Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕರವೇ ಪ್ರತಿಭಟನೆ!

ತೀರ್ಥಹಳ್ಳಿ ಕರವೇ ಪ್ರತಿಭಟನೆ!
– ಕರವೇ ಅಧ್ಯಕ್ಷ ನಾರಾಯಣಗೌಡ ಬಿಡುಗಡೆಗೆ ಪಟ್ಟು!
– ತಹಶಿಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ ಕರವೇ ಕಾರ್ಯಕರ್ತರು!

NAMMUR EXPRESS NEWS
ತೀರ್ಥಹಳ್ಳಿ: ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರ ಬಂಧನದ ವಿರುದ್ಧ ರಾಜ್ಯ ಸರ್ಕಾರ ಮತ್ತು ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಕ ರ ವೇ ಪ್ರತಿಭಟನೆ ಮಾಡಿದ್ದು, ಕೂಡಲೇ ನಾರಾಯಣ ಗೌಡರನ್ನು ಬಿಡುಗಡೆ ಮಾಡುವಂತೆ ಗೃಹ ಸಚಿವರಿಗೆ ಆಗ್ರಹಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರಾರಂಭವಾಗಿ 25 ವರ್ಷಗಳು ಆಗಿದೆ. ಈ 25 ವರ್ಷದಲ್ಲಿ ಕರವೇ ಸಾಕಷ್ಟು ನಾಡಿನ ಗಡಿ, ನೆಲ, ನುಡಿ, ಭಾಷೆಗಾಗಿ ನಾವು ಹೋರಾಟ ಮಾಡಿದ್ದು ಕೇಸುಗಳನ್ನು ಹಾಕಿಸಿಕೊಂಡಿದ್ದೇವೆ. ಆದರೆ ಈಗ ರಾಜ್ಯದಲ್ಲಿ ಆಂಗ್ಲ ನಾಮಫಲಕಕ್ಕಾಗಿ ಹೋರಾಟದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ನಾರಾಯಣಗೌಡರನ್ನು ಬಂಧಿಸುವುದು ಖಂಡನೀಯ! ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು, ರಾಜ್ಯ ಕರವೇ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗಡೆ ಅಕ್ರೋಶ ಹೊರಹಾಕಿದರು. ಅಧ್ಯಕ್ಷರ ಆರೋಗ್ಯವು ಸರಿ ಇಲ್ಲ. ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ರಾಜ್ಯ ಸರ್ಕಾರವೇ ಇದರ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.

ಶುಕ್ರವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಪ್ರತಿಯೊಂದು ಅಂಗಡಿ ಮುಂಗಟ್ಟಿಗೆ ಹಾಗೂ ಮಾಲ್ ಗಳಲ್ಲಿ ಕನ್ನಡದ ನಾಮಪಲಕ ಬದಲು ಆಂಗ್ಲ ಹಾಗೂ ಇನ್ನಿತರ ಭಾಷೆ ನಾಮಫಲಕವನ್ನು ಹಾಕಲಾಗಿದೆ. ಹಾಗಾಗಿ ಕನ್ನಡವನ್ನು ಮೊದಲು ಬಳಸಬೇಕು. ಮೊದಲ ಆದ್ಯತೆ ಕನ್ನಡ ಭಾಷೆಗೆ ಇರಬೇಕು ಎಂಬ ಕಾರಣಕ್ಕೆ ಇಂತಹ ಹೋರಾಟವನ್ನು ಆರಂಭಿಸಿದ್ದೇವೆ. ಈ ಹೋರಾಟದಲ್ಲಿ ಗೆಲುವು ನಮ್ಮದಾಗಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಕರವೇ ತಾಲೂಕಿನ ಅಧ್ಯಕ್ಷರಾದ ಯಡಿಯೂರು ಸುರೇಂದ್ರ ಮಾತನಾಡಿ, ಆಂಗ್ಲ ಅಥವಾ ಬೇರೆ ಭಾಷೆಯನ್ನು ವಿರೋಧ ಮಾಡುತ್ತಿಲ್ಲ. ಅದರ ಬದಲು ಕನ್ನಡಕ್ಕೆ 60 % ಉಳಿದ ಭಾಷೆಗೆ 40% ಇರುವಂತೆ ನಾಮಫಲಕ ಹಾಕಬೇಕು. ಈ ಸುತ್ತೋಲೆ ಮೊದಲಿನಿಂದಲೂ ಇತ್ತು. ಆದರೆ ಯಾವ ಸರ್ಕಾರವು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ, ಮತ್ತೆ ಈಗಾಗಲೇ ಮುಖ್ಯಮಂತ್ರಿಗಳು ಕೂಡ ಆದೇಶ ನೀಡಿದ್ದಾರೆ. ಹಾಗಾಗಿ ತೀರ್ಥಹಳ್ಳಿಯಲ್ಲಿ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತ ಸೇರಿ ಈ ನಿಯಮ ಜಾರಿಗೆ ತರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಕರವೇ ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ದಿಲೀಪ್ ಮಾತನಾಡುತ್ತಾ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಕಡ್ಡಾಯ ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ಜನಜಾಗೃತಿ ಮೂಡಿಸುವ ರ್ಯಾಲಿಯಲ್ಲಿ ವಿನಾಕಾರಣ ಪೊಲೀಸರು ತಡೆಯೊಡ್ಡಿ ಕರವೇಯ ಸುಮಾರು 1000 ಜನರನ್ನು ಬಂಧಿಸಿ ಸೂಕ್ತ ಆಹಾರ ನೀಡದೆ ಮಧ್ಯರಾತ್ರಿಯವರೆಗೂ ಕೂಡಿಹಾಕಿ, ಮಧ್ಯರಾತ್ರಿ 2 ಗಂಟೆಗೆ ಬಲಾತ್ಕಾರವಾಗಿ ನಾರಾಯಣಗೌಡರನ್ನು ಬಂಧಿಸಿ ಕರೆದೊಯ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದನ್ನು ತೀರ್ಥಹಳ್ಳಿ ತಾಲ್ಲೂಕು ಕರವೇ ಖಂಡಿಸುತ್ತದೆ. ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಬಂಧನಕ್ಕೆ ಒಳಗಾದ ಕರವೇ ಕಾರ್ಯಕರ್ತರನ್ನು ಭಯೋತ್ಪಾದಕರ ರೀತಿ ನಡೆಸಿಕೊಂಡಿದ್ದಾರೆ. ಮಧ್ಯಾಹ್ನ ಬಂಧಿಸಿದ ನಮಗೆ ಊಟ ನೀರು ಕೊಡದೆ ಹಾಗೆಯೇ ಕೂರಿಸಿದರು. ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಇಂತಹ ಧೋರಣೆಯನ್ನು ಖಂಡಿಸುತ್ತೇವೆ ಎಂದರು.

ರಾಜ್ಯ ಸರ್ಕಾರಕ್ಕೆ ಮನವಿ ಏನು…?

ಗೃಹ ಸಚಿವರಲ್ಲಿ ನಮ್ಮ ಮನವಿ ಏನೆಂದರೆ, ಕರ್ನಾಟಕದಲ್ಲಿ ವ್ಯಾಪಾರ ಮತ್ತು ಇತರ ವ್ಯವಹಾರ ಮಾಡಲು ಹೊರರಾಜ್ಯದಿಂದ ಬರುವ ಅನ್ಯಭಾಷಿಕರಿಗೆ ಕನ್ನಡದ ಬಗ್ಗೆ ಇರುವ ಅಸಡ್ಡೆ ಮನೋಭಾವವನ್ನು ಈ ಹಿಂದಿನಿಂದಲೂ ಕರವೇ ವಿರೋಧಿಸಿಕೊಂಡು ಬಂದಿರುತ್ತದೆ. ಮೊನ್ನೆ ನಡೆದಿರುವ ಪ್ರತಿಭಟನೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ 60 % ಕನ್ನಡ ಮತ್ತು 40% ಇತರ ಭಾಷೆಗೆ ಮೀಸಲಿಟ್ಟು ಆದೇಶವನ್ನು ಜಾರಿಗೆ ತಂದಿರುತ್ತಾರೆ. ಆದರೆ ಅದನ್ನು ಬಹುತೇಕ ಜನರು ನಾಮಫಲಕದಲ್ಲಿ ಅಳವಡಿಸಿಕೊಳ್ಳದೇ ಇರುವುದರಿಂದ ಈ ವಿಚಾರವಾಗಿ ಸರ್ಕಾರಕ್ಕೆ ಕರವೇ ವತಿಯಿಂದ ಮನವಿ ಕೂಡ ಮಾಡಿರುತ್ತೇವೆ. ಆದರೂ ಪ್ರಯೋಜನವಾಗಿರುವುದಿಲ್ಲ. ಇದರಿಂದ ಕರ್ನಾಟಕದಲ್ಲಿ ಕನ್ನಡದ ಉಳಿವಿಗಾಗಿ ಕನ್ನಡಿಗರಿಂದಲೇ ಪ್ರಾರಂಭವಾದ ಕರವೇ ನೇತೃತ್ವದಲ್ಲಿ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ಮುಂದಾಳತ್ವದಲ್ಲಿ ಜನಜಾಗೃತಿ ಮೂಡಿಸಲು ಮುಂದಾದ ಸಂಧರ್ಭದಲ್ಲಿ ರಾಜ್ಯ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡು, ಹೋರಾಟಗಾರರನ್ನು ಅಪರಾಧಿಗಳಂತೆ ಬಿಂಬಿಸಿ ಅನೇಕ ಕಿರುಕುಳವನ್ನು ಕೊಟ್ಟಿರುತ್ತಾರೆ. ಮತ್ತು ರಾತ್ರೋರಾತ್ರಿ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ಮತ್ತು ಇತರರನ್ನು ಬಂಧಿಸಿರುತ್ತಾರೆ.

ಆದ್ದರಿಂದ ರಾಜ್ಯಾಧ್ಯಕ್ಷರನ್ನು ಮತ್ತು ಇತರರನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಗೃಹ ಸಚಿವರಾದ ಜಿ.ಪರಮೇಶ್ವರ್ ಅವರನ್ನು, ತೀರ್ಥಹಳ್ಳಿ ತಾಲ್ಲೂಕು ಕರವೇ ಒತ್ತಾಯಿಸುತ್ತಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ತರಹದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕರವೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗ್ಡೆ, ತಾಲೂಕು ಕರವೇ ಅಧ್ಯಕ್ಷ ಯಡೂರು ಸುರೇಂದ್ರ, ಶ್ರೀಕಾಂತ್ ಬೆಟ್ಟಮಕ್ಕಿ ಯುವ ಘಟಕದ ಅಧ್ಯಕ್ಷರು, ರವಿ ಎಸ್ ನಗರ ಘಟಕ ಅಧ್ಯಕ್ಷರು, ವಿಕ್ರಂ ಶೆಟ್ಟಿ ತಾಲೂಕು ಪ್ರಧಾನ ಕಾರ್ಯದರ್ಶಿ, ಹರ್ಷೇಂದ್ರ ಕುಮಾರ್ ಜಿಲ್ಲಾ ಸಂಚಾಲಕರು, ಜ್ಯೋತಿ ದಿಲೀಪ್ ಮಹಿಳಾ ಘಟಕದ ಅಧ್ಯಕ್ಷರು, ಸುರೇಶ್ ಟೈಲರ್, ಸುಧೀನ್ ಗೌಡ, ಚಂದ್ರು, ಕುಶಾವತಿ ಹಾಗೂ ಪ್ರಮುಖರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.