Categories
Uncategorized ಉಡುಪಿ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು ಮುಲ್ಕಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

•ಬೆಳ್ತಂಗಡಿ: ಬುರುಡೆ ಭಾವಚಿತ್ರ ಬಯಲು!
* ಉಡುಪಿ: ಡಿವೈಡರ್ ಏರಿ ಬೈಕ್ ಗೆ ಡಿಕ್ಕಿ ಹೊಡೆದ ಟಿಪ್ಪರ್
* ಮಂಗಳೂರು: ಮಾದಕ ದ್ರವ್ಯ ಅಫೀಮು ಮಾರಾಟಗಾರರ ಬಂಧನ
* ಪುತ್ತೂರು: ಲಂಚ ಸ್ವೀಕರಿಸಿದ ತಹಶೀಲ್ದಾರ್ ಜಾಮೀನು ನಿರಾಕರಣೆ
* ಕಾಪು: ಸ್ಕೂಟಿಗೆ ಅಡ್ಡ ಬಂದ ನಾಯಿ; ಮಗು ಮತ್ತು ತಾಯಿಗೆ ಗಾಯ
* ಕುಂದಾಪುರ: ತೋಡಿಗೆ ಕಾಲು ಜಾರಿ ಬಿದ್ದು ಕಾರ್ಮಿಕನ ಸಾವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಗುರುವಾರ ಬೆಳಿಗ್ಗೆ ನಡೆದ ಭಯಾನಕ ಅಪಘಾತದ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ಟಿಪ್ಪರ್ ವೊಂದು ರಸ್ತೆಯಲ್ಲಿದ್ದ ಡಿವೈಡರ್ ಅನ್ನು ಭೇದಿಸಿ, ಅದರ ಮೇಲಿಂದ ಏರಿ ಬಂದು, ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಗೆ ಢಿಕ್ಕಿ ಹೊಡೆದ ಘಟನೆ ಗುಂಡಿಬೈಲಿನ ಹತ್ತಿರ ನಡೆದಿದೆ. ಮಣ್ಣು ತುಂಬಿದ ಟಿಪ್ಪರ್ ವೊಂದು ಮಣಿಪಾಲದಿಂದ ಅಂಬಾಗಿಲಿನತ್ತ ಬರುತ್ತಿದ್ದ ಸಂದರ್ಭದಲ್ಲಿ, ಟಿಪ್ಪರ್ ನಲ್ಲಿ ತಾಂತ್ರಿಕ ದೋಷ ಎದುರಾದ ಹಿನ್ನೆಲೆಯಲ್ಲಿ, ನಿಯಂತ್ರಣ ತಪ್ಪಿ ದಾರಿ ಬದಲಾಗಿದೆ. ಇದರ ಪರಿಣಾಮವಾಗಿ ಅಂಬಾಗಿಲಿನಿಂದ ಉಡುಪಿಯತ್ತ ತೆರಳುತ್ತಿದ್ದ, ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಬೈಕ್ ಸವಾರ ಮಲ್ಪೆಯ ಗಣೇಶ್ ಕರ್ಕೆರ ಮತ್ತು ಅವರ ಜೊತೆಗಿದ್ದ ಗಜೇಂದ್ರ ಅವರು ಗಾಯಗೊಂಡಿದ್ದು, ಇಬ್ಬರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಬೈಕ್ ನ ಹಿಂದೆ ಇದ್ದ ಆಟೋಗೆ ಕೂಡ ಸ್ವಲ್ಪ ಹಾನಿಯಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
ಇದೇ ರೀತಿ ಟಿಪ್ಪರ್ ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ 66ರ, ಕಾಮತ್ ಪೆಟ್ರೋಲ್ ಬಂಕ್ ಸಮೀಪ ಮತ್ತೊಂದು ಅಪಘಾತ ಸಂಭವಿಸಿದ್ದು, ವ್ಯವಸಾಯಿಕ ಸಹಕಾರ ಸಂಘದ ಹಳೆಯ ಗೋದಾಮಿನ ಗೋಡೆಗೆ ಹೊಡೆದು ನಿಂತಿದೆ. ಪರಿಣಾಮವಾಗಿ ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಬರುತ್ತಿದ್ದ, ಬಿಹಾರ ಮೂಲದ ಕಾರ್ಮಿಕನಾದ ರಾಜಕುಮಾರ್ ಶರ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ, ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ. ಟಿಪ್ಪರ್ ಚಾಲಕನ ನಿರ್ಲಕ್ಷತನದಿಂದ ಈ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.‌

* ಬೆಳ್ತಂಗಡಿ: ಬುರುಡೆ ಭಾವಚಿತ್ರ ಬಯಲು

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿನ್ನಯ್ಯ ವಿಚಾರಣೆಗೆಂದು ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ತಂದಿದ್ದ ಬುರುಡೆಯ ಭಾವಚಿತ್ರ ಇದೀಗ ಸಾರ್ವಜನಿಕವಾಗಿ ಬಯಲಾಗಿದೆ. ಈ ಮೂಲಕ ಜನರಲ್ಲಿ ಮೂಡಿದ್ದ ಚಿನ್ನಯ್ಯ ನ್ಯಾಯಾಲಯಕ್ಕೆ ಬುರುಡೆಯನ್ನು ನೀಡಿದ್ದಾನೆಯೇ ಅಥವಾ ಇಲ್ಲವೇ ಎಂಬ ಕುತೂಹಲ ಮತ್ತು ಅನುಮಾನಗಳಿಗೆ ತೆರೆ ಬಿದ್ದಿದೆ. ಇಷ್ಟು ದಿನ ವಿಚಾರಣೆಯು ಎಸ್ಐಟಿ ಅವರ ತನಿಖೆಯ ಹಂತದಲ್ಲಿದ್ದರಿಂದ, ಭಾವಚಿತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ. ಆದರೆ ಗುರುವಾರದಂದು ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಚಿನ್ನಯ್ಯ ಮೊದಲ ಬಾರಿಗೆ ಸಾಕ್ಷಿ ಹೇಳಲು ಬರುವ ವೇಳೆ, ನಾನು ನೂರು ಶವಗಳನ್ನು ಹೂತಿದ್ದೇನೆ ಎನ್ನುವುದರ ಕುರುಹಾಗಿ ಈ ತಲೆಬುರುಡೆಯನ್ನು ತಂದಿದ್ದ ಎನ್ನಲಾಗಿದೆ. ಹೀಗಾಗಿ ತಲೆಬುರುಡೆಯು ದೆಹಲಿ, ಬೆಂಗಳೂರು ಮತ್ತು ಕೇರಳ ಸೇರಿದಂತೆ ಹಲವಾರು ಕಡೆ ರವಾನೆಯಾಗಿತ್ತು ಎಂದು ತಿಳಿಸಿದ್ದಾರೆ.

* ಮಂಗಳೂರು: ಮಾದಕ ದ್ರವ್ಯ ಅಫೀಮು ಮಾರಾಟಗಾರರ ಬಂಧನ

ಮಂಗಳೂರು: ಮಾದಕ ದ್ರವ್ಯವಾದ ಅಫೀಮನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಬರ್ಕೆ ಪೊಲೀಸ್ ಉಪನಿರೀಕ್ಷಕರಾದ ವಿನಾಯಕ ತೋರಗಲ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಕಳೆದೆರಡು ದಿನಗಳ ಹಿಂದೆ ಕೊಡಿಯಾಲಬೈಲುವಿನ ಭಗವತಿ ನಗರದ ಗುಜರಾತಿ ಶಾಲೆಯ ಹಿಂಭಾಗಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ವಾಸುದೇವ್ ಎನ್ನುವ ವ್ಯಕ್ತಿಯು ಪತ್ತೆಯಾಗಿದ್ದು, ಆತನನ್ನು ವಿಚಾರಿಸಿದಾಗ ಮಂಗಲ್ ಚೌಧರಿ ಎನ್ನುವವನಿಂದ ಖರೀದಿಸಿ ತಂದು, ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾನೆ. ಹೇಳಿಕೆಯ ಆಧಾರದ ಮೇಲೆ ತನಿಖೆ ನಡೆಸಿ ಮಂಗಲ್ ಚೌಧರಿಯನ್ನು ಸಹ ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಬ್ಬರೂ ರಾಜಸ್ಥಾನ ಮೂಲದವರೆಂದು ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಿದ ಬಳಿಕ, ಅವರ ಬಳಿಯಿದ್ದ 9000 ರೂಪಾಯಿ ಮೌಲ್ಯದ 170 ಗ್ರಾಂ ತೂಕವುಳ್ಳ ದ್ರವ ರೂಪದ ಅಫೀಮನ್ನು, 40,000 ರೂಪಾಯಿ ನಗದನ್ನು, ಮೊಬೈಲ್ ಮತ್ತು 50.000 ರೂಪಾಯಿ ಬೆಲೆಬಾಳುವ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 99.೦೦೦ ರೂಪಾಯಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

* ಪುತ್ತೂರು: ಲಂಚ ಸ್ವೀಕರಿಸಿದ ತಹಶೀಲ್ದಾರ್ ಜಾಮೀನು ನಿರಾಕರಣೆ

ಪುತ್ತೂರು: ಲಂಚ ಸ್ವೀಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ ಪುತ್ತೂರಿನ ತಹಶೀಲ್ದಾರ್ ಎಸ್.ಬಿ ಕೂಡಲಗಿಗೆ ಗುರುವಾರದಂದು ನ್ಯಾಯಾಲಯವು ಜಾಮೀನನ್ನು ನಿರಾಕರಿಸಿದೆ. ಜಮೀನಿನ ನಿರಾಕ್ಷೇಪಣಾ ಪತ್ರವನ್ನು ಮಂಜೂರು ಮಾಡಲು, ಕೂಡಲಗಿ ಲಂಚವನ್ನು ಕೇಳಿದ್ದರು. ಆಗ ವ್ಯಕ್ತಿಯೊಬ್ಬರು ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ಕಳೆದ ತಿಂಗಳು ಲೋಕಾಯುಕ್ತರು ತಹಶೀಲ್ದಾರ್ ಕಛೇರಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ, ಭೂ ಸುಧಾರಣಾ ಶಾಖೆಯ ಪ್ರಥಮ ದರ್ಜೆ ಸಹಾಯಕ ಸುನಿಲ್ ಕುಮಾರ್ ದೂರು ನೀಡಿದ ವ್ಯಕ್ತಿಯಿಂದ 12,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದರು. ವಿಚಾರಣೆಯ ವೇಳೆ ತಹಶೀಲ್ದಾರರಿಗೆ ಹತ್ತು ಸಾವಿರ ರೂಪಾಯಿ ನೀಡಬೇಕು ಎಂದು ಸುನಿಲ್ ಕುಮಾರ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುನಿಲ್ ಕುಮಾರ್ ಮತ್ತು ಕೂಡಲಗಿ ವಿರುದ್ಧ ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸುನಿಲ್ ಕುಮಾರ್ ಜಾಮೀನಿನ ಆಧಾರದ ಮೇಲೆ ಬಿಡುಗಡೆಗೊಂಡಿದ್ದು, ಕೂಡಲಗಿ ತಲೆಮರೆಸಿಕೊಂಡಿದ್ದ. ಅಲ್ಲದೆ ನಿರೀಕ್ಷಣ ಜಾಮೀನನ್ನು ಕೋರಿ ಕೂಡಲಗಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಗುರುವಾರ ಇದಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಎಸ್. ಜೆ .ಅವರು ವಿಚಾರಣೆ ನಡೆಸಿ ಜಾಮೀನನ್ನು ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

* ಕಾಪು: ಸ್ಕೂಟಿಗೆ ಅಡ್ಡ ಬಂದ ನಾಯಿ; ಮಗು ಮತ್ತು ತಾಯಿಗೆ ಗಾಯ

ಕಾಪು: ಕಟಪಾಡಿಯ ತಾಯಿ ಮತ್ತು ಮಗಳು ಸ್ಕೂಟಿಯಲ್ಲಿ ಬರುತಿದ್ದ ಸಂದರ್ಭದಲ್ಲಿ, ನಾಯಿಯೊಂದು ಅಡ್ಡ ಬಂದ ಪರಿಣಾಮವಾಗಿ ಇಬ್ಬರೂ ಬಿದ್ದು, ಗಾಯಗೊಂಡ ಘಟನೆ ಕಾಪುವಿನ ವಿದ್ಯಾನಿಕೇತನ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಗಾಯಾಳುಗಳಾದ ಪ್ರತಿಮಾ ಮತ್ತು ಮಗಳು ಹೃತಿಕಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಮಂಗಳೂರಿನ ಎಸ್ ಡಿಪಿಐ ಆ್ಯಂಬುಲೆನ್ಸ್ ಮೂಲಕ ಉಚ್ಚಿಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾಪು ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

* ಕುಂದಾಪುರ: ತೋಡಿಗೆ ಕಾಲು ಜಾರಿ ಬಿದ್ದು ಕಾರ್ಮಿಕನ ಸಾವು

ಕುಂದಾಪುರ: ಮಳೆಯಿಂದಾಗಿ ನೀರು ತುಂಬಿದ ತೋಡಿಗೆ ಕಾರ್ಮಿಕನೊಬ್ಬ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ ಘಟನೆ ಕಳೆದೆರಡು ದಿನಗಳ ಹಿಂದೆ ಬೇಳೂರು ಗ್ರಾಮದ ಚಾಮ್ತಾಡಿ ಸಮೀಪ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಅಂಬೇಡ್ಕರ್ ಕಾಲನಿ ನಿವಾಸಿಯಾದ ಶರತ್ ಎಂದು ಹೇಳಲಾಗಿದ್ದು, ಇವರು ತೆಂಗಿನ ತೋಟದಲ್ಲಿ ಕಾಯಿಗಳನ್ನು ಕೊಯ್ದು ಸಾಗಾಟ ಮಾಡುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಬುಧವಾರದಂದು ಕೆಲಸದ ನಿಮಿತ್ತ ತೋಟವೊಂದಕ್ಕೆ ತೆರಳಿದ್ದು, ಮರದಿಂದ ಕಾಯಿಗಳನ್ನು ಕೊಯ್ದು ಟೆಂಪೋಗೆ ಹಾಕುತ್ತಿದ್ದ ಸಮಯದಲ್ಲಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶರತ್ ಅವರಿಗಾಗಿ ಈಶ್ವರ್ ಮಲ್ಪೆ ಮತ್ತು ಅಗ್ನಿಶಾಮಕ ದಳದವರು ಮಾಹಿತಿ ದೊರೆತ ಕೂಡಲೇ ಹುಡುಕಾಟ ನಡೆಸಿದರು. ನಾಗರಾಜ ಜೀವನ್ ಮಿತ್ರ ಮತ್ತು ಸ್ಥಳೀಯರು ಕೂಡ ಇವರಿಗೆ ಸಹಕಾರ ನೀಡಿದ್ದರು. ಗುರುವಾರ ಮಧ್ಯಾಹ್ನ ಕೈಲೇರಿ ಸಮೀಪದ ತೋಡಿನಲ್ಲಿ, ಶರತ್ ಅವರು ಮೃತದೇಹ ಸ್ಥಿತಿಯಲ್ಲಿ ಪತ್ತೆಯಾದರು. ಬುಧವಾರ ವಿಪರೀತ ಮಳೆ ಇದ್ದ ಕಾರಣ, ತೋಡಿನಲ್ಲಿ ನೀರು ತುಂಬಿ ಹರಿಯುತ್ತಿತ್ತು. ರಸ್ತೆ ಕೂಡ ಮಳೆಯ ಕೆಸರು ನೀರಿನಿಂದ ಆವೃತವಾಗಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಕಾಯಿ ಕೊಯ್ದು ಟೆಂಪೋಗೆ ಹಾಕುತ್ತಿದ್ದಾಗ ಶರತ್ ಅವರು ಕಾಲು ಜಾರಿ ಬಿದ್ದಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಕೋಟ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್, ಎಎಸ್ಐ ರವಿ ಕುಮಾರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.