ಉಡುಪಿ ಟಾಪ್ ನ್ಯೂಸ್!
ಬ್ರಹ್ಮಾವರ: ಕಾರ್ ಡಿಕ್ಕಿ ಹೊಡೆದು ಬಾಲಕ ಮೃತ್ಯು!
– ಉಡುಪಿ: ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದ ಪೊಲೀಸ್, ದೂರು ದಾಖಲು!
– ಉಡುಪಿ ಮೂಲದವರಿದ್ದ ಕಾರ್ ಮೈಸೂರಿನಲ್ಲಿ ಪಲ್ಟಿ!
NAMMUR EXPRESS NEWS
ಬ್ರಹ್ಮಾವರ: ಶಾಲೆಗೆಂದು ತೆರಳುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಸಮೀಪ ಏಪ್ರಿಲ್ 1 ರಂದು ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತ ಬಾಲಕ ಸ್ಥಳೀಯ ಎಸ್ ಎಮ್ ಎಸ್ ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿ ಬಾಲಕ ವಂಶಿ ಜಿ ಶೆಟ್ಟಿ(14) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಬಾಲಕ ವಂಶಿ ಜಿ ಶೆಟ್ಟಿ ಶಾಲೆಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಕುಂದಾಪುರ ಭಾಗದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಬಾಲಕನಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಸಾವನಪ್ಪಿದ್ದಾನೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸ್ಥಳ ಅಪಘಾತ ವಲಯವಾಗಿದ್ದು, ಈ ಹಿಂದೆ ಹಲವು ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಜಂಕ್ಷನ್‌ನಲ್ಲಿ ಸುರಕ್ಷತೆಗಾಗಿ ಶಾಶ್ವತ ಪರಿಹಾರವನ್ನು ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಅತೀ ಶೀಘ್ರದಲ್ಲಿ ಗಮನಹರಿಸಬೇಕಾಗಿದೆ.
– ಉಡುಪಿ: ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದ ಪೊಲೀಸ್, ದೂರು ದಾಖಲು!
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬರ ಜೊತೆ ಪೊಲೀಸ್ ಸಿಬ್ಬಂದಿಯೋರ್ವ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವಿರುದ್ಧವೇ ಸುಮುಟೋ ಕೇಸ್ ದಾಖಲಾಗಿರುವ ಅಪರೂಪದ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಶರಣ ಬಸವ ವಿರುದ್ಧ ಪ್ರಕರಣ ದಾಖಲಾಗಿದೆ. ಸುಮಂತ್ ಎಂಬವರ ಜೊತೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದರು. ಈ ವಿಚಾರದ ಬಗ್ಗೆ ಸುಮಂತ್ ಪೊಲೀಸರ ಗಮನಕ್ಕೆ ತಂದಿದ್ದು ದೂರು ದಾಖಲಿಸುವುದು ಬೇಡ ಎಂದಿದ್ದರು.
ಆದರೆ ಪೊಲೀಸರೇ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸರ ವಿರುದ್ಧವೇ ದೂರು ದಾಖಲಾಗಿರುವುದು ಅಪರೂಪದ ಸಂಗತಿಯಾಗಿದೆ.
– ಉಡುಪಿ ಮೂಲದವರಿದ್ದ ಕಾರ್ ಮೈಸೂರಿನಲ್ಲಿ ಪಲ್ಟಿ!
ಉಡುಪಿ: ಉಡುಪಿ ಮೂಲದವರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ 2 ವರ್ಷದ ಮಗು ಮೃತಪಟ್ಟಿದ್ದು ಒಂದೇ ಕುಟುಂಬದ ಐದು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರಿನ ಹಿನಕಲ್ ರಿಂಗ್ ರಸ್ತೆ ಜಂಕ್ಷನ್ ಬಳಿ ನಡೆದಿದೆ.
ಬೆಂಗಳೂರಿನ ನಿವಾಸಿ ನರೇಶ್ ಅವರ ಪುತ್ರಿ ಮೈಥಿಲಿ (2) ಮೃತ ಬಾಲಕಿ. ಕಾರಿನಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ.
ಮೂಲತಃ ಉಡುಪಿ ನಿವಾಸಿಯಾದ ನರೇಶ್ ಅವರು ಕುಟುಂಬ ಸಮೇತ ಕೇರಳದ ವಯನಾಡಿಗೆ ತೆರಳಿದ್ದು ಕಾರಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಕಾರಿನಲ್ಲಿದ್ದ ನರೇಶ್, ಅವರ ಪತ್ನಿ ಸಂಧ್ಯಾ, ಭಾಮೈದ ಸಂದೇಶ್, ಡಾ| ಲಿಖಿತಾ, ನರೇಶ್ ಅತ್ತೆ ಮನೋರಮಾ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವಿವಿಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.