Categories
ತೀರ್ಥಹಳ್ಳಿ

ನಾಲ್ವರ ಸಾವಿಗೆ ಕಾರಣ ಏನು..?!!

ನಾಲ್ವರ ಸಾವಿಗೆ ಕಾರಣ ಏನು..?!!
– ಒಂದೇ ಕುಟುಂಬದ ನಾಲ್ವರ ಸಾವು: ಊರಲ್ಲಿ ಮೌನ!
– ಒಂದೇ ದಿನ ಮೂವರು, ಉಳಿದವನೊಬ್ಬ ಆಸ್ಪತ್ರೆಯಲ್ಲಿ ಸಾವು: ಬೆಂಗಳೂರಲ್ಲೇ ಅಂತ್ಯಕ್ರಿಯೆ
– ಊರಿನಲ್ಲಿ ಸಾರ್ವಜನಿಕ ಶ್ರದ್ದಾಂಜಲಿ ಸಭೆ

NAMMUR EXPRESS NEWS
ತೀರ್ಥಹಳ್ಳಿ: ಆ ಊರಲ್ಲಿ ಆ ನಾಲ್ವರು ಅಪ್ಪ ಅಮ್ಮ ಇಬ್ಬರು ಮಕ್ಕಳು ನೋಡ ನೋಡುತ್ತಾ ತಮ್ಮದೇ ಕೃಷಿ ಪದ್ಧತಿ ಮೂಲಕ ತೋಟ ಮಾಡಿ ಉತ್ತಮ ಫಸಲು ಪಡೆದು ನೆಮ್ಮದಿ ಜೀವನ ಮಾಡುತ್ತಿದ್ದರು. ಇಬ್ಬರು ಅಣ್ಣ ತಮ್ಮ ಸೇರಿ ಅಡಿಕೆ ವ್ಯಾಪಾರ ಮಾಡಿ ಒಳ್ಳೆ ಹೆಸರು, ಹಣ ಗಳಿಕೆ ಮಾಡಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ. ನಾಲ್ವರು ತಮ್ಮನ್ನು ದಹಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಕಳೆದ ಶನಿವಾರ ಬಂದರು. ಭಾನುವಾರ ಮುಂಜಾನೆಯಷ್ಟರಲ್ಲಿ ಅದನ್ನು ಅವರು ಗಟ್ಟಿ ಮನಸು ಮಾಡಿ ಮಾಡಿಯೇ ಬಿಟ್ಟರು. ಮನಸ್ಸು ಅಷ್ಟು ಕಲ್ಲಾಗಿತ್ತು. ಸ್ಥಳದಲ್ಲೇ ಅಪ್ಪ, ಅಮ್ಮ, ಓರ್ವ ಮಗ ಸುಟ್ಟು ಬೂದಿಯಾದರು. ಓರ್ವ ಹೊರ ಬಂದು ಬಾವಿ ಹಾರಿ ಸಾಯಲು ಆ ಉರಿಯ ನಡುವೆ ಪ್ರಯತ್ನಿಸಿ ಬಳಿಕ ಜನ ಆತನನ್ನು ಆಂಬುಲೆನ್ಸ್ ಹಾಕಿ ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟರು. ಅಲ್ಲಿಗೂ ಚಿಕಿತ್ಸೆ ಸ್ಪಂದಿಸದೆ ಬೆಂಗಳೂರು ವಿಕ್ಟೊರಿಯಾ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿಯೂ ಚಿಕಿತ್ಸೆ ಫಲ ನೀಡದೆ ಭರತ್ ಬಾರದ ಲೋಕಕ್ಕೆ ಜಾರಿದ್ದಾನೆ. ಇಡೀ ಕುಟುಂಬ ಬೆಂಕಿಗೆ ಬಲಿಯಾಗಿದೆ. ಊರಲ್ಲಿ ನೀರವ ಮೌನ ಆವರಿಸಿದೆ.

ಬೆಂಗಳೂರಲ್ಲೇ ಭರತ್ ಅಂತ್ಯಕ್ರಿಯೆ

ತೀರ್ಥಹಳ್ಳಿಯ ಅರಳಸುರಳಿ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಬೆಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ, ಮತ್ತೋರ್ವ ಚಿಕಿತ್ಸೆ ಫಲ ನೀಡದೆ ಮಂಗಳವಾರ ಮೃತಪಟ್ಟಿದ್ದಾನೆ. ಅಲ್ಲಿಗೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿತ್ತು. ಮಂಗಳವಾರ ರಾತ್ರಿ ಸುಮಾರಿಗೆ ಮೃತಪಟ್ಟಿದ್ದು ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಆತನ ಕುಟುಂಬದವರು, ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದಾರೆ.

ನಿಗೂಢ ಕಾರಣಕ್ಕೆ ಕುಟುಂಬವೇ ಬಲಿಯಾಯ್ತು!

ತೀರ್ಥಹಳ್ಳಿ ತಾಲೂಕು ಅರಳಸುರಳಿಯ ಕೇಕೊಡ್ ಕುಟುಂಬದ 4 ಮಂದಿ ಸದಸ್ಯರೆಲ್ಲರೂ ಭಾನುವಾರ ಸಜೀವ ದಹನ ಮಾಡಿಕೊಂಡಿದ್ದರು. ಭಾನುವಾರ ಮುಂಜಾನೆ ಮನೆಯ ಪಕ್ಕದ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದರು ಎನ್ನಲಾಗಿದೆ. ಈ ದುರಂತದಲ್ಲಿ ರಾಘವೇಂದ್ರಕೆಕೋಡ್ (65), ಪತ್ನಿನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ಬೆಂಕಿಗೆ ಆಹುತಿಯಾಗಿದ್ದರು. ಇನ್ನೋರ್ವ ಪುತ್ರ ಭರತ್ (28) ಮಂಗಳವಾರ ಮೃತಪಟ್ಟಿದ್ದಾರೆ.
ಸುಡಬಹುದಾದ ಎಲ್ಲಾ ವಸ್ತುಗಳು ಅಂದರೆ ಕಟ್ಟಿಗೆ,ಹಾಸಿಗೆ, ಚಾಪೆ ಬಟ್ಟೆ ಬರೆ ಪೇಪರ್ ಪೇಸ್ಟು ಎಲ್ಲವನ್ನು ಕೋಣೆಯಲ್ಲಿ ಹಾಕಿಕೊಂಡು ಮದ್ಯದಲ್ಲಿ ಈ ಕುಟುಂಬ ಪೆಟ್ರೋಲ್ ಸುರಿದುಕೊಂಡು ಸಜೀವವಾಗಿ ದಹಿಸಿಕೊಂಡಿದ್ದಾರೆ. ಅಂದೇ ರಾತ್ರಿ ಮೂವರನ್ನು ಪೊಲೀಸರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಕೂಡ ನಡೆದಿತ್ತು.

ಪೊಲೀಸ್ ತನಿಖೆ: ಆ ಕಾರಣ ಏನು…?

ಒಂದೇ ಕುಟುಂಬದ ಅದರಲ್ಲೂ ಬಾಳಿ ಬದುಕಬೇಕಾಗಿದ್ದ ಇಬ್ಬರು ಯುವಕರು ಆತ್ಮಹತ್ಯೆ ಹಾದಿ ಹಿಡಿಯಲು ಕಾರಣ ಇಲ್ಲದೆ ಇಲ್ಲ. ಆ ಕಾರಣ ಏನು ಎಂಬ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಅಸ್ತಿ ಕಲಹ ಎಂದು ಚರ್ಚೆ ಇದೆ. ಆದರೆ ಅಷ್ಟು ಕ್ರೂರ ಮನಸು ಮಾಡಿದ್ದು ಏಕೆ ಎಂಬುದು ಎಲ್ಲರ ಪ್ರಶ್ನೆ. ಉತ್ತರ ಇಲ್ಲವಾಗಿದೆ.

ಗ್ರಾಮದ ಜನರ ಸಂತಾಪ ಸಭೆ

ತೀರ್ಥಹಳ್ಳಿ ತಾಲೂಕು ಅರಳಸುರಳಿಯಲ್ಲಿ ಬುಧವಾರ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಸಮ್ಮುಖದಲ್ಲಿ ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಸೇರಿ ಸಂತಾಪ ಸಭೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಈ ಮೂಲಕ ಗ್ರಾಮದ ಜನ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.