ತುಂಗಾ ಕಾಲೇಜಲ್ಲಿ ರಾಜ್ಯೋತ್ಸವದ ಕಂಪು!
– ರಾಜ್ಯೋತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳು
– ಮೊಬೈಲ್ಗೆ ದಾಸರಾದರೆ ಕಷ್ಟ: ಕವಿತಾ ಸುಧೀಂದ್ರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ ರವರು ಆಗಮಿಸಿ ಹಾಸ್ಯಭರಿತ ಶೈಲಿಯಲ್ಲಿ ವಿದ್ಯಾರ್ಥಿಗಳನ್ನು ಕುರಿತು ಹಿತವಚನಗಳನ್ನಾಡಿದರು.
ಪಂಪ, ರನ್ನ, ಜನ್ನ, ಕುವೆಂಪು, ಮಾಸ್ತಿ ಮೊದಲಾದ ಕವಿಗಳ ಕಾವ್ಯಗಳನ್ನು ಓದಿದರೆ ಅದು ಎಲ್ಲಾ ಸಂಪತ್ತಿಗಿಂತ ಮಿಗಿಲಾದ ಆಸ್ತಿಯಾಗುತ್ತದೆ, ಆದ್ದರಿಂದ ಹೆಚ್ಚು ಹೆಚ್ಚು ಕೃತಿಗಳನ್ನು ಓದಬೇಕು, ಹಾಗೂ ಚಿಂತೆಯನ್ನು ಬಿಡಬೇಕು, ಚಿಂತೆ ನಮ್ಮ ಶಕ್ತಿಯನ್ನು ಕುಂದಿಸುತ್ತದೆ, ಚಿಂತೆಯನ್ನು ಬಿಟ್ಟರೆ ನಾವು ಸಮಾಜದಲ್ಲಿ ಉನ್ನತವಾದ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗುತ್ತದೆ, ಇದೆಲ್ಲದರ ಜೊತೆಗೆ ನಾವು ಸಮಾಜಮುಖಿಗಳಾಗಿ ಬೆಳೆಯಬೇಕು, ಸಂಸ್ಕಾರವನ್ನು ರೂಡಿಸಿಕೊಳ್ಳಬೇಕು, ಮೊಬೈಲ್ಗೆ ದಾಸರಾದರೆ ಅದು ನಮ್ಮನ್ನು ಸಂಕುಚಿತಗೊಳಿಸುತ್ತದೆ, ಪೋಷಕರು ಕೂಡ ತಮ್ಮ ಮಕ್ಕಳನ್ನು ಅಂಕಗಳ ದಾಸರನ್ನಾಗಿ ಮಾಡಬಾರದು ಬದಲಾಗಿ ಕ್ರಿಯಾಶೀಲ ಬದುಕನ್ನು ಕಟ್ಟಿಕೊಳ್ಳಲು ಪ್ರೋತ್ಸಾಹಿಸಬೇಕೆಂದರು.
ವಿದ್ಯಾರ್ಥಿಗಳು ಮುಖ್ಯ ಅತಿಥಿಗಳನ್ನು ಬಾಗಿನ ನೀಡಿ ವಿಶಿಷ್ಟವಾಗಿ ಗೌರವಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ಕೆ ಅಂಜನಪ್ಪ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲರಾಗಿ ಒಂದುಗೂಡಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಅತ್ಯಂತ ಸಂತೋಷದಾಯಕ ವಿಷಯವಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಕನ್ನಡ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿನ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪಟಮಕ್ಕಿ ಮಹಾಬಲೇಶ್ ಹಿರಿಯ ಉಪನ್ಯಾಸಕರಾದ ಪ್ರೊ.ಕೆ ಟಿ ರಮೇಶ್ ಐಕ್ಯುಎಸಿ ಸಂಚಾಲಕರಾದ ಡಾ.ಆರ್ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಕೆಎಲ್ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಕುಮಾರಿ ಸಿಂಧೂರ ದ್ವಿತೀಯ ಬಿಕಾಂ ವಂದನಾರ್ಪಣೆಯನ್ನು ವೈಷ್ಣವಿ ದ್ವಿತೀಯ ಬಿಕಾಂ ನಿರೂಪಣೆಯನ್ನು ಸಹನಾ ಜಿ ಎಸ್, ಸಾಕ್ಷಿ ಟಿ ಡಿ ದ್ವಿತೀಯ ಬಿಕಾಂ ನಡೆಸಿಕೊಟ್ಟರು.
ಕಾಲೇಜು ತುಂಬಾ ಕನ್ನಡದ ಕಂಪು
ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶ್ವೇತ ವಸ್ತ್ರವನ್ನು ಧರಿಸಿ, ಕೆಂಪು ಹಳದಿ ಶಾಲನ್ನು ಹೊದ್ದು ಉತ್ಸಾಹದಿಂದ ಭಾಗವಹಿಸಿರುವುದು ವಿಶೇಷವಾಗಿತ್ತು.