ಭಾರತೀಪುರ ಕ್ರಾಸಿಂಗ್ ಬಳಿ ರಸ್ತೆ ಓಡಾಟ ನಿತ್ಯ ನರಕ..!
– ಪ್ರಯಾಣಿಕರ ಗೋಳನ್ನು ಕೇಳುವವರು ಯಾರು?
– ಜೀವ ಭಯದಲ್ಲಿ ವಾಹನ ಸವಾರರ ಓಡಾಟ
– ಗುತ್ತಿಗೆದಾರ ಮಾಡಿದ್ದೇ ಆಟ: ಜನರಿಗೆ ಜೀವ ಸಂಕಟ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಭಾರತೀಪುರ ಕ್ರಾಸಿಂಗ್ ಬಳಿ ಸೇತುವೆ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ನಿತ್ಯ ಸಂಚರಿಸುವುದು ನರಕಯಾತನೆ. ಯಾವಾಗ ಯಮನ ಪಾದ ಸೇರುತ್ತೇವೋ ಎಂಬ ಭಯದಲ್ಲಿ ಜನ ಓಡಾಡುತ್ತಿದ್ದಾರೆ.
ನೂತನ ಫ್ಲೈ ಓವರ್ ಯಾವಾಗ ಆಗುವುದೋ ಗೊತ್ತಿಲ್ಲ. ಬೈಕ್ ಸವಾರರು ದೊಡ್ಡ ವಾಹನಗಳು ಎರಚುವ ಕೆಸರನ್ನು ಮೈತುಂಬ ಮೆತ್ತಿಕೊಂಡು, ಇತ್ತ ಬೈಕ್ ಎಲ್ಲಿ ಸ್ಕಿಡ್ ಆಗುವುದೋ ಎಂದು ಜೀವ ಕೈಯಲ್ಲಿಟ್ಟುಕೊಂಡು ಸಾಗುವ ಪರಿಸ್ಥಿತಿ ಬಂದಿದೆ. ದಿನವೂ ಒಂದಿಷ್ಟು ಕೆಸರು ಮಣ್ಣು ತಂದು ಸುರಿಯುತ್ತಾರೆ. ಮಳೆ ಬಂದ ತಕ್ಷಣ ಅದು ಪಾಕವಾಗಿ ಹರಡುತ್ತದೆ. ಇದರಿಂದ ಪ್ರತಿದಿನ ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಪ್ರಯಾಣಿಸುವವರು ಮತ್ತು ಶಿವಮೊಗ್ಗದ ಕಡೆಯಿಂದ ತೀರ್ಥಹಳ್ಳಿಗೆ ಪ್ರಾಣಿಸುವ ವಾಹನ ಸಾವರರಿಗೆ ದಿನನಿತ್ಯ ಪ್ರಾಣವನ್ನು ಒತ್ತೆ ಇಟ್ಟು ಪ್ರಯಾಣಿಸುವಂತಾಗಿದೆ. ಇನ್ನು ರಸ್ತೆಗೆ ಕೂಡ ಮಣ್ಣು ಹಾಕಿದ ಕಾರಣ ಅಕ್ಕ ಪಕ್ಕ ಓಡಾಡದಂತೆ ಕೆಸರುಮಯವಾಗಿದೆ ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ.
