ಹೊಸ ವರ್ಷ ಅದ್ಧೂರಿಯಾಗಿ ಸ್ವಾಗತಿಸಿದ ತೀರ್ಥಹಳ್ಳಿ ಜನ!
– ಹೊಸ ವರ್ಷಾಚರಣೆ: ರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಿ ಸಂಭ್ರಮ
– ಮಲ್ನಾಡ್ ಕ್ಲಬ್, ಕುಂದಾದ್ರಿ ಮಿಸ್ಟ್, ನೆಸ್ಟ್ ಸೇರಿ ಹಲವೆಡೆ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ಹೊಸ ವರ್ಷ ತಮ್ಮೆಲ್ಲರಿಗೂ ಹೊಸ ಹರುಷವ ತರಲಿ. 2024ರ ಹೊಸ ವರ್ಷವನ್ನು ರಾಜ್ಯದೆಲ್ಲೆಡೆ ಅದ್ಧೂರಿಯಾಗಿ ಸ್ವಾಗತಿಸಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ತೀರ್ಥಹಳ್ಳಿ ತಾಲೂಕಿನ ಎಲ್ಲೆಡೆ ಒಂದೆಡೆ ಬಹುತೇಕರು ಪೂಜೆ ಮೂಲಕ ಶಾಸ್ರೋಕ್ತವಾಗಿ ಹೊಸ ವರ್ಷವನ್ನು ಬರಮಾಡಿಕೊಂಡರೆ, ಮತ್ತೊಂದೆಡೆ ಪಾರ್ಟಿ, ಡ್ಯಾನ್ಸ್, ಪಟಾಕಿ ಸಂಭ್ರಮದ ಮೂಲಕ ಅದ್ದೂರಿ ಹೊಸ ವರ್ಷಾಚರಣೆಯೂ ಮನೆ ಮಾಡಿತ್ತು. ಮಲ್ನಾಡ್ ಕ್ಲಬ್, ಕುಂದಾದ್ರಿ ಮಿಸ್ಟ್, ನೆಸ್ಟ್, ವಿಹಂಗಮ ಸೇರಿ ಹಲವೆಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಪಟಾಕಿ ಸಿಡಿಸಿ ಸಂಭ್ರಮ
ತೀರ್ಥಹಳ್ಳಿ ಸೇರಿ ಸುತ್ತಮುತ್ತಲಿನ ತಾಲೂಕಿನ ಹಲವು ಕಡೆ ಪಾರ್ಟಿ, ಡಿಜೆ ಮ್ಯೂಸಿಕ್, ಡ್ಯಾನ್ಸ್, ಸಂಗೀತ ರಸ ಸಂಜೆ, ಹಾಸ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಪಟಾಕಿ ಸಿಡಿಸಿ, ಕೇಕ್ ಕಟ್ ಮಾಡುವ ಮೂಲಕ ಹೊಸ ವರ್ಷ ಹೊಸ ಹರುಷದೊಂದಿಗೆ ಸಂಭ್ರಮಿಸಿದರು. ಇನ್ನು ನಮ್ಮ ಮಲೆನಾಡಿದಂತು ಪ್ರವಾಸಿಗರಿಂದ ತುಂಬಿ ತುಳುತ್ತಿದ್ದು, ಎಲ್ಲೆಡೆ ಹೊಸ ವರ್ಷಚಾರಣೆ ಸಂಭ್ರಮ ಕಂಡುಬಂದಿತ್ತು. ಪಟ್ಟಣ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ಕೂಡ ಹೊಸ ವರ್ಷದ ಸಂಭ್ರಮ ಕಳೆಗಟ್ಟಿತ್ತು.
ಕೆಲಸದ ನಡುವೆ ಹೊಸ ವರ್ಷ ಆಚರಿಸಿದ ಪೊಲೀಸರು!
ತೀರ್ಥಹಳ್ಳಿ ತಾಲೂಕಲ್ಲಿ ಪೊಲೀಸರು ಹೊಸ ವರ್ಷವನ್ನು ಕರ್ತವ್ಯದ ನಡುವೆ ಆಚರಿಸಿದರು. ಡಿವೈಎಸ್ಪಿ ಗಜಾನನ ವಾಮನ ಸುತಾರ, ಸರ್ಕಲ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ, ಸೇರಿ ಆಗುಂಬೆ, ಮಾಳೂರು ಸೇರಿ ಎಲ್ಲೆಡೆ ಪೊಲೀಸರು ಕರ್ತವ್ಯ ಮೆರೆದರು.
