ಹಳ್ಳಿ ಜನರಿಗಿಲ್ಲ ಚಿಕಿತ್ಸೆ ಭಾಗ್ಯ!
– ಬಡವರ ಬದುಕಿಗೆ ಭದ್ರತೆ ಇಲ್ಲ: ಖಾಸಗಿ ಆಸ್ಪತ್ರೆ ಹೋಗೋಕ್ ಆಗಲ್ಲ
– ಕೆಲ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಕೇಳೋರಿಲ್ಲ.ಹೇಳೋರಿಲ್ಲ!
– ಯಾವ ಸರ್ಕಾರ ಬಂದರೂ ಇದೆ ಕಥೆ: ಓಟಿಗಾಗಿ ಹೊಡೆದಾಟ ಅಷ್ಟೇ!
ವಿಶೇಷ ವರದಿ: ಸರ್ಕಾರ ಏನ್ ಮಾಡ್ತಿದೆ?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸೇರಿದಂತೆ ರಾಜ್ಯದ ಯಾವುದೇ ತಾಲೂಕಲ್ಲೂ ಬಡ ಜನರ ಬದುಕಿಗೆ ಈಗ ಭದ್ರತೆ ಇಲ್ಲ… ತೀರ್ಥಹಳ್ಳಿ ತಾಲೂಕಿನಲ್ಲಿ ಗ್ರಾಮೀಣ ಜನರಿಗೆ ಸರಕಾರದ ಪ್ರಾಥಮಿಕ ಚಿಕಿತ್ಸೆಯ ಆರೋಗ್ಯ ಸೇವೆ ಕೂಡ ಸರಿಯಾಗಿ ಸಿಗುತ್ತಿಲ್ಲ. ಹಳ್ಳಿಗಳ ಆಸ್ಪತ್ರೆಗಳು ನೆಪ ಮಾತ್ರಕ್ಕಿವೆ. ವೈದ್ಯರಿದ್ದರೆ ನರ್ಸ್ ಇಲ್ಲ.. ನರ್ಸ್ ಇದ್ದರೆ ಆಂಬುಲೆನ್ಸ್ ಇಲ್ಲ. ಕರೋನಾದಂತಹ ಕೆಟ್ಟ ಪರಿಸ್ಥಿತಿಯಲ್ಲಿಯೂ ನಮ್ಮ ಅರೋಗ್ಯ ಕೇಂದ್ರಗಳು, ಆಸ್ಪತ್ರೆಗಳು ಸುಧಾರಣೆ ಕಂಡಿಲ್ಲ. ಇದರಿಂದ ಪ್ರತಿ ದಿನ ಸಾವಿರಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಭಾನುವಾರ ಆಸ್ಪತ್ರೆ ಬಾಗಿಲು!?
ತೀರ್ಥಹಳ್ಳಿ ತಾಲೂಕು ಸೇರಿ ಎಲ್ಲೆಡೆ ಭಾನುವಾರ ಬಹುತೇಕ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಚಿಕಿತ್ಸೆ ಶೂಶೂಷೆ, ಆರೋಗ್ಯ ಸೇವೆ ದೊರೆಯ ಬೇಕು ಎಂಬ ಸರಕಾರದ ನಿಯಮಕ್ಕೆ ಆಸ್ಪತ್ರೆಯಲ್ಲಿ ಕವಡೆಕಾಸಿನ ಬೆಲೆ ಸಿಗುತ್ತಿಲ್ಲ. ಜನ ಕೇಳೋದು ಇಲ್ಲ. ಆಯಾ ಪಕ್ಷ, ನಾಯಕರ ಹಿಂಬಾಲಕರಾಗಿ ಕೊನೆಗೆ ತಮ್ಮ ಮನೆಯವರ ಜೀವ ಹೋದರೂ ರಾಜಕೀಯದ ಅಮಲಲ್ಲಿ ತೇಲುತ್ತಿರುವ ದೃಶ್ಯ ದಿನ ಬೆಳಗಾದರೆ ಆಸ್ಪತ್ರೆ ಎದುರು ಕಾಣುತ್ತವೆ.
ದಿನದ 24 ಗಂಟೆ ಆರೋಗ್ಯ ಸೇವೆಯ ಆಸ್ಪತ್ರೆಗಳ ಪರಿಸ್ಥಿತಿಯಂತೂ ದಿಕ್ಕೆಟ್ಟು ಹೋಗಿದೆ. ಕೆಲ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಂಜೆ 4ಕ್ಕೆ ಆಸ್ಪತ್ರೆಗೆ ಬೀಗ ಹಾಕಿ ಕರ್ತವ್ಯ ಮೊಟಕುಗೊಳಿಸಿ ತೆರಳುತ್ತಿರುವ ಕುರಿತಂತೆ ವ್ಯಾಪಕ ದೂರುಗಳವೆ. ಆಸ್ಪತ್ರೆ ಆವರಣದಲ್ಲಿ ವಾಸ್ತವ್ಯದ ಗೃಹ ಹೊಂದಿದ್ದು, ರಾತ್ರಿ ವೇಳೆ ಜನರಿಗೆ ತುರ್ತಾಗಿ ಪ್ರಾಥಮಿಕ ಚಿಕಿತ್ಸೆ ನೀಡುವ ಜವಾಬ್ದಾರಿ ವೈದ್ಯರು, ವೈದ್ಯಕೀಯ ಸಿಬ್ಬಂದಿಯದ್ದಾಗಿದೆ. ಈ ಕಡ್ಡಾಯ ನಿಯಮ ಅನುಷ್ಠಾನದಲ್ಲಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ, ಕರ್ತವ್ಯ ಲೋಪದ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಹಿರಿಯ ಅಧಿಕಾರಿಗಳಿಗೆ ಗೊತ್ತೇ ಇಲ್ವಾ?ಸಾರ್ವಜನಿಕರ ಕುಂದು ಕೊರೆತೆಗಳ ಪೆಟ್ಟಿಗೆ ಸಹ ಆಸ್ಪತ್ರೆ ಕೇಂದ್ರದಲ್ಲಿ ಇಲ್ಲ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕ ಸಂಘ ಸಂಸ್ಥೆಗಳ ಮುಖಂಡರು, ರಾಜಕೀಯ ಪ್ರಮುಖರು ಆಸ್ಪತ್ರೆಯಲ್ಲಿನ ಆರೋಗ್ಯ ಸೇವೆ ವೈಫಲ್ಯ ಕುರಿತಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.
ರೋಗಿಗಳ ಪಾಲಿಗೆ ಶಾಪ!
ಸರಕಾರಿ ಆಸ್ಪತ್ರೆ ಗಳಲ್ಲಿ ಡೆಂಗೆ, ಮಲೇರಿಯಾ, ಇಲಿ ಜ್ವರ, ಮಂಗನ ಕಾಯಿಲೆ, ಚಿಕೂನ್‌ಗುನ್ಯಾ, ಎಚ್1ಎನ್1, ಎಚ್3 ಎನ್2, ಸ್ಥಬ್ ಟೈಪಸ್, ರುಬೆಲ್ಲಾ, ಮೀಸಲ್ಸ್ ಮುಂತಾದ ಜ್ವರ ಪೀಡಿತ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ. ಸಾಮಾನ್ಯ ರೋಗಿಗಳು, ಹೆರಿಗೆ, ಇತರೆ ಕಾಯಿಲೆಗಳ ರೋಗಿಗಳು ಚಿಕಿತ್ಸೆಗೆ ಸರಕಾರಿ ಆಸತ್ರೆ ಆವಲಂಬಿಸಿದ್ದಾರೆ. ಆದರೆ, ಸರಕಾರಿ ಆಸ್ಪತ್ರೆಯ ಕೆಲ ವೈದ್ಯ, ವೈದ್ಯಕೀಯೇತರ ಸಿಬ್ಬಂದಿ ಗುಣಮಟ್ಟದ ಆರೋಗ್ಯ ಸೇವೆ ನೀಡುವುದಕ್ಕೆ ಆಸಕ್ತಿ ತೋರದಿರುವುದು ರೋಗಿಗಳ ಪಾಲಿಗೆ ಶಾಪವಾಗಿ ಕಾಡುತ್ತಿದೆ.
ಪ್ರತಿ ದಿನ ಒಂದಲ್ಲ ಒಂದು ಜೀವ ಹೋಗುತ್ತಿದೆ!
ತೀರ್ಥಹಳ್ಳಿ ತಾಲೂಕಿನ ಮಾಳೂರು ಆಸ್ಪತ್ರೆಯಲ್ಲಿ ಸರಿಯಾದ ಪ್ರಾಥಮಿಕ ಚಿಕಿತ್ಸೆ ಸಿಗದೇ ತೂದೂರಿನ ಅಮಿತ್ ಶೆಟ್ಟಿ ಎಂಬುವರು ಸಾವನ್ನು ಕಂಡ ಘಟನೆ ಭಾನುವಾರ ನಡೆದಿದೆ. 5 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಅಮಿತ್ 2 ಬಾರಿ ವಾಂತಿ ಆಗಿದ್ದು ಮಾಳೂರು ಆಸ್ಪತ್ರೆಗೆ ಕರೆ ತಂದರೆ ಅಲ್ಲಿ ಯಾರೂ ಇರಲಿಲ್ಲ. 108 ವಾಹನ ಕೂಡ ಸಿಗಲಿಲ್ಲ. ಬಳಿಕ ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಕರೆ ತರುವ ಮುನ್ನವೇ ಪ್ರಾಣ ಬಿಟ್ಟರು.
ಮೊನ್ನೆ ಮೊನ್ನೆ ಕುಡುಮಲ್ಲಿಗೆ ಬಳಿ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಹೀಗೆ ದಿನ ನಿತ್ಯ ಒಂದಲ್ಲ ಒಂದು ಸಾವು ಆಗುತ್ತಲೇ ಇದೆ. ಆದರೆ ಎಲ್ಲರೂ ಕೇಳುವುದನ್ನು ಬಿಟ್ಟಿದ್ದಾರೆ. ಏಕೆಂದರೆ ಎಲ್ಲರಿಗೂ ರಾಜಕೀಯ ಮುಖ್ಯ. ಮಾನವೀಯತೆ ಅಲ್ಲ.
