ತೀರ್ಥಹಳ್ಳಿ ಸಿದ್ದೇಶ್ವರ ಬೆಟ್ಟದ ದೀಪೋತ್ಸವಕ್ಕೆ ಸಜ್ಜು!
– ಸಿದ್ದೇಶ್ವರ ಗುಡ್ಡದಲ್ಲಿ ದೀಪೋತ್ಸವಕ್ಕೆ ಬೆಳಕಿನ ರಂಗು
– ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ
– ಬೆಟ್ಟದ ಮೇಲೆ 1 ಕಿಮೀ ನಡೆದು ದೇವರ ನೋಡಬೇಕು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಾಳೆಬೈಲಿನಲ್ಲಿ ಅತೀ ಎತ್ತರದ ಅಂದರೆ ಸುಮಾರು ಇನ್ನೂರು ಅಡಿಗಳಷ್ಟು ಎತ್ತರವಿರುವ ಸಿದ್ದೇಶ್ವರ ಗುಡ್ಡದಲ್ಲಿ ನೆಲೆಸಿರುವ ಸಿದ್ದೇಶ್ವರ ದೇವರಿಗೆ ಡಿಸೇಂಬರ್ 24ರಂದು ದೀಪೋತ್ಸವ ನಡೆಯಲಿದೆ.
ತೀರ್ಥಹಳ್ಳಿಯ ಅತೀ ದೊಡ್ಡ ದೀಪೋತ್ಸವ ಎಂದೇ ಖ್ಯಾತಿ ಪಡೆದಿರುವ ಸಿದ್ದೇಶ್ವರ ಗುಡ್ಡದಲ್ಲಿ ಸಿದ್ದೇಶ್ವರ ಸ್ವಾಮಿ ಸಮಿತಿ ಇವರ ಆಶ್ರಯದಲ್ಲಿ ಡಿ.24 ರ ಭಾನುವಾರ ಏಕಾದಶಾರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ದೀಪೋತ್ಸವ ನೆಡೆಯಲಿದೆ. ನಂತರ ಸಾಮೂಹಿಕ ಅನ್ನ ಸಂತರ್ಪಣೆ ಇರಲಿದೆ. ಈಗಾಗಲೇ ಇಡೀ ಬೆಟ್ಟ ಹಾಗೂ ಬಾಳೆಬೈಲಿನ ಮುಖ್ಯ ರಸ್ತೆಯಿಂದ ಗುಡ್ಡದವರೆಗೆ ವಿದ್ಯುತ್ ಅಲಂಕಾರಕ್ಕೆ ಸಿದ್ಧತೆ ನಡೆದಿದೆ.
ಡಿ.25ರಂದು ಸಂಜೆ ಸಿದ್ದೇಶ್ವರ ಸಭಾಭವನ ಉದ್ಘಾಟನೆ ಹಾಗೂ ಸನ್ನಿಧಿ ಕಲಾವಿದರು ಉಡುಪಿ ಇವರಿಂದ ಅಪ್ಪೆ ಮಂತ್ರ ದೇವತೆ ಎಂಬ ತುಳು / ಕನ್ನಡ ಭಕ್ತಿ ಪ್ರಧಾನ ನಾಟಕ ನಡೆಯಲಿದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು – ಮನ – ಧನ ಸಹಕಾರ ನೀಡಿ ಶ್ರೀ ಸ್ವಾಮಿಯ ವಿಜೃಂಭಣೆಯ ದೀಪೋತ್ಸವ ವೀಕ್ಷಿಸಿ ಶ್ರೀ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸಮಿತಿಯವರು ವಿನಂತಿಸಿದ್ದಾರೆ.
ಬೆಟ್ಟದ ಮೇಲೆ 1 ಕಿಮೀ ನಡೆದು ದೇವರ ನೋಡಬೇಕು!
ಇಡೀ ತೀರ್ಥಹಳ್ಳಿ ಕಾಣುವ ಈ ಬೆಟ್ಟದ ಮೇಲಿನ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ದೀಪೋತ್ಸವ ನಡೆಯಲಿದೆ. ಇಡೀ ಬೆಟ್ಟಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ಇನ್ನು ಕೆಳಗಿನಿಂದ ಅಡುಗೆ ಪದಾರ್ಥ ತೆಗೆದುಕೊಂಡು ಹೋಗಿ ಬೆಟ್ಟದ ಮೇಲೆಯೇ ಅಡುಗೆ ತಯಾರು ಮಾಡಲಾಗುತ್ತಿದೆ. ಬೆಟ್ಟದ ಮೇಲೆ 1 ಕಿಮೀ ನಡೆದು ದೇವರ ನೋಡಬೇಕು!. ಇದುವೇ ಇಲ್ಲಿನ ವಿಶೇಷ.
ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಿ!
ಬೆಟ್ಟದ ಮೇಲಿರುವ ದೇವಾಲಯ ಅಭಿವೃದ್ಧಿ ಮತ್ತು ಮೇಲೆ ಹೋಗಲು ರೋಪ್ ವ್ಯವಸ್ಥೆ ಮಾಡಿದಲ್ಲಿ ಇದೊಂದು ಮಲೆನಾಡಿನ ಪ್ರಸಿದ್ಧ ಪ್ರವಾಸಿ ಧಾರ್ಮಿಕ ಕ್ಷೇತ್ರ ಆಗಲಿದೆ. ಈ ಬಗ್ಗೆ ಆಡಳಿತ, ಸರ್ಕಾರ ಯೋಚಿಸಬೇಕಿದೆ.
