Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ ದಶಮಾನೋತ್ಸವ!

ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ ದಶಮಾನೋತ್ಸವ!
– ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
– ಅಚ್ಚುಕಟ್ಟಾದ ಕಾರ್ಯಕ್ರಮ; ಆಯೋಜಕರಿಗೆ ಗಣ್ಯರಿಂದ ಮೆಚ್ಚುಗೆಯ ಶಭಾಷ್ ಗಿರಿ.

NAMMUR EXPRESS NEWS
ತೀರ್ಥಹಳ್ಳಿ: ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಭಾನುವಾರ ಜರುಗಿದ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟದ ದಶಮಾನೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದು ಶಾಸಕ ಆರಗ ಜ್ಞಾನೇಂದ್ರ ಸಭಾ ಕಾರ್ಯಕ್ರಮಕ್ಕೆ ಮುನ್ನ ಆಗಮಿಸಿ, ಶುಭ ಕೋರಿದ್ದಾರೆ. ಅಧ್ಯಕ್ಷತೆಯನ್ನು ಸಂಯುಕ್ತ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಸುಲೇಮಾನ್ ಸಾಹೇಬ್ ವಹಿಸಿದ್ದರು. ವಿಧಾನಸಭಾ ಸ್ಪೀಕರ್ ಯುಟಿ ಖಾದರ್, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌ಎಂ ಮಂಜುನಾಥ್ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸಂಯುಕ್ತ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಇಬ್ರಾಹಿಂ ಶರೀಫ್ ಉಪಾಧ್ಯಕ್ಷ ಸುಲೇಮಾನ್ ದಸ್ತಗೀರ್, ಸಂಚಾಲಕ ಡಿ.ಎಸ್.ಅಬ್ದುಲ್ ರೆಹಮಾನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಈ ಸಮಯದಲ್ಲಿ ಮಾತನಾಡಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದ‌ರ್ ಅವರು ಶಿಕ್ಷಣಕ್ಕೆ ನೀಡುವ ಕೊಡುಗೆ ದೇಶಕ್ಕೆ ನೀಡುವ ಕಾಣಿಕೆಯಾಗಿದೆ. ಮಕ್ಕಳನ್ನು ದೇಶದ ಆಸ್ತಿಯಾಗಿ ರೂಪಿಸಲು ಪೋಷಕರು ಶಿಕ್ಷಣ ಮಾತ್ರವಲ್ಲದೇ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರಾಜ್ಯದಲ್ಲಿ 10 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲು ಸರ್ಕಾರ ತೀರ್ಮಾನಿಸಿದ್ದು ಎಲ್‌ಕೆಜಿಯಿಂದ ಪಿಯುಸಿವರೆಗಿನ 300 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮತ್ತು 400 ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ 10 ತಿಂಗಳ ಐಎಎಸ್, ಐಪಿಎಸ್ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ರಾಜಕೀಯ ಕಾರ್ಯದರ್ಶಿ ನಾಸಿರ್‌ ಅಹಮದ್ ಖಾನ್, ಕುವೆಂಪು, ಶಾಂತವೇರಿ ಗೋಪಾಲಗೌಡ ಹುಟ್ಟಿದ ನೆಲದಲ್ಲಿ ಸೌಹಾರ್ದತೆಯ ಭಾವನೆ ರಕ್ತದಲ್ಲೇ ಇದೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಮೂಡಬೇಕಿದೆ. ಒಬ್ಬ ಕಿಡಿಗೇಡಿ ಮಾಡುವ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಬರುವಂತೆ ಶಿಕ್ಷಣ ಕೊಡಿಸಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಕಿಮ್ಮನೆ ರತ್ನಾಕರ್‌ ಮಾತನಾಡಿ, ವ್ಯಾಪಾರ ಬದುಕಿಗೆ ಸಂಬಂಧಿಸಿದ್ದು, ಇದಕ್ಕೆ ಜಾತಿ-ಧರ್ಮದ ಕಟ್ಟುಪಾಡುಗಳಿಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಮನೋಧರ್ಮ ನಮ್ಮದಾಗಬೇಕು ಎಂದಿದ್ದಾರೆ. ಸಾಧಕರನ್ನು ಗೌರವಿಸಿ, ಮಾತನಾಡಿ, ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮಕ್ಕೆ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.