ರಾಮಕೃಷ್ಣಪುರದಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ
– ಸಮರ್ಪಣಾ ತಂಡದ ಮಾದರಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ: ಸುಮಾರು 50 ಜನರಿಂದ ರಕ್ತದಾನ
– ತೀರ್ಥಹಳ್ಳಿ ತಾಲೂಕಲ್ಲಿ ಸೇವೆ ಹೆಜ್ಜೆ ಇಟ್ಟ ಸಂಸ್ಥೆ
NAMMUR EXPRESS NEWS
ತೀರ್ಥಹಳ್ಳಿ: ವಿಶ್ವ ಮಾನವತಾವಾದಿಯಾಗಿ ಬದುಕಿದ ಡಾ.ಪುನಿತ್ ರಾಜ್ ಕುಮಾರ್ ಜನ್ಮದಿನದ ಅಂಗವಾಗಿ ರಾಮಕೃಷ್ಣಪುರದ ಸಮರ್ಪಣಾ ತಂಡದ ಆಶ್ರಯದಲ್ಲಿ ರೋಟರಿ ಬ್ಲಡ್ ಬ್ಯಾಂಕ್ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವು ಯಶಸ್ವಿಯಾಗಿ ನೆರವೇರಿತು. ಗ್ರಾಮದ ಅನೇಕ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಆಗಮಿಸಿದ್ದರು. ಸುಮಾರು ಐವತ್ತು ರಕ್ತದಾನಿಗಳ ರಕ್ತವನ್ನು ಸಂಗ್ರಹಿಸಲಾಯಿತು.
ಅನ್ಯ ಕಾರ್ಯದ ನಿಮಿತ್ತ ತೆರಳುತ್ತಿದ್ದ ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರ ಮಾರ್ಗ ಮಧ್ಯೆ ಆಗಮಿಸಿ ರಕ್ತದಾನ ಶಿಬಿರಕ್ಕೆ ಶುಭ ಹಾರೈಸಿ ಪ್ರಶಂಸಾ ಪತ್ರ ನೀಡಿದರು. ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಮತ್ತು ಮಾರ್ಗದರ್ಶಕರಾದ ಕೃಷ್ಣಮೂರ್ತಿ ರಾವ್ ಕಾಸರವಳ್ಳಿಯವರು ಅಧ್ಯಕ್ಷತೆಯನ್ನು ವಹಿಸಿ ರಕ್ತದಾನಿಗಳು ಅಗತ್ಯ ಇದ್ದವರಿಗೆ ಸಹಾಯ ಮಾಡಲು ಮನವಿ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿ.ಎಂ.ನಾಗರಾಜಗೌಡ ಸಮರ್ಪಣಾ ತಂಡದ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೊಟೇರಿಯನ್ ಚಂದ್ರಶೇಖರ್ ರವರು ರಕ್ತದಾನ ಮಹತ್ವ ತಿಳಿಸಿದರೆ, ಮಹಾಬಲೇಶ್ವರ ಹೆಗಡೆಯವರು ಒಂದು ವರ್ಷದ ಅವಧಿಯಲ್ಲಿ ಸಮರ್ಪಣಾ ತಂಡ ಮಾಡಿದ ವಿಭಿನ್ನ ಹಾಗೂ ಮಾದರಿ ಕಾರ್ಯಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೆಂಕಟೇಶಗೌಡರು ಇಂತಹ ತಂಡಗಳ ಅಗತ್ಯ ಪ್ರತೀ ಊರುಗಳಿಗಿದೆ ಎಂದೂ ಮುಕ್ತಕಂಠದಿಂದ ಪ್ರಶಂಸಿದರು. ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪ್ರಥಮ ರಕ್ತದಾನ ಶಿಬಿರ ಇದಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
