ತುಮಕೂರು/ ಶಿವಮೊಗ್ಗ: ಕೀಟ ಬಾಧೆ ಮತ್ತು ವಿಪರೀತ ರೋಗದಿಂದ ಶೇ. 30 ರಿಂದ 40 ರಷ್ಟು ಬೆಳೆ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೆಂಗಿನ ಇಳುವರಿ ಕಡಿಮೆ ಕಾರಣ ತೆಂಗಿನಕಾಯಿ ಹಾಗೂ ಕೊಬರಿ ಬೆಲೆ ಏರಿಕೆ ಸಾಧ್ಯತೆ ಇದೆ.
ತೆಂಗಿಗೆ ಮಸಿ ರೋಗ, ಕಪ್ಪು ತಲೆ ಹುಳು, ಬಿಳಿ ನೊಣ, ಕೆಂಪು ಮೂತಿ ಹುಳು, ಗೆದ್ದಲು ಕಾಟದಿಂದ ತೆಂಗಿನ ತೋಟಗಳು ಈಗ ನಾಶದ ಭೀತಿಗೆ ತಲುಪಿವೆ.
ಸಂಶೋಧನೆ ಪ್ರಕಾರ ತೆಂಗಿನ ಎಣ್ಣೆ ಆರೋಗ್ಯಕ್ಕೆ ಉತ್ತಮವಾಗಿದೆ. ಸರ್ಕಾರ ಶೇ. 90 ರ ಸಹಾಯ ಧನದಡಿ ತೆಂಗಿನ ಎಣ್ಣೆಯನ್ನು ಪಡಿತರದಾರರಿಗೆ ಪೂರೈಸಬೇಕು. ಜತೆಗೆ ಶಾಲೆಗಳಲ್ಲಿ ಬಿಸಿ ಊಟ ತಯಾರಿಕೆಗೆ ತೆಂಗಿನ ಎಣ್ಣೆ ಬಳಸಲು ಕ್ರಮಕೈಗೊಳ್ಳಬೇಕು ರೈತರು ಮನವಿ ಮಾಡಿದ್ದಾರೆ.
ಅತಿ ಸಣ್ಣ ರೈತರು ತೆಂಗು ಬೆಳೆದಿದ್ದಾರೆ. ಆದರೆ ಅವರಿಂದ ರಸಗೊಬ್ಬರ, ಕೀಟ ಬಾಧೆ, ರೋಗ ಕಡಿಮೆ ಮಾಡುವ ಔಷಧಿ ಸಿಂಪಡಿಸಲು ಕಷ್ಟಕರವಾಗಿರುತ್ತದೆ. ಸರ್ಕಾರ ತೆಂಗು ಬೆಳೆಗಾರರಿಗೆ ಪೋಷಕಾಂಶ ನೀಡುವುದು, ರೋಗ ನಿಯಂತ್ರಣ ಮಾಡುವ ಪ್ರಕ್ರಿಯೆಯನ್ನು ಮಾಡಿದರೆ ಸಂಪೂರ್ಣ ಹತೋಟಿಗೆ ತರಲು ಸಾಧ್ಯ ಎಂದು ರೈತರು ಅಗ್ರಹಿಸಿದ್ದಾರೆ.
ತೆಂಗಿನ ಎಣ್ಣೆಗೆ ರೋಗ ನಿರೋಧಕ ಶಕ್ತಿ!
ಎಣ್ಣೆ ಉತ್ಪಾದನೆಗೆ ತೆಂಗು ಉಪಯುಕ್ತವಾಗಿದೆ. ಇದರಿಂದ ತೆಂಗಿಗೆ ಶಾಶ್ವತ ಬೆಲೆ ಸಿಗುತ್ತದೆ, ಇದಕ್ಕೆ ಅಂತಾರಾಷ್ಟ್ರೀಯ ಬೇಡಿಕೆ ಸಾಕಷ್ಟು ಇದೆ. ತೆಂಗಿನ ಎಣ್ಣೆ ಹೃದ್ರೋಗ, ಚರ್ಮರೋಗ ಸೇರಿದಂತೆ 60 ಸಮಸ್ಯೆಗಳಿಗೆ ರಾಮ ಬಾಣ ಇದ್ದಂತೆ, ಆರೋಗ್ಯ ದೃಷ್ಟಿಯಿಂದ ತೆಂಗಿನ ಎಣ್ಣೆ ಒಳ್ಳೆಯದು. ಆದರೆ ಸರ್ಕಾರ ಬೆಳೆ ಮತ್ತು ಬೆಲೆ ಬಗ್ಗೆ ಗಮನ ಹರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.