Categories
ತೀರ್ಥಹಳ್ಳಿ

ಆಧಾ‌ರ್ ತಿದ್ದುಪಡಿಗೆ ಸಾರ್ವಜನಿಕರ ಪರದಾಟ.!

ಆಧಾ‌ರ್ ತಿದ್ದುಪಡಿಗೆ ಸಾರ್ವಜನಿಕರ ಪರದಾಟ.!
– ದಾಖಲೆ ನೀಡಲು ಅನಕ್ಷರಸ್ಥರ ಗೋಳಾಟ
– ದಶಕ ಕಳೆದರೂ ಗೊಂದಲ ಬಗೆಹರಿಸದ ಆಡಳಿತ

NAMMUR EXPRESS NEWS
ತೀರ್ಥಹಳ್ಳಿ: ಆಡಳಿತದ ಪ್ರತಿಯೊಂದು ಸೇವೆಗೂ ಆಧಾರ್ ಕಾರ್ಡ್ ಕಡ್ಡಾಯ. ಆಧಾರ್ ಸಂಖ್ಯೆ ಇಲ್ಲದಿದ್ದರೆ ಆಡಳಿತದಲ್ಲಿ ವ್ಯಕ್ತಿಗೆ ಬೆಲೆ ಇಲ್ಲ. ಇಂತಹ ಸ್ಥಿತಿ ಹುಟ್ಟು ಹಾಕಿರುವ ಆಡಳಿತಕ್ಕೆ ಆಧಾರ್ ಕಾರ್ಡ್ ನೋಂದಣಿಯಲ್ಲಿನ ಗೊಂದಲ ಬಗೆಹರಿಸಲು ಮಾತ್ರ ದಶಕ ಕಳೆದರೂ ಸಾಧ್ಯವಾಗಿಲ್ಲ, ಆಧಾರ್ ಕಾರ್ಡ್ ನಲ್ಲಿ ಕೆಲವೊಂದು ನಿಯಮಗಳು ಸಾರ್ವಜನಿಕರ ಪಾಲಿಗಂತೂ ಶಾಪವಾಗಿ ಕಾಡುತ್ತಿದೆ. ಸರಳ ನಿಯಮದಲ್ಲಿ ಆಧಾರ್ ನೋಂದಣಿಗೆ ಅವಕಾಶವೇ ಇಲ್ಲದಾಗಿದೆ. ತಿದ್ದುಪಡಿಗಾಗಿ ಪ್ರತಿದಿನ ಕಚೇರಿಗೆ ಅಲೆಯುವ ಶಿಕ್ಷೆಯಿಂದ ಜನರಿಗೆ ಮುಕ್ತಿ ಸಿಕ್ಕಿಲ್ಲ, ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ತಿದ್ದುಪಡಿಗೆ ಜನನ ಪ್ರಮಾಣಪತ್ರ ಇಲ್ಲವೆ ಎಸ್ ಎಸ್‌ಎಲ್‌ಸಿ ವ್ಯಾಸಂಗದ ಅಂಕಪಟ್ಟಿ ಅಥವಾ ಪಾಸ್‌ಪೋರ್ಟ್ ದಾಖಲೆ ನೀಡುವಂತೆ ಬಲವಂತ ಮಾಡಲಾಗುತ್ತಿದೆ. ವಯಸ್ಸಾದವರು, ಅನಕ್ಷರಸ್ಥರು ಆಧಾ‌ರ್ ಕಾರ್ಡ್‌ ಗಾಗಿ ಈ ದಾಖಲೆ ನೀಡಲು ಸಾಧ್ಯವೇ ಎಂಬ ಜನರ ಪ್ರಶ್ನೆಗೆ ಆಡಳಿತ ಹಲವು ರೀತಿ ಸಬೂಬು ಹೇಳುತ್ತಿದೆ.

ತಾಲೂಕು ಕಚೇರಿಯಲ್ಲಿ ತಾಂತ್ರಿಕ ಕಾರಣದ ನೆಪಒಡ್ಡಿ ಒಂದೂವರೆ ವರ್ಷದಿಂದ ಆಧಾರ್ ಕಾರ್ಡ್ ಸೇವೆ ಸ್ಥಗಿತಗೊಳಿಸಿ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಇತ್ತೀಚಿಗೆ ತಾಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್ ಸೇವೆ ಪುನಾರಂಭಿಸಲಾಗಿದೆ. ತಾಲೂಕಿನ ಬಹುತೇಕ ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ಸೇವೆ ಸ್ಥಗಿತವಾಗಿದೆ.

ಜನರಿಗೆ ಕಿರಿಕಿರಿ :

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ನಂತರ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಬಿರುಸುಗೊಂಡಿದೆ. ಆದರೆ, ದೋಷಪೂರಿತ ಆಧಾರ್ ತಿದ್ದುಪಡಿಗೆ ಸೂಕ್ತ ದಾಖಲೆ ಸಲ್ಲಿಸಲು ಜನರು ಹೆಣಗಾಡುತ್ತಿದ್ದಾರೆ. ಅನಕ್ಷರಸ್ಥರಿಗೆ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಅಸಾಧ್ಯವಾಗುತ್ತಿದೆ. ಜನ್ಮದಿನಾಂಕ ಕುರಿತು ದಾಖಲೆ ಇಲ್ಲದವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ನ್ಯಾಯಾಲಯದ ಆದೇಶದಡಿ ಕಂದಾಯ ಇಲಾಖೆಯಲ್ಲಿ ಜನ್ಮದಿನಾಂಕ ನೋಂದಾಯಿಸಿ ಕೊಂಡು ಆಧಾ‌ರ್ ಕಾರ್ಡ್ ನೋಂದಣಿ, ತಿದ್ದುಪಡಿ ಮಾಡಬೇಕಿದೆ. ಈ ಪ್ರಕ್ರಿಯೆಗೆ ಜನರು ಸಾವಿರಾರು ರೂಪಾಯಿ ಹಣ ಖರ್ಚು ಮಾಡಬೇಕಿದೆ. ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಸಮಸ್ಯೆ ಪರಿಹಾರಕ್ಕೆ ಸರಕಾರ ಅಭಿಯಾನ ಹಮ್ಮಿಕೊಂಡಿಲ್ಲ. ಸ್ಥಳೀಯ ಜನರು, ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಪತ್ರ ಮತ್ತು ಸಿಬ್ಬಂದಿಯ ಮಹಜರ್ ವರದಿ ಪರಿಗಣಿಸುತ್ತಿಲ್ಲ.

ಸರಕಾರಕ್ಕೆ ಹಿಡಿ ಶಾಪ :

ಆಧಾರ್ ಕಾರ್ಡ್‌ನಲ್ಲಿ ಸಣ್ಣ ವ್ಯತ್ಯಾಸ ಉಂಟಾದರೂ ಸರಕಾರದ ಸಹಾಯಧನದ ಸೇವೆ ದೊರೆಯುವುದಿಲ್ಲ. ಹೀಗಾಗಿ ಆಧಾರ್ ತಿದ್ದುಪಡಿ ಆಗದ ಅನೇಕ ಅರ್ಹರು ಸರಕಾರದ ಸಹಾಯಧನ ಯೋಜನೆ ಗಳಿಂದ ವಂಚಿತರಗುತ್ತಿದ್ದಾರೆ. ಸರಕಾರದ ಸೌಲಭ್ಯಗಳಿಂದಲೇ ಜೀವನ ನಡೆಸುವಂತಹ ಅನೇಕರು ಆಧಾರ್ ಕಾರ್ಡ್ ಸರಿಯಿಲ್ಲದೆ ಪರಿತಪಿಸುತ್ತಿದ್ದಾರೆ. ಆಧಾರ್ ತಿದ್ದುಪಡಿಗೆ ಸೂಕ್ತ ಮಾರ್ಗದರ್ಶನ ಇಲ್ಲದೆ ಸರಕಾರಕ್ಕೆ ಹಿಡಿಶಾಪ ಹಾಕುತ್ತ ಕೊರಗುವ ಸ್ಥಿತಿಯಲ್ಲಿ ಅನೇಕರಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.