ಬಜೆಟ್ ಬಜೆಟ್… ತೀರ್ಥಹಳ್ಳಿ ಉಳಿತಾಯ ಬಜೆಟ್..!
– ಮೊದಲ ಬಜೆಟಲ್ಲೇ ಮನಗೆದ್ದ ಪಪಂ ಅಧ್ಯಕ್ಷೆ ಗೀತಾ ರಮೇಶ್
– ಹೊಸ ಬಿಪಿಒ ಕಟ್ಟಡ ಸೇರಿದಂತೆ ಹಲವು ಯೋಜನೆ
– ತೀರ್ಥಹಳ್ಳಿ ಫೋಟೋ ಸೆಲ್ಫಿ ಪಾಯಿಂಟ್ ನಿರ್ಮಾಣ
NAMMUR EXPRESS NEWS
ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಗೀತಾ ರಮೇಶ್ ಫೆ.29ರಂದು ಪ.ಪಂ.ನ ವಾರ್ಷಿಕ ಬಜೆಟ್ ಮಂಡಿಸಿದರು. 2024-25 ನೇ ಸಾಲಿನಲ್ಲಿ 33.86 ಕೋಟಿ ಆದಾಯ, 33.72 ಕೋಟಿ ಖರ್ಚಿನ ಲೆಕ್ಕಪತ್ರ ದೊಂದಿಗೆ 13.66 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ ಅನ್ನು ಅವರು ಮಂಡಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ವಿಪಕ್ಷನಾಯಕ ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್ ಯತಿರಾಜ್, ರವೀಶ್ ಬಾಳೇಬೈಲು, ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ಆಡಳಿತ ಪಕ್ಷದ ಸದಸ್ಯರಾದ ಉಪಾಧ್ಯಕ್ಷರೆಹಮತ್ ಉಲ್ಲಾ ಅಸಾದಿ, ಬಿ.ಗಣಪತಿ, ಜಯಪ್ರಕಾಶ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಸುಶೀಲ ಶೆಟ್ಟಿ, ಶಬನಂ, ಮಂಜುಳಾ ನಾಗೇಂದ್ರ, ನಮೃತ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಕುರಿಯಾ ಕೋಸ್ ಮತ್ತು ಸಿಬ್ಬಂದಿಗಳು ಬಜೆಟ್ ಸಭೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು.
ತೀರ್ಥಹಳ್ಳಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಿದ್ದಪಡಿಸಲಾಗಿರುವ ಕಾರ್ಯ ಯೋಜನೆಗೆ ಎಲ್ಲರ ಸಹಕಾರವನ್ನು ಕೋರಿದ ಪ ಪಂ ಅಧ್ಯಕ್ಷರು 2024-25 ಸಾಲಿನಲ್ಲಿ ಸರ್ಕಾರದ ಅನುದಾನ ಮತ್ತು ಪ.ಪಂ.ಯ ವಿವಿಧ ಆದಾಯ ಮೂಲದಿಂದ 2,23,96,500 ಆದಾಯವನ್ನು ನಿರೀಕ್ಷಿಸಲಾಗಿದೆ. ನಿರೀಕ್ಷಿತ ಆದಾಯದಲ್ಲಿ 33,72,39,725 ರೂ ವೆಚ್ಚದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷದ ಸದಸ್ಯರು ಆಯವ್ಯಯ ಪತ್ರದ ಅಂಕಿ ಅಂಶಗಳು ಸೇರಿದಂತೆ ಯೋಜಿತ ಉದ್ದೇಶಗಳು ವಾಸ್ತವತೆಗೆ ದೂರವಾಗಿದೆ ಎಂದು ದೂರಿದರು. ಮುಂಗಡ ಪತ್ರದ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಸಾಮಾಜಿಕ ನ್ಯಾಯ ಮತ್ತು ಬದ್ದತೆಯೊಂದಿಗೆ ಅಭಿವೃದ್ಧಿಯಿಂದ ಕೂಡಿದ್ದು ಮಾದರಿ ಆಯವ್ಯಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಂಗಡ ಪತ್ರವನ್ನು ಸಮರ್ಥಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಮಹಿಳಾ ಅಧ್ಯಕ್ಷರ ಕಳಕಳಿ ಮತ್ತು ಚಿಂತನೆಯಲ್ಲಿ ಮಂಡಿಸಲಾದ ಬಜೆಟ್ ಮಾದರಿಯಾಗಿದ್ದು ಇದರಲ್ಲಿ ತುಳಿತಕ್ಕೊಳಗಾದ ವರ್ಗದ ಹಿತವನ್ನು ಬಯಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಬದ್ದತೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಇದು ಮಾದರಿಯಾಗಿದೆ ಎಂದರು. ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ ಸೇರಿದಂತೆ ಆಡಳಿತ ಪಕ್ಷದ ಎಲ್ಲ ಸದಸ್ಯರು ದನಿಗೂಡಿಸಿದರು ಮುಂಗಡ ಪತ್ರ ವಾಸ್ತವಿಕತೆಗೆ ದೂರವಾಗಿದೆ ಎಂದು ಟೀಕಿಸಿದ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಈ ಮುಂಗಡ ಪತ್ರದ ಕಲ್ಪನೆ ಮೇಲ್ನೋಟಕ್ಕೆ ಉತ್ತಮವಾಗಿದೆ. ಆದರೆ ನಿರೀಕ್ಷತ ಆದಾಯ ಅಸಾಧ್ಯ.
ಕಳೆದ ಎರಡು ವರ್ಷಗಳಿಂದ ತೆರಿಗೆಯನ್ನು ಯಾಕೆ ಕ್ರಮ ಬದ್ಧವಾಗಿ ವಸೂಲಿ ಮಾಡುತ್ತಿಲ್ಲಾ ಎಂದು ಪ್ರಶ್ನಿಸಿದರು. ಮುಂಗಡ ಪತ್ರದಲ್ಲಿ ಹೇಳಲಾದ ಆದಾಯದ ಮೂಲವನ್ನು ಪ್ರಶ್ನಿಸಿದ ಸದಸ್ಯ ಸಂದೇಶ್ ಜವಳಿ, ಮುಂಗಡ ಪತ್ರ ತಯಾರಿಯಲ್ಲೇ ಎಡವಿದ್ದೀರಿ. ಅಂಕಿ ಅಂಶಗಳಲ್ಲೇ ತಪ್ಪುಗಳಿವೆ. ರಾಜಸ್ವ ನಿರೀಕ್ಷೆ ವಾಸ್ತವತೆಗೆ ದೂರವಾಗಿದೆ. ಗೋಪಾಲಗೌಡ ರಂಗಮಂದಿರ ನಿರ್ವಹಣೆ ಇಲ್ಲಾ ಎಂದು ಟೀಕಿಸಿದರಲ್ಲದೇ ಅಬ್ದುಲ್ ಕಲಾಂ ವಾಣಿಜ್ಯ ರೋಲಿಂಗ್ ಷೆಟರ್ ತುಕ್ಕು ಹಿಡಿಯುತ್ತಿದ್ದು ಅಲ್ಲಿರುವ ಮಳಿಗೆಗಳನ್ನು ಮರು ಹರಾಜು ಮಾಡೋದು ಸೂಕ್ತ ಎಂದೂ ಹೇಳಿದರು.
ಬಜೆಟ್ ನಲ್ಲಿ ಏನೇನಿದೆ.? :
ವಿಶೇಷ ಅನುದಾನದ 2.50 ಕೋಟಿ, ಕೇಂದ್ರ ಸರ್ಕಾರದ ಸ್ವಚ್ಚ ಭಾರತ್ ಮಿಷನ್ ಅನುದಾನ 25.00 ಲಕ್ಷ, ಸಣ್ಣ ನೀರಾವರಿ ಇಲಾಖೆಯಿಂದ 50.00 ಲಕ್ಷ, ಪ.ಪಂ ನಿವೇಶನಗಳ ಮಾರಾಟದಿಂದ 4.00 ಕೋಟಿ, ಪ.ಪಂ ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ 95.00 ಲಕ್ಷ ರೂ, ಆಸ್ತಿ ತೆರಿಗೆ, ಖಾತಾ ವರ್ಗಾವಣೆಯಿಂದ 1.90 ಕೋಟಿ, ರಾಜ್ಯ ಸರ್ಕಾರದಿಂದ ವಿದ್ಯುಚ್ಚಕ್ತಿ ಬಿಲ್ ಪಾವತಿ 1.58 ಕೋಟಿ, 24×7 ಕುಡಿಯುವ ನೀರು ಸಂಬಂಧಿತ ಇತರೆ ಬಾಬಿನಿಂದ 1.00 ಕೋಟಿ, 15 ನೇ ಹಣಕಾಸು ಯೋಜನೆಯಡಿ 57.00 ಲಕ್ಷ ರೂಗಳನ್ನು ನಿರೀಕ್ಷಿಸಲಾಗಿದೆ.
ಉದ್ದೇಶಿತ ಯೋಜನೆಗಳು:
ವಿದ್ಯಾವಂತ ಯುವಕ ಯುವತಿಯರ ಉದ್ಯೋಗ ಅವಕಾಶ ಕಲ್ಪಿಸಲು ಬೆಟ್ಟಮಕ್ಕಿಯಲ್ಲಿರುವ ಬಿಪಿಓ ವಿಸ್ತರಣಾ ಕಟ್ಟಡ ನಿರ್ಮಾಣಕ್ಕೆ 50.00 ಲಕ್ಷ ರೂ, ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆಗೆ 45.00 ಲಕ್ಷ, ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸಲುವಾಗಿ ಮನೆಗಳಿಗೆ ಡಸ್ಟ್ ಬಿನ್ ವಿತರಣೆ ಮತ್ತು ಕಸ ವಿಲೇವಾರಿ ವಾಹನ ಖರೀದಿಗೆ ಒಟ್ಟು 28.00 ಲಕ್ಷ, ಪಟ್ಟಣದಲ್ಲಿ ವಾಹನಗಳ ನಿಲುಗಡೆಗೆ ಪೇಪಾರ್ಕ್ ವ್ಯವಸ್ಥೆಗೆ 15.00 ಲಕ್ಷ ಮತ್ತು ಸಾರ್ವಜನಿಕರಿಗಾಗುವ ಅನಾನುಕೂಲವನ್ನು ತಪ್ಪಿಸಲು ಆಧುನಿಕ ತಂತ್ರ ವ್ಯವಸ್ಥೆಗೆ 15.00 ಲಕ್ಷ, ಮಾನವ ದಿನಗಳನ್ನು ಕಡಿತಗೊಳಿಸಿ ಅತ್ಯಾಧುನಿಕ ರಸ್ತೆ ಸ್ವಚ್ಛ ಮಾಡುವ ಯಂತ್ರ ಖರೀದಿಗೆ ,15.00 ಲಕ್ಷ ರೂಗಳನ್ನು ಮುಂಗಡ ಪತ್ರದಲ್ಲಿ, ಸಿಸಿ ಟಿವಿ ಅಳವಡಿಕೆ, ಫುಡ್ ಕೋರ್ಟ್ ನಿರ್ಮಾಣ, ವನ ಮಹೋತ್ಸವ, ಜಾತ್ರೆ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಪ.ಪಂ ಸದಸ್ಯರ ಅಧ್ಯಯನ ಪ್ರವಾಸ ಹೀಗೆ ಆದಾಯದ ಮೂಲವನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಮುಖ್ಯಾಧಿಕಾರಿ ಕುರಿಯ ಕೋಸ್, ಸದಸ್ಯರುಗಳಾದ ಶಬನಂ, ಸುಶೀಲಾ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಯತಿರಾಜ್, ಜ್ಯೋತಿ ಮೋಹನ್, ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

