ್ದರು ಎಂಬುದು ಹೆಮ್ಮೆಯ ವಿಷಯ. ಹಾಗೆಯೇ ಪ್ರಮುಖರಾಗಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಎಚ್.ಎಸ್. ರುದ್ರಪ್ಪನವರ ನೇತೃತ್ವದಲ್ಲಿ ರೈತ ಹೋರಾಟ ಬೆಳೆಯಿತು. ಎನ್.ಡಿ. ಸುಂದರೇಶ್ ಅವರ ನೆನಪು ಹಾಗೂ ನಮ್ಮೊಡನೆ ಸಾಕ್ಷಿ ಪ್ರಜ್ಞೆಯಂತಿರುವ ಕಡಿದಾಳು ಶಾಮಣ್ಣನವರಿಗೆ ರೈತೋಪಚಾರದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈಗಿನ ಕಾಲದಲ್ಲಿ ರೈತಾಪಿ ಜನ ಎಲ್ಲದಕ್ಕೂ ರಾಜಕೀಯವನ್ನು ನೆಚ್ಚಿಕೊಂಡು, ಅಧಿಕಾರಿಗಳ ಮುಂದೆ ಗೋಣು ಬಗ್ಗಿಸುವ ಸ್ಥಿತಿ ತಲುಪಿರುವ ದುರಂತ ಕಾಲದಲ್ಲಿ ಸ್ವಾಭಿಮಾನಿ ರೈತ ಚಳುವಳಿಯ ನಾಯಕರನ್ನು ನೆನಪು ಮಾಡಿಕೊಳ್ಳುವುದು ಅನಿವಾರ್ಯ ಹಾಗೂ ಅಗತ್ಯ ಕೂಡ. ರೈತರ ಮುಂದಿನ ಭವಿಷ್ಯಕ್ಕಾಗಿ ಮರೆಯದೇ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ಕೋಡ್ಲು ವೆಂಕಟೇಶ್, ಹೊರಬೈಲು ರಾಮಕೃಷ್ಣ, ಸುಭಾಷ್ ದೇವಂಗಿ, ನೆಂಪೆ ದೇವರಾಜ್, ಕರ್ಕಿ ಶಿವಾನಂದ್ ಸೇರಿ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಏನೇನು..?
ರಾಜ್ಯ ರೈತ ಸಂಘ ತೀರ್ಥಹಳ್ಳಿ ಘಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಡಿ.21 ರ ಗುರುವಾರದಂದು ಗೋಪಾಲಗೌಡ ರಂಗಮಂದಿರದಲ್ಲಿ ಎನ್. ಡಿ. ಸುಂದರೇಶ್ ಅವರ ನೆನಪು ಮತ್ತು ಸಾಕ್ಷಿ ಪ್ರಜ್ಞೆಯಂತಿರುವ ಕಡಿದಾಳು ಶಾಮಣ್ಣ ಅವರಿಗೆ ರೈತೋಪಚಾರ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಅಧ್ಯಕ್ಷತೆ ಕೂಡ್ಲು ವೆಂಕಟೇಶ್, ರೈತ ಹೋರಾಟಗಾರರು ಮತ್ತು ಉದ್ಘಾಟನೆಯನ್ನು ರೈತ ಹೋರಾಟಗಾರರು ಹಾಗೂ ಶಾಸಕರು ಆಗಿರುವ ದರ್ಶನ್ ಪುಟ್ಟಣ್ಣಯ್ಯ ಮಾಡಲಿದ್ದಾರೆ. ಮತ್ತು ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರ ಡಾ.ರಾಜೇಂದ್ರ ಚೆನ್ನಿ ಭಾಗವಹಿಸಲಿದ್ದಾರೆ.