ರಿಜ್ವಾನ ಖಾನಂ, ವಾಣಿ ಪ್ರಸಾದ್ ಅವರಿಗೆ ಅತ್ಯುತ್ತಮ ಶಿಕ್ಷಕಿ ಗೌರವ, ಅರವಿಂದ್ ವಿಶೇಷ ಶಿಕ್ಷಕ ಪ್ರಶಸ್ತಿ
– ಶಿಕ್ಷಕರ ದಿನಾಚರಣೆಯಲ್ಲಿ ಗೌರವ: ಶುಭಾಶಯಗಳು
– ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಅರವಿಂದ್ ಟಿ.ಎನ್ ಮಡಿಲಿಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಗಾಯತ್ರಿ ಮಂದಿರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮೇಗರವಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಿಜ್ವಾನ ಖಾನಂ ಮತ್ತು ಗುಡ್ಡೆಕೊಪ್ಪ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ವಾಣಿ ಪ್ರಸಾದ್ ರವರನ್ನು ತಾಲೂಕಿನ ಅತ್ಯುತ್ತಮ ಶಿಕ್ಷಕಿ ಎಂದು ಗೌರವಿಸಲಾಯಿತು.
ರಿಜ್ಞಾನ ಖಾನಂ ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 28 ವರ್ಷಗಳ ಸೇವೆ ಸಲ್ಲಿಸಿ ತಮ್ಮ ಸರಳ ಗಣಿತ ಬೋಧನೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಇದೀಗ ಪ್ರೌಢಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರಿಜ್ವಾನ ಖಾನಂ ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಮಾಜಿ ಕೌನ್ಸಿಲರ್ ಹಮೀದ್ ಖಾನ್ ಮತ್ತು ಜೀನತ್ ಬೇಗ್ ರವರ ಪುತ್ರಿಯಾಗಿದ್ದಾರೆ. ತೀರ್ಥಹಳ್ಳಿಯ ಗಣಿತ ಅಧ್ಯಾಪಕರ ವೇದಿಕೆ ಅಧ್ಯಕ್ಷರಾಗಿ ಗಣಿತ ವಿಷಯದ ಸಮಾಲೋಚನ ಸಭೆ ಹಾಗೂ ಇನ್ನಿತರ ತರಬೇತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಾಲೂಕಿನ ಫಲಿತಾಂಶ ಅಗ್ರಸ್ಥಾನ ಪಡೆಯಲು ತಾಲೂಕಿನ ಗಣಿತ ಅಧ್ಯಾಪಕರ ಜೊತೆಗೆ ಶ್ರಮಿಸಿದ್ದಾರೆ.
ಗುಡ್ಡೆಕೊಪ್ಪ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಆಧ್ಯಾಪಕಿ ಶ್ರೀಮತಿ ವಾಣಿ ಪ್ರಸಾದ್ ತಾಲೂಕಿನ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಹಲವು ತರಬೇತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.
ಶಿಕ್ಷಕರ ದಿನಾಚರಣೆ ದಿನ ತಾಲೂಕಿನ ಅತ್ಯುತ್ತಮ ಶಿಕ್ಷಕಿ ಗೌರವಕ್ಕೆ ಪಾತ್ರರಾಗಿರುವ ಇಬ್ಬರು ಶಿಕ್ಷಕಿಯರಿಗೆ ಅವರ ಆತ್ಮೀಯರು ಅಭಿನಂದಿಸಿದ್ದಾರೆ.
ವಿಶೇಷ ಶಿಕ್ಷಕ ಪ್ರಶಸ್ತಿ ಅರವಿಂದ್ ಟಿ.ಎನ್ ಅವರ ಮಡಿಲಿಗೆ
ತೀರ್ಥಹಳ್ಳಿ ತಾಲ್ಲೂಕಿನ ಕಮ್ಮರಡಿ ವಿಶ್ವತೀರ್ಥ ಅನುದಾನಿತ ಶಾಲೆಯ ಚಿತ್ರಕಲಾ ಶಿಕ್ಷಕ, ರಂಗ ಕಲಾವಿದ, ಗಾಯಕ, ರಂಗ ವಿನ್ಯಾಸಗಾರ ಅರವಿಂದ್ ಟಿ.ಎನ್. ಈ ಬಾರಿಯ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೂರಾರು ಕಲಾವಿದರನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
