ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ಮೀಟರ್ ಬೇಡ
– ಆದೇಶ ಹಿಂಪಡೆಯುತೆ ಸರ್ಕಾರಕ್ಕೆ ಪತ್ರ ಬರೆದ ಸಚಿವ ಮಧು ಬಂಗಾರಪ್ಪನವರಿಗೆ ಕೃತಜ್ಞತೆ
– ಕಿಮ್ಮನೆ, ಮಂಜುನಾಥ ಗೌಡರಿಗೂ ಅಭಿನಂದನೆ
– ಕಿಸಾನ್ ಸೆಲ್ ಅಧ್ಯಕ್ಷ ಧರಣೇಶ್ ಮಳಲೇಕೊಪ್ಪ ಅಭಿನಂದನೆ
NAMMUR EXPRESS NEWS
ತೀರ್ಥಹಳ್ಳಿ: ಅತಿವೃಷ್ಟಿ, ಅನಾವೃಷ್ಟಿ, ಪ್ರಾಣಿಗಳ ಹಾವಳಿ ಮತ್ತು ಅಡಿಕೆ ಬೆಳೆಗೆ ತಗುಲಿರುವ ರೋಗಗಳಿಂದ ಮಲೆನಾಡಿನ ಅಡಿಕೆ ಬೆಳೆಗಾರರು, ರೈತರು ತತ್ತರಿಸಿಹೋಗಿದ್ದಾರೆ. ಇಂತಹ ದುಃಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಮೆಸ್ಕಾಂ ಅಡಿಕೆ ಸುಲಿಯುವ ಯಂತ್ರ ಬಳಸುವ ರೈತರ ಮೇಲೆ ಕೇಸು ಹಾಕಿ, ೫೦-೬೦ ಸಾವಿರದಷ್ಟು ದುಬಾರಿ ದಂಡ ವಿಧಿಸುತ್ತಿದೆ. ವರ್ಷದಲ್ಲಿ ಒಂದರಿಂದ ೨ ತಿಂಗಳು ಅಡಿಕೆ ಸುಲಿತ ನಡೆಯುತ್ತದೆ. ಕಾರ್ಮಿಕರ ಸಮಸ್ಯೆಯಿಂದ ರೈತರಿಗೆ ಅಡಿಕೆ ಸುಲಿಯುವ ಯಂತ್ರದ ಉಪಯೋಗ ಅನಿವಾರ್ಯವಾಗಿದೆ. ಸರ್ಕಾರ ರೈತರ ಅಡಿಕೆ ಸುಲಿಯುವ ಯಂತ್ರಗಳಿಗೆ ರಿಯಾಯಿತಿ ದರದ ವಿದ್ಯುತ್ ಒದಗಿಸಬೇಕು. ಇಲ್ಲವೆ ತಾತ್ಕಾಲಿಕ ಕಮರ್ಷಿಯಲ್ ವಿದ್ಯುತ್ ಸಂಪರ್ಕಕ್ಕೆ ಅವಕಾಶ ಕಲ್ಪಿಸಬೇಕು.
ಆದರೆ ಮೆಸ್ಕಾಂ ಖಾಯಂ ಕಮರ್ಷಿಯಲ್ಲ ಸಂಪರ್ಕ ಪಡೆಯುವಂತೆ ರೈತರಿಗೆ ಒತ್ತಡ ಹೇರುತ್ತಿದೆ. ಕೇವಲ ಒಂದೆರಡು ತಿಂಗಳು ಮಾತ್ರ ಉಪಯೋಗಿಸುವ ಅಡಿಕೆ ಸುಲಿಯುವ ಯಂತ್ರಕ್ಕೆ ವರ್ಷಪೂರ್ತಿ ವಿದ್ಯುತ್ ಬಿಲ್ ಕಟ್ಟುವ ದುಸ್ಥಿತಿಯಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ಸಚಿವರು ಹಾಗೂ ಶಾಸಕರುಗಳು ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ತೀರ್ಥಹಳ್ಳಿ ತಾಲ್ಲೂಕು ಕಿಸಾನ್ ಸೆಲ್ ಅಧ್ಯಕ್ಷ ಧರಣೇಶ್ ಮಳಲೇಕೊಪ್ಪ ಒತ್ತಾಯಿಸಿದ್ದ ಪತ್ರಿಕಾ ಹೇಳಿಕೆಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್ ನಾಯಕರುಗಳಾದ ತೀರ್ಥಹಳ್ಳಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ. ಮಂಜುನಾಥ ಗೌಡ ಈ ವಿಚಾರವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರ ಗಮನಕ್ಕೆ ವಿಷಯವನ್ನು ತಂದಿದ್ದರು.
ಇದಕ್ಕೆ ಸ್ಪಂದಿಸಿದ ಸಚಿವ ಮಧುಬಂಗಾರಪ್ಪನವರು ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಸಚಿವರಾದ ಕೆ.ಜೆ. ಜಾರ್ಜ್ ಅವರಿಗೆ ಅಧಿಕೃತವಾಗಿ ಪತ್ರ ಬರೆದು ರೈತಗರ ಸಮಸ್ಯೆಯನ್ನು ತಿಳಿಸಿದ್ದು ಪ್ರತ್ಯೇಕ ಮೀಟರ್ ಅಳವಡಿಸುವ ಆದೇಶವನ್ನು ಮರುಪರಿಶೀಲಿಸಿ ಹಿಂಪಡೆಯುವಂತೆ ತಿಳಿಸಿದ್ದಾರೆ. ಎಲ್ಲಾ ನಾಯಕರಿಗೂ ಅಭಿನಂದನೆಗಳು