ಉಡುಪಿಯಲ್ಲಿ ಸೌಂದರ್ಯ ತಜ್ಞೆಯರ ಏಕದಿನ ಕಾರ್ಯಾಗಾರ – 300 ಕ್ಕೂ ಹೆಚ್ಚು ಭಾಗವಹಿಕೆ
ಉಡುಪಿ, ಆ.6:
ಸಮಾನ ಮನಸ್ಕ ಸೌಂದರ್ಯ ತಜ್ಞೆಯರ ಸಮೂಹದ ಸಂಯೋಜನೆಯಲ್ಲಿ ಉಡುಪಿಯ ಕಿಡಿಯೂರಿನ ಅನಂತ ಶಯನ ಸಭಾ ಭವನದಲ್ಲಿ ಮಂಗಳವಾರ ಒಂದು ದಿನದ ವಿಶೇಷ ಸೌಂದರ್ಯ ಕಾರ್ಯಾಗಾರವನ್ನು ಜರುಗಿಸಲಾಯಿತು.
ಉಡುಪಿಯ ಹಿರಿಯ ಸೌಂದರ್ಯ ತಜ್ಞೆಯರಾದ ಎಡ್ನ ಜತ್ತನ್ನ, ಜಯಶ್ರೀ ಭಂಡಾರಿ, ಲತಾ ವಾದಿರಾಜ್ ಹಾಗೂ ಶರ್ಲಿ ಅಮ್ಮನ್ನರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಾಗಾರದಲ್ಲಿ ಮಂಗಳೂರಿನ ಖ್ಯಾತ ಸೌಂದರ್ಯ ತಜ್ಞ ಮನು ಮುರಳೀಧರ್ ಅವರು ಆಧುನಿಕ ತಂತ್ರಜ್ಞಾನದ ಮೂಲಕ ಮಾಡಬಹುದಾದ ಮೇಕಪ್ ವಿಧಾನಗಳ ಕುರಿತು ಆಳವಾಗಿ ಮಾಹಿತಿ ನೀಡಿದರು. ವಿವಿಧ ತ್ವಚಾ ಪ್ರಕಾರಗಳಿಗೆ ಅನುಗುಣವಾದ ಮೇಕಪ್ ವಿಧಾನ, ಸಮಕಾಲೀನ ತಂತ್ರಜ್ಞಾನಗಳ ಬಳಕೆ, ಹಾಗೂ ಗ್ರಾಹಕರ ತೃಪ್ತಿಗೆ ಶ್ರೇಷ್ಠ ಸೇವೆ ನೀಡುವ ಬಗ್ಗೆ ಅವರು ಮಾರ್ಗದರ್ಶನ ನೀಡಿದರು.
ಈ ಕಾರ್ಯಾಗಾರದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ 300 ಕ್ಕಿಂತಲೂ ಹೆಚ್ಚು ಸೌಂದರ್ಯ ತಜ್ಞೆಯರು ಪಾಲ್ಗೊಂಡು ಅನುಭವ ಹಂಚಿಕೆ ಹಾಗೂ ಹೊಸತನ್ನು ಕಲಿಯುವ ಅವಕಾಶವನ್ನು ಪಡೆದುಕೊಂಡರು.
ಕಾರ್ಯಕ್ರಮವನ್ನು ಎಡ್ನ ಜತ್ತನ್ನರ ನೇತೃತ್ವದ ರೋಸ್ ಬ್ಯೂಟಿ ಪಾರ್ಲರ್, ಲಕ್ಷ್ಮೀ ಬ್ಯೂಟಿ ವರ್ಲ್ಡ್, ರೋಸ್ ಕಾಸ್ಮೆಟಿಕ್ಸ್ ಮತ್ತು ಪಟೇಲ್ ಕುಂದಾಪುರ ಜಂಟಿಯಾಗಿ ಆಯೋಜಿಸಿದ್ದವು.