ನಮ್ಮೂರ್ ಎಕ್ಸ್ ಪ್ರೆಸ್ ಪುಸ್ತಕ ವಿಮರ್ಶೆ
ಬದುಕಿನ ಅರಿವು ಮೂಡಿಸುವ ಪುಸ್ತಕ “ಅರಿವಿನ ದಾರಿ”
– ಅಶ್ವಥ್ ಎಸ್.ಎಲ್ ಅವರ ಚೊಚ್ಚಲ ಪುಸ್ತಕ
ಕಾರ್ಕಳ ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರಾದ, ಯುವ ಬರಹಗಾರರು ಆದ ಅಶ್ವಥ್ ಎಸ್.ಎಲ್ ಅವರ ಚೊಚ್ಚಲ ಪುಸ್ತಕ ” ಅರಿವಿನ ದಾರಿ “. ಯುವ ಬರಹಗಾರರಿಗೆ , ಓದುಗರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ನಿಜಕ್ಕೂ ಸ್ಫೂರ್ತಿದಾಯಕ ಲೇಖನವುಳ್ಳ ಪುಸ್ತಕ. ಪರೀಕ್ಷೆಯೇ ಒಂದು ಯುದ್ಧ ಎಂದು ಭಾವಿಸುವ ವಿದ್ಯಾರ್ಥಿಗಳಿಗೆ ಬಹಳ ಸುಲಭವಾಗಿ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಎಂಬುದನ್ನು ತಮ್ಮ ಪುಸ್ತಕದಲ್ಲಿರುವ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಹಾಗೆ ಅವರು ಹೇಗೆ ಪುಸ್ತಕಗಳಿಂದ ಪ್ರಭಾವಿತರಾದರು ಎಂಬುದನ್ನು ತಿಳಿಸಿದ್ದಾರೆ, ಗಣಿತ ಅಧ್ಯಾಪಕರಾದರೂ ಅವರ ಸಾಹಿತ್ಯದ ಅಭಿರುಚಿ, ಆಸಕ್ತಿ ಮತ್ತು ಅವರಿಗೆ ಕನ್ನಡದ ಮೇಲಿರುವ ಪ್ರೀತಿ, ಭಾಷೆಯ ಹಿಡಿತ ಪುಸ್ತಕದಲ್ಲಿ ಅನಾವರಣಗೊಂಡಿದೆ.
ಅರಿವಿನ ದಾರಿಯಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ಮನಸ್ಸುಗಳಿಗೆ ಭರವಸೆ ಮತ್ತು ಸ್ಫೂರ್ತಿಯನ್ನು ನೀಡುವ ಲೇಖನಗಳ ಸರಮಾಲೆಯಿದೆ. ಎಲ್ಲಾ ಲೇಖನಗಳು ಮನಮುಟ್ಟುವಂಥದ್ದು ಸ್ಫೂರ್ತಿ ನೀಡುವಂಥದ್ದು .
ಪುಸ್ತಕದ ಪ್ರತಿ ಲೇಖನವು ಒಂದೊಂದು ವಿಷಯ, ವಿಚಾರ, ಪ್ರೇರಣೆ, ಭರವಸೆ ಹುಟ್ಟಿಸುವ ಜತೆಗೆ ವಿದ್ಯಾರ್ಥಿಗಳು, ಪೋಷಕರ ಅರಿವಿಗೆ ದಾರಿ ಕೊಡುತ್ತದೆ. ಅದರಲ್ಲೂ ನನಗೆ ಇಷ್ಟವಾದ ಲೇಖನ ಅಂದ್ರೆ ಆತುರದಲ್ಲಿ ಅಂಧಕಾರ ತಂದೀತು! ಈ ಹದಿವಯದ ಆಕರ್ಷಣೆ.. ಈ ಹದಿಹರಿಯದ ಮನಸ್ಸುಗಳೇ ಹಾಗೆ ಇದ್ದಕ್ಕಿದಂತೆ ಹೊಸ ಸಂಗಾತಿ ಬಯಸುತ್ತೆ, ಆದರೆ ಆತುರಗಳಿಗೆ ಒಳಗಾಗಿ ಸೌಂದರ್ಯಕ್ಕೆ ಬೆರಗಾಗಿ ಅದೆಷ್ಟೋ ಜನ ಪ್ರೀತಿಯ ಗುಂಗಲ್ಲಿ ತಮ್ಮ ಸುಂದರ ನಾಳೆಗಳನ್ನು ಕಳೆದುಕೊಳ್ಳುತ್ತಾರೆ. ಯಾವ ಹೆಜ್ಜೆಯನ್ನು ಇಡಬೇಕಾದರೂ ನೂರಾರು ಬಾರಿ ಆಲೋಚಿಸಿ, ಅದರಲ್ಲೂ ಪ್ರೀತಿಯ ಹೆಜ್ಜೆ ಇಡಬೇಕಾದರೆ ಸಾವಿರಾರು ಬಾರಿ ಯೋಚಿಸಿ, ಕೈ ಜಾರಿ ಹೋದ ಮೇಲೆ ಚಿಂತಿಸಿದರೆ ಫಲವಿಲ್ಲ, ಬದುಕಿನ ಪ್ರತಿ ಕ್ಷಣವನ್ನು ಜೀವಿಸಬೇಕು, ಸಮರ್ಥನಿಯವಾಗಿ ನಿಭಾಯಿಸಬೇಕು ಎಂಬುದನ್ನು ತಮ್ಮ ಲೇಖನದಲ್ಲಿ ಬಹಳ ಸೊಗಸಾಗಿ, ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.
ಪುಸ್ತಕದಲ್ಲಿರುವ ಹತ್ತಾರು ಬರಹಗಳು ಪ್ರತಿಯೊಬ್ಬರು ಓದಲೇಬೇಕಾದ ವಿಚಾರಗಳಾಗಿವೆ. ಇಂದಿನ ಯುವ ಜನತೆಗೆ ನಿಜವಾಗಲೂ ಅರಿವಿನ ದಾರಿ ಬೇಕಿದೆ, ಆ ರಹದಾರಿಯ ಹಲವು ದಾರಿಗಳನ್ನು ಈ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದಾರೆ.
ನಿಮ್ಮ ಈ ಪುಸ್ತಕ ನನಗೆ ಸಾಹಿತ್ಯದ ಅಭಿರುಚಿ ಮತ್ತು ಬರವಣಿಗೆ ಆಸಕ್ತಿಯನ್ನು ಹೆಚ್ಚಿಸಿದೆ, ಸರ್ ಇದೇ ರೀತಿಯ ಮತ್ತಷ್ಟು, ಮಗದಷ್ಟು ಪುಸ್ತಕಗಳು ತಮ್ಮಿಂದ ಬರಲಿ ಎಂದು ಬಯಸುತ್ತೇನೆ.
– ಅಮೃತ ಮಂಜುನಾಥ್
ಯುವ ಬರಹಗಾರ್ತಿ, ನಿರೂಪಕಿ
