Categories
ತೀರ್ಥಹಳ್ಳಿ

ತೀರ್ಥಹಳ್ಳಿ ಶಿಕ್ಷಣ ಇಲಾಖೆ ರಾಜ್ಯಕ್ಕೆ ಮಾದರಿ!

ತೀರ್ಥಹಳ್ಳಿ ಶಿಕ್ಷಣ ಇಲಾಖೆ ರಾಜ್ಯಕ್ಕೆ ಮಾದರಿ!
– 8ನೇ ತರಗತಿ ವಿದ್ಯಾರ್ಥಿಗಳಿಗೆ ಎನ್ಎಂಎಂಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ
– ದಸರಾ ರಜೆಯ 3 ದಿನ ವಿಶೇಷ ತರಬೇತಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಈ ಬಾರಿ ದಸರಾ ರಜೆಯ ಮೊದಲ ಮೂರು ದಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಎನ್ಎಂಎಂಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲನೇ ಹಂತದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದೆ.  ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಿ, ವಿಷಯವಾರು ಗುಣಮಟ್ಟದ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಅತ್ಯುನ್ನತ ಶ್ರೇಣಿಯನ್ನು ಪಡೆದಿರುವ ತೀರ್ಥಹಳ್ಳಿ ತಾಲೂಕಿನ ಶಿಕ್ಷಣ ಇಲಾಖೆ ಇದೀಗ ಮತ್ತೊಂದು ಸಾಧನೆಗೆ ಮುನ್ನುಡಿ ಬರೆಯಲು ಹೊರಟಿದೆ.

ತೀರ್ಥಹಳ್ಳಿಯ ಶಾಲಾ ಶಿಕ್ಷಣ ಇಲಾಖೆಯ ಉತ್ಸಾಹಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ತಾಲೂಕಿನ 8ನೇ ತರಗತಿ ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೌಢ ಶಾಲೆಗಳಲ್ಲಿ ನೋಂದಣಿ ಮಾಡಿಸಿ ಆ ಎಲ್ಲ ವಿದ್ಯಾರ್ಥಿಗಳಿಗೆ ತಾಲೂಕಿನ ಸಂಪನ್ಮೂಲ ಪ್ರೌಢಶಾಲಾ ಸಹ ಶಿಕ್ಷಕರಿಂದ ತರಬೇತಿ ಕಾರ್ಯಗಾರವನ್ನು ಆಯೋಜಿಸಿ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಉತ್ತೀರ್ಣರಾಗುವ ಮೂಲಕ ಯಶಸ್ವಿಯಾಗಲು ಯೋಜನೆ ರೂಪಿಸಿ ಈಗಾಗಲೇ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಜೊತೆ ಸಮಾಲೋಚನಾ ಸಭೆ ನಡೆಸಿ ಶಿಕ್ಷಕರ ಸಹಮತವನ್ನು ಪಡೆದುಕೊಂಡಿದ್ದಾರೆ. ಭೌಗೋಳಿಕ ಪ್ರದೇಶಗಳಿಗೆ ತಕ್ಕಂತೆ ಹೋಬಳಿವಾರು ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಮೇಗರವಳ್ಳಿ, ತೀರ್ಥಹಳ್ಳಿ, ಕೋಣಂದೂರು, ಕಟ್ಟೆ ಹಕ್ಕಲು ,ಮಾಳುರು ಪದವಿಪೂರ್ವ ಕಾಲೇಜುಗಳ ಪ್ರೌಢಶಾಲಾ ವಿಭಾಗದಲ್ಲಿ ತರಬೇತಿ ನಡೆಯಲಿದೆ.

ಏನಿದು ಎನ್.ಎಂ.ಎಂ.ಎಸ್ ಪರೀಕ್ಷೆ ?

ನ್ಯಾಷನಲ್ ಮೀನ್ಸ್- ಕಮ್- ಮೆರಿಟ್ ವಿದ್ಯಾರ್ಥಿವೇತನ ಪರೀಕ್ಷೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಈ ಪರೀಕ್ಷೆಯನ್ನು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಪ್ರತಿ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ,ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಯ ಶಾಲೆಗಳಲ್ಲಿ 8 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ 9ನೇ ತರಗತಿಯಿಂದ ಪ್ರತಿ ತಿಂಗಳಿಗೆ ರೂ 1000ದಂತೆ ವರ್ಷಕ್ಕೆ 12 ಸಾವಿರ ರೂ ಗಳಂತೆ ದ್ವಿತೀಯ ಪಿಯುಸಿವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಏಳನೇ ತರಗತಿಯಲ್ಲಿ ಶೇಕಡ 55 ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ ಮತ್ತು ಅವರ ಪೋಷಕರ ಆದಾಯ ಎಲ್ಲಾ ಮೂಲಗಳಿಂದ ವಾರ್ಷಿಕ ವರಮಾನ 3.5 ಲಕ್ಷ ಮೀರಿರದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಪರೀಕ್ಷೆಯ ಸ್ವರೂಪ ಹೇಗಿರುತ್ತದೆ..?

ಈ ಪರೀಕ್ಷೆಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳಿದ್ದು ಮಾನಸಿಕ ಸಾಮರ್ಥ್ಯ ಪರೀಕ್ಷೆ ಮತ್ತು ವ್ಯಾಸಂಗ ಪ್ರವೃತ್ತಿ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಎಂಟನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲು ಈ ಪರೀಕ್ಷೆ ನಡೆಯುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ವಿದ್ಯಾರ್ಥಿ ವೇತನದ ಮೂಲಕ ಪ್ರೇರೇಪಿಸಲಾಗುತ್ತದೆ.

ಡಿ.17ಕ್ಕೆ ಪರೀಕ್ಷೆ ಮಾಡಲು ಸಿದ್ಧತೆ

ಡಿಸೆಂಬರ್ 17ರ ಭಾನುವಾರದಂದು ಈ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ಧತೆಗಾಗಿ ಅಕ್ಟೋಬರ್ 8 ರಿಂದ 3 ದಿನಗಳ ಮೊದಲ ಹಂತದ ತರಬೇತಿ ಕಾರ್ಯಗಾರ ನಡೆಯಲಿದ್ದು ದಸರಾ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಲು ಅಣಿಗೊಳಿಸಲಾಗುತ್ತದೆ. ತಾಲೂಕಿನ ಶಾಲಾ ಶಿಕ್ಷಣ ಇಲಾಖೆಯು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಎರಡು ಮೂರು ಹಂತದಲ್ಲಿ ತರಬೇತಿ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು.

ನೋಂದಣಿ ಕಡ್ಡಾಯ
ಈ ಕೋಚಿಂಗ್ ಕ್ಲಾಸ್ ಗಳನ್ನು ನುರಿತ ಶಿಕ್ಷಕರಿಂದ ಆಯೋಜನೆ ಮಾಡಲಾಗಿದ್ದು ಈ ಪರೀಕ್ಷೆಗೆ ತಾಲೂಕಿನ ಎಲ್ಲ ನೊಂದಾಯಿಸಿದ ಮಕ್ಕಳು ಕಡ್ಡಾಯವಾಗಿ ಹಾಜರಾಗುವಂತೆ ಪೋಷಕರು ಸಹಕರಿಸುವಂತೆ ಕೋರಿದೆ.

ಗಣೇಶ್
ಕ್ಷೇತ್ರ ಶಿಕ್ಷಣಾಧಿಕಾರಿಗಳು,
ತೀರ್ಥಹಳ್ಳಿ ತಾಲೂಕು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.