ಸೆಲ್ಫಿ ತೆಗೆಯಲು ಹೋಗಿ ಯುವಕ ಸಾವು..!
– ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಘಟನೆ
– ಬಾಳೆಬೈಲು ಕಾಲೇಜ್ ಹಿಂಭಾಗದಲ್ಲಿ ನಡೆದ ದುರ್ಘಟನೆ
– ಸೆಲ್ಫಿ ಹುಚ್ಚಿಗೆ ಜೀವವೇ ಹೋಯ್ತು..!
NAMMUR EXPRESS NEWS
ತೀರ್ಥಹಳ್ಳಿ: ಸೆಲ್ಫಿ ಫೋಟೋ ತೆಗೆಯಲು ಹೋಗಿ ತುಂಗಾ ನದಿಯಲ್ಲಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಬುಧವಾರ ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಡಿಗ್ರಿ ಕಾಲೇಜ್ ಹಿಂಭಾಗದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಉತ್ತರಪ್ರದೇಶ ಮೂಲದ ಅಬ್ದುಲ್ ಕರೀಂ (24) ಎಂದು ತಿಳಿದು ಬಂದಿದೆ. ಈತ ತನ್ನ ಇಬ್ಬರು ಸ್ನೇಹಿತರೊಂದಿಗೆ ತುಂಗಾ ನದಿ ಬಳಿ ಫೋಟೋ ತೆಗೆದುಕೊಳ್ಳಲು ಹೋದಾಗ ಅಕಸ್ಮಾತ್ ಕಾಲು ಜಾರಿ ಅಬ್ದುಲ್ ಕರೀಂ ಹೊಳೆಗೆ ಬಿದ್ದಿದ್ದಾನೆ. ಆತನನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿದರೂ ಮೃತಪಟ್ಟಿದ್ದಾನೆ.
ಕೆಲಸಕ್ಕೆ ಬಂದಿದ್ದ ಯುವಕ
ಈತ ಉತ್ತರ ಪ್ರದೇಶದ ಮೂಲದವನಾಗಿದ್ದು ಬಾಳೆಬೈಲಿನಲ್ಲಿ ಪಿಒಪಿ ಕೆಲಸ ಮಾಡಲು ಬಂದಿದ್ದ ಎಂದು ತಿಳಿದುಬಂದಿದೆ. ಈತನ ಮರಣೋತ್ತರ ಪರೀಕ್ಷೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಬಳಿಕ ಆತನ ಶವವನ್ನು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಲ್ಫಿ ಹುಚ್ಚಿಗೆ ಯುವ ಜನತೆ ಬದುಕು ಬಲಿ!?
ಇತ್ತೀಚೆಗೆ ಸೆಲ್ಫಿ ಹಾಗೂ ಇನ್ಸ್ಟಾಗ್ರಾಮ್ ವಿಡಿಯೋಗಾಗಿ ಯುವಜನತೆ ಹುಚ್ಚಾಟ ಆಡುವ ಘಟನೆ ಪ್ರತಿದಿನ ಒಂದಲ್ಲ ಒಂದು ಕಡೆ ದಾಖಲಾಗುತ್ತಿದೆ. ಈ ಬಗ್ಗೆ ಪೋಷಕರು ಹಾಗೂ ಜನತೆ ಎಚ್ಚರಿಕೆ ವಹಿಸಬೇಕಿದೆ. ಒಂದು ಸೆಲ್ಫಿ ಅಥವಾ ಒಂದು ಇನ್ಸ್ಟಾಗ್ರಾಮ್ ವಿಡಿಯೋ ಬದುಕಲ್ಲ. ಹಾಗಾಗಿ ಈ ಬಗ್ಗೆ ಪೋಷಕರು, ಪೊಲೀಸ್ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಬೇಕಿದೆ. ನದಿ ಪ್ರದೇಶಗಳಲ್ಲಿ ಅಥವಾ ಜಲಪಾತಗಳಲ್ಲಿ ಅಥವಾ ಬೆಟ್ಟ ಗುಡ್ಡಗಳಲ್ಲಿ ಸೆಲ್ಫಿ ತೆಗೆಯುವ ಹುಚ್ಚು ಇತ್ತೀಚಿಗೆ ಇನ್ನಷ್ಟು ಹೆಚ್ಚಾಗುತ್ತಿದ್ದು, ಇದರಿಂದಾಗಿ ಜೀವ ಜೀವನ ಎರಡು ಹಾಳಾಗುತ್ತಿದೆ. ಇದಕ್ಕೆ ಈ ಘಟನೆ ಸಾಕ್ಷಿಯಾಗಿದೆ.