ವೈ.ಎ.ಪ್ರಭಾಕರ್ ಜೋಯ್ಸ್ ಗೌರವಾರ್ಥ ನೆನಪಿನ ಹೊತ್ತಿಗೆ ಪುಸ್ತಕ ಬಿಡುಗಡೆ
– ಪ್ರಭಾಕರ್ ಅವರ ವ್ಯಕ್ತಿತ್ವ ಬಣ್ಣಿಸಿದ ಗಣ್ಯರು
NAMMUR EXPRESS NEWS
ತೀರ್ಥಹಳ್ಳಿ: ವೈ.ಎ.ಪ್ರಭಾಕರ್ ಜೋಯ್ಸ್ ಅವರ ಗೌರವಾರ್ಥವಾಗಿ ನೆನಪಿನ ಹೊತ್ತಿಗೆ ಪುಸ್ತಕ ಬಿಡುಗಡೆ ಸಮಾರಂಭವನ್ನು ವೈ.ಎ.ಪ್ರಭಾಕರ್ ಕುಟುಂಬದವರು, ನೆನಪಿನ ಹೊತ್ತಿಗೆ ರಚನಾ ಸಮಿತಿ ಇವರು ವಕೀಲರ ಸಂಘ ತೀರ್ಥಹಳ್ಳಿ, ಬ್ರಾಹ್ಮಣ ಸಂಘ ತೀರ್ಥಹಳ್ಳಿ ಮತ್ತು ತುಂಗಾ ವಿದ್ಯಾವರ್ಧಕ ಸಂಘ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ತೀರ್ಥಹಳ್ಳಿಯ ಶ್ರೀ ಗಾಯತ್ರಿ ಮಂದಿರದಲ್ಲಿ ನಡೆದಿದೆ.
ಪುಸ್ತಕ ಬಿಡುಗಡೆಯನ್ನು ನಿವೃತ್ತ ನ್ಯಾಯಾಧೀಶರಾದ ಪ್ರಕಾಶ್ ನಾಡಿಗೇರಿ ನೆರವೇರಿಸಿದ್ದು ಪ್ರಭ ಮಂಡಲ ಪುಸ್ತಕದ ಕುರಿತು ಪ್ರಧಾನ ಸಂಪಾದಕರಾದ ಪ್ರೋ.ಡಿ ಎಸ್ ಸೋಮಶೇಖರ್ ಮಾತನಾಡಿ, ಸಮಾಜದಲ್ಲಿ ಬದಲಾವಣೆ ಆಗಬೇಕು ಎಂದು ಬಯಸುವವರು ಸಾಮಾಜಿಕವಾಗಿ, ಆರ್ಥಿಕವಾಗಿ ಅವಕಾಶಗಳಿಂದ ವಂಚಿತವಾಗಿರುವ ಬಯಸುತ್ತಾರೆ. ಸವಲತ್ತುಗಳು ಇಲ್ಲದೆ ಇರುವವರು ಬಯಸುತ್ತಾರೆ. ಪ್ರಸ್ತುತ ಬೇರೆ ಊರುಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಿದ ಪ್ರಭಾಕರ್ ಅವರು ಒಂದು ಶ್ರೀಮಂತ ಕೌಟುಂಬಿಕ ಹಿನ್ನೆಲೆ ಇರುವಂತವರು. ಯಾವುದೇ ಉದ್ಯೋಗವನ್ನು ಮಾಡದೆ ಅವರು ಜೀವನವನ್ನು ನಡೆಸಬಹುದಾಗಿತ್ತು. ಆದರೆ ತೀರ್ಥಹಳ್ಳಿಯಲ್ಲಿ ನ್ಯಾಯವಾದಿಯಾಗಿ ಅವರು ಕೆಲಸವನ್ನು ನಿರ್ವಹಿಸಿದ್ದರು.
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಅವರು ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದರು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾವಿರಾರು ಜನಗಳಿಗೆ ಸಹಾಯ ಮಾಡಬಹುದು, ಸಾವಿರಾರು ಜನರ ಜೀವನಕ್ಕೆ ಬೆಳಕನ್ನು ತರಬಹುದು ಎನ್ನುವುದಕ್ಕೆ ಪ್ರಭಾಕರ್ ಅವರು ಉದಾಹರಣೆ. ಈ ಹುದ್ದೆಯನ್ನು ಅವರ ದುಡ್ಡಿಗಾಗಿ ಎಂದು ಮಾಡಿದವರಲ್ಲ. ಅವರ ಲೇಖನವನ್ನು ಗಮನಿಸಿದಾಗ ದುಡ್ಡು ಯಾವತ್ತು ಕೂಡ ಅವರ ಆದ್ಯತೆ ಆಗಿರಲಿಲ್ಲ. ಅವರ ಅನಾರೋಗ್ಯವನ್ನು ಕೂಡ ಗಮನದಲ್ಲಿಟ್ಟುಕೊಳ್ಳದೆಯೇ, ಅವರ ಕ್ಲೈಂಟ್ಸ್ ಗಳ ಪರವಾಗಿ ಸದಾ ಯೋಚನೆ ಮಾಡುತ್ತಾ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆಸ್ಪತ್ರೆಯಲ್ಲಿರುವಾಗ ಆಸ್ಪತ್ರೆಗೆ ಲ್ಯಾಪ್ ಟಾಪ್ ತರಿಸಿಕೊಂಡು ಅಲ್ಲಿ ಕೂಡ ಅವರು ಕೆಲಸ ಮಾಡುತ್ತಿದ್ದರು. ಈ ಪುಸ್ತಕ ಮುಂದಿನ ತಲೆಮಾರಿಗೆ ಒಂದು ಉದಾಹರಣೆಯಾಗಿ, ಬೆಳಕಾಗಿ ಇರಬೇಕು ಎಂದರು.
ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಅವರು ಮಾತನಾಡಿ ಪ್ರಭಾಕರ್ ಅವರ ಹತ್ತಿರ ಅತಿ ಹೆಚ್ಚು ಬೈಸಿಕೊಂಡಿರುವಂತಹ ಮನುಷ್ಯ ನಾನು. ಒಂದು ಮನುಷ್ಯನಲ್ಲಿರುವ ಅನೇಕ ವಿಚಾರಗಳನ್ನು ನಾವು ನೋಡಬೇಕು. ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಇತಿಮಿತಿಯಲ್ಲಿ ಹೇಗೆ ಬದುಕಬೇಕು ಎನ್ನುವುದಕ್ಕೆ ಅವರು ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ ಈ ಪುಸ್ತಕ ಪ್ರಭಾಕರ್ ಜಾಯ್ಸ್ ರವರನ್ನು ನಮ್ಮ ಜೊತೆ ಬದುಕಿಸುವಂತೆ ಮಾಡುತ್ತದೆ. 300 ಪೇಜ್ ಪುಸ್ತಕ ಸುಮಾರು ಒಂದುವರೆ ಸಾವಿರ ಕರೆಕ್ಷನ್ ಮಾಡಿದ್ದಾರೆ. ಸೋಮಶೇಖರ್ ಅವರಿಗೆ ತುಂಬಾ ತಾಳ್ಮೆ, ಇಷ್ಟು ತಾಳ್ಮೆಯಿಂದ ಈ ಪುಸ್ತಕವನ್ನು ಸಂಪಾದನೆಗೊಳಿಸಿ ತುಂಬಾ ಚೆನ್ನಾಗಿ ತಂದಿದ್ದಾರೆ. ಆ ಪುಸ್ತಕದ ಜೊತೆಯಲ್ಲಿ ಸೋಮಶೇಖರ್ ಅವರ ಹೆಸರು ಸದಾ ಕಾಲ ಇರುತ್ತದೆ. ನಮ್ಮ ನಡುವೆ ಪುಸ್ತಕದ ಜೊತೆ ಪ್ರಭಾಕರ್ ಅವರನ್ನು ಬದುಕಿಡಿಸುವಂತಹ ಕೆಲಸ ಆಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನೆನಪಿನ ಹೊತ್ತಿಗೆ ರಚನಾ ಸಮಿತಿ ಅಧ್ಯಕ್ಷರಾದ ಡಾ. ಎನ್ಎಸ್ ಮನೋಹರ್ ರಾವ್ ಮಾತನಾಡಿ ಪ್ರಭಾಕರ್ ಅವರು ನನ್ನ ಆತ್ಮೀಯ ಸ್ನೇಹಿತ. ಪ್ರಭಾಕರ್ ಅವರ ಜೊತೆ ನಾವು ಕೆಲವು ಸಂತೋಷದ ಕಾಲವನ್ನು ಕಳೆದಿದ್ದೇವೆ. ಅವರ ಶಿಸ್ತುಬದ್ಧ ಜೀವನ, ಸೌಜನ್ಯಯುತ ನಡವಳಿಕೆ, ಸಾಮಾಜಿಕ ಕಾಳಜಿ ಮುಂದಿನ ಪೀಳಿಗೆ ಸ್ಪೂರ್ತಿ ಆಗಬೇಕು ಎಂದು ಹೇಳಿದರು.
ನಿವೃತ್ತ ಜಿಲ್ಲಾಧಿಕಾರಿಗಳಾದ ಪ್ರಭಾಕರ್ ಶರ್ಮ, ವಕೀಲರ ಸಂಘದ ಅಧ್ಯಕ್ಷರಾದ ಎಸ್ ವಿ ಲೋಕೇಶ್, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ತುಂಬ್ರಮನೆ, ತುಂಗಾ ವಿಧ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಪಟ್ಟಮಕ್ಕಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.