ಆರಗದಲ್ಲಿ ಶ್ರೀಕಲಾನಾಥೇಶ್ವರ ಜಾತ್ರಾ ರಂಗು!
– ಮಾ.11ರಿಂದ 13ರವರೆಗೆ ಜಾತ್ರಾ ಮಹೋತ್ಸವ
– ಸರ್ವರನ್ನು ಸ್ವಾಗತಿಸಿದ ದೇವಸ್ಥಾನ ಸಮಿತಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆರಗದಲ್ಲಿ ಶ್ರೀಕಲಾನಾಥೇಶ್ವರ ಜಾತ್ರಾ ರಂಗು ಶುರುವಾಗಿದೆ. ಮಾ.11ರಿಂದ 13ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಸರ್ವರನ್ನು ದೇವಸ್ಥಾನ ಸಮಿತಿ ಸ್ವಾಗತ ಮಾಡಿದೆ. ಮಾರ್ಚ್ 10ರ ಭಾನುವಾರ ಬೆಳಿಗ್ಗೆ ಗಣಪತಿ ಪೂಜೆಯ ಮೂಲಕ ರಥೋತ್ಸವದ ಕಾರ್ಯಕ್ರಮ ಆರಂಭವಾಗಲಿದೆ. ಮಾರ್ಚ್ 11 ರ ಸೋಮವಾರ ಮಧ್ಯಾಹ್ನ 12:30 ಕ್ಕೆ ಶ್ರೀ ಮನ್ಮಹಾರಥಾರೋಹಣ ನಡೆಯಲಿದೆ. ಇದೇ ದಿನ ಸಾಯಂಕಾಲ ಆರಗದ ರಾಜಬೀದಿಯಲ್ಲಿ ರಥೋತ್ಸವ ಸಾಗಲಿದೆ. ಇದೇ ದಿನ ರಾತ್ರಿ 8 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಾರ್ಚ್ 12ರ ಮಂಗಳವಾರ ರಾತ್ರಿ 9:30ಕ್ಕೆ ಆರಗದ ಯಕ್ಷ ಮಿತ್ರರ ಪ್ರಾಯೋಜಕತ್ವದಲ್ಲಿ ಸಾಲಿಗ್ರಾಮ ಮೇಳದವರಿಂದ ನೀಲಗಗನದೊಳ್ ಎಂಬ ಯಕ್ಷಗಾನ ಬಯಲಾಟ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಾರ್ಚ್ 13ರ ಬುಧವಾರ ಬೆಳಿಗ್ಗೆ ಸಂಪ್ರೋಕ್ಷಣ ಮತ್ತು ಮಹಾಪೂಜೆಯ ಮೂಲಕ ರಥೋತ್ಸವ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ. ಆರಗ ಕಲಾನಾಥೇಶ್ವರ ದೇವಸ್ಥಾನದ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕಾಗಿ ಜಾತ್ರೆಯ ರಥೋತ್ಸವ ಸಮಿತಿ ಕೋರಿದೆ.
