ಎ ಐ ಆಧಾರಿತ ಕನ್ನಡದ ಮೊದಲ ಚಿತ್ರ ಲವ್ ಯು!
– ವಿಶ್ವದ ಮೊದಲ ಎಐ ಚಿತ್ರ ಎಂಬ ಹೆಗ್ಗಳಿಕೆಗೆ ಕನ್ನಡದ ಸಿನಿಮಾ
– ಹೇಗಿದೆ ಸಿನಿಮಾ…? ಏನಿದು ವಿಶೇಷ…?
NAMMUR EXPRESS NEWS
ಇತ್ತೀಚೆಗೆ ಯುವಜನತೆಯನ್ನು ಆಕರ್ಷಿಸಿದ ನೂತನ ತಂತ್ರಜ್ಞಾನ ಎಐ. ಇದರ ಮೂಲಕ ಜನರು ತಮ್ಮ ಫೋಟೋಗಳನ್ನು, ವೀಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ಸಹಜ ಸಂಗತಿಯಾಗಿದೆ. ಆದರೆ ಕನ್ನಡದ ನಿರ್ದೇಶಕರೊಬ್ಬರು ಇದನ್ನೇ ಅಸ್ತ್ರವನ್ನಾಗಿಸಿಕೊಂಡು, ಕನ್ನಡ ಚಿತ್ರವೊಂದನ್ನು ತಯಾರಿಸಿರುವುದಲ್ಲದೆ ಇದೇ ವಾರ ಬಿಡುಗಡೆಗೂ ಸಿದ್ಧಗೊಂಡಿದೆ.
ಗರುಡಾಕ್ಷ ಮತ್ತು ಕಂಟೇನರ್ ಚಿತ್ರಗಳನ್ನು ನಿರ್ದೆಶಿಸಿದ ಎಸ್. ನರಸಿಂಹಮೂರ್ತಿ ಅವರು ಇದೀಗ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಿಕೊಂಡು ಲವ್ ಯು ಎಂಬ ಕನ್ನಡ ಚಿತ್ರವೊಂದನ್ನು ನಿರ್ಮಿಸಿ, ನಿರ್ದೇಶಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಚಿತ್ರವು ತಯಾರಾಗಿದ್ದು, ಇದೇ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿ ನಿಂತಿದೆ.
ಲವ್ ಯು ಚಿತ್ರವನ್ನು ತಯಾರಿಸಲು ಇಪ್ಪತ್ತು ಎಐ ಉಪಕರಣಗಳನ್ನು ಬಳಸಲಾಗಿದ್ದು, 95 ನಿಮಿಷಗಳ ಈ ಚಿತ್ರದಲ್ಲಿ ಹನ್ನೆರಡು ಹಾಡುಗಳಿವೆ ಎಂದು ಚಿತ್ರದ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಕನ್ನಡ ಅಷ್ಟೇ ಅಲ್ಲದೆ, ವಿಶ್ವದ ಮೊದಲ ಎಐ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಲವ್ ಯು ಚಿತ್ರತಂಡ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿಯನ್ನು ಮೂಡಿಸಿದೆ. ಎಐ ಇಂಜಿನಿಯರ್ ಆದ ನೂತನ್ ಚಿತ್ರತಂಡದ ಜೊತೆಗಿದ್ದು, ಸುಂದರ ರಾಜ್ ಗುಂಡೂರಾವ್ ಅವರು ಚಿತ್ರದ ಸೃಜನಶೀಲತೆಯ ಬೆನ್ನೆಲುಬಾಗಿ ನಿಂತಿದ್ದಾರೆ. ಅಲ್ಲದೆ ಸಿಬಿಎಫ್ ಸಿ ಯಿಂದ U/A ಪ್ರಮಾಣ ಪತ್ರ ಪಡೆದ ಮೊದಲ ಎಐ ಚಿತ್ರ ಎಂಬ ಪ್ರಶಂಸೆಗೂ ಪಾತ್ರವಾಗಿದೆ ಲವ್ ಯು ಚಿತ್ರ. ಈ ಮೂಲಕ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಅನುಮತಿ ದೊರೆತಂತಾಗಿದೆ.
ಪ್ರಣಯದ ಕಥೆಯನ್ನು ಹೇಳುವ ಭಾಷೆ ಎಂದಿನಂತಿರದೆ ಸಂಪೂರ್ಣವಾಗಿ ಹೊಸತಾಗಿದೆ ಎಂದು ಚಿತ್ರತಂಡ ಹೇಳಿಕೆ ನೀಡುವ ಮೂಲಕ ಚಿತ್ರರಸಿಕರ ಕುತೂಹಲವನ್ನು ಮತ್ತಷ್ಟು ಕೆರಳಿಸಿದ್ದಾರೆ. ಚಿತ್ರದ ವೀಕ್ಷಣೆಗೆ ಎಲ್ಲರು ಕಾತರತೆಯಿಂದ ಕಾದಿದ್ದಾರೆ ಎನ್ನಲಾಗಿದೆ.
