ತೆಪ್ಪೋತ್ಸವಕ್ಕೆ ಕ್ಷಣಗಣನೆ ಶುರು!
– ತುಂಗಾತೀರ ಉತ್ಸವಕ್ಕೆ ಸಜ್ಜು: ಜಾತ್ರೆ ಬೀದಿಯಲ್ಲಿ ಜನ ಸಾಗರ
– ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ತಯಾರು
– ತೆಪ್ಪದ ಅಲಂಕಾರ: ಭದ್ರತೆಗೆ ಪೊಲೀಸ್ ಅಲರ್ಟ್
NAMMUR EXPRESS NEWS:
ತೀರ್ಥಹಳ್ಳಿ ಜಾತ್ರೆ ವಿಶೇಷ: ಜಾತ್ರೆಯಲ್ಲಿ ತೆಪ್ಪೋತ್ಸವಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದ್ದು ತುಂಗಾ ತೀರ, ರಥಬೀದಿಯಾದ್ಯಂತ ಜನಸಾಗರವೇ ತುಂಬಿದೆ. ತೀರ್ಥಹಳ್ಳಿ ತಾಲೂಕು ಮಾತ್ರವಲ್ಲದೆ ಪರ ಊರುಗಳಿಂದಲೂ ಜನ, ತೆಪ್ಪೋತ್ಸವ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ನದಿ ತೀರದಲ್ಲಿ ಪಟಾಕಿ/ಸಿಡಿಮದ್ದುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದು ಅದನ್ನು ನೋಡುವುದೇ ಒಂದು ಖುಷಿಯಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಾದ, ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಯಕ್ಷಗಾನ ಮುಂತಾದ ಜನಪದ ಕಲೆಗಳಿಗೆ ವೇದಿಕೆ ಸಜ್ಜಾಗಿದ್ದು ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿವೆ. ವಿವಿಧ ವೇಶ ಭೂಷಣಗಳ ರಂಗು, ಡೊಳ್ಳು ಕುಣಿತದ ಭಾರೀ ಸದ್ದು, ಮುಗಿಲೆತ್ತರಕ್ಕೆ ಚಿಮ್ಮುವ ಬಣ್ಣ ಬಣ್ಣದ, ವಿವಿಧ ಆಕಾರಗಳ ಪಟಾಕಿಗಳನ್ನು ಕಣ್ತುಂಬಿಕೊಳ್ಳಲು ತುಂಗಾ ತೀರ ಸಜ್ಜಾಗಿದೆ. ತೆಪ್ಪದ ಅಲಂಕಾರ ಮುಗಿದಿದ್ದು, ತೆಪ್ಪ ಹೂ ಹಾರ, ವಿದ್ಯುತ್ ದೀಪಗಳಿಂದ ಸಂಪೂರ್ಣ ಉತ್ಸವಕ್ಕೆ ತಯಾರಾಗಿದೆ.
