ಹಿಂದೂಗಳ ಹೊಸ ವರ್ಷ ಯುಗಾದಿಗೆ ಸುಸ್ವಾಗತ!
– ಹೊಸ ಚೈತನ್ಯ ನೀಡುವ ಹಬ್ಬ ಯುಗಾದಿ ಹಬ್ಬ
– ಯುಗಾದಿ ಚಂದ್ರ ನೋಡಿದ್ರೆ ಒಳ್ಳೇದು
NAMMUR EXPRESS NEWS
ಚೈತ್ರ ಮಾಸದ ಆಗಮನವಾಗಿದೆ. ನಿಸರ್ಗವು ಎಲ್ಲೆಡೆ ಪಲ್ಲವಿಸಿ ಜೀವಕಳೆಯನ್ನು ತುಂಬಿದೆ. ಕೋಗಿಲೆಯ ಗಾನ, ಮಾವಿನ ಚಿಗುರಿನ ಹಸಿರು ಬಣ್ಣದಿಂದ ಕಿವಿಗೂ ಇಂಪು ಕಣ್ಣಿಗೂ ಸೊಂಪು ಎಂಬ ಭಾವ ಮೂಡುತ್ತದೆ. ಇನ್ನು ಮಾವಿನ ಹಣ್ಣಿನ ಕಾಲವಾದ್ದರಿಂದ ನಾಲಗೆ, ಉದರವೂ ಸಂತಸಗೊಳ್ಳುತ್ತದೆ. ಬಿಸಿಲಿನ ಧಗೆಗೆ ಬಸವಳಿದ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಮಾನವನಾದಿಯಾಗಿ ಸಕಲ ಜೀವಿಗಳ ಮೇಲೂ ವರುಣ ದೇವನು ಬೇಗನೆ ದಯೆ ತೋರಿ ತಂಪನ್ನೆರೆದು ದೇಹವನ್ನು, ಮನಸ್ಸನ್ನು ಆಹ್ಲಾದಗೊಳಿಸಿದ್ದಾನೆ. ಮಣ್ಣಿನ ಘಮಲು ನಾಸಿಕವನ್ನು ತೃಪ್ತಿಗೊಳಿಸಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ಪ್ರಕೃತಿಯ ಜೊತೆಗೆ ಮಾನವನ ದೇಹವನ್ನೂ ಯುಗಾದಿಗೆ ಉಲ್ಲಾಸಿತವಾಗಿ ಸಜ್ಜಾಗಿಸಿದೆ.
ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ ಯುಗಾದಿ ಹಿಂದೂ ಧರ್ಮದವರ ಹೊಸ ವರ್ಷವಾಗಿದೆ. ಯುಗ + ಆದಿ ಎಂಬ ಎರಡು ಸಂಸ್ಕೃತ ಪದಗಳಿಂದ ಯುಗಾದಿ ಪದವು ಹುಟ್ಟಿಕೊಂಡಿದೆ. ಯುಗದ ಪ್ರಾರಂಭ ಎಂಬ ಅರ್ಥವನ್ನು ಇದು ಸ್ಪುರಿಸುವುದರಿಂದ ಹೊಸ ವರ್ಷ ಎಂದು ಪರಿಗಣಿಸಲಾಗಿದೆ. ಇನ್ನೊಂದೆಡೆ ಬ್ರಹ್ಮನು ಈ ದಿನದಂದು ಜಗತ್ತನ್ನು ಸೃಷ್ಟಿಸಿದ ಎನ್ನಲಾಗಿದೆ.
ಯುಗಾದಿಯು ಪ್ರಧಾನವಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ಈ ಹಬ್ಬದಲ್ಲಿ ಮುಖ್ಯವಾಗಿ ಒಬ್ಬಟ್ಟು ಮತ್ತು ಮಾವಿನ ಹಣ್ಣಿನ ಕಾಲವಾದ್ದರಿಂದ ಅದಕ್ಕೆ ಸಂಬಂಧಿಸಿದ ಆಹಾರವನ್ನು ತಯಾರಿಸುತ್ತಾರೆ. ಯುಗಾದಿಯ ಪ್ರಧಾನ ಸೇವನೆ ಬೇವು ಬೆಲ್ಲ. ಪ್ರಕೃತಿಯ ಪ್ರತೀಕವಾದ ಇದು ಜೀವನದ ತತ್ವವನ್ನು ಸಾರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಸಿಹಿ ಕಹಿ ಎನ್ನುವುದು ಇದ್ದೇ ಇರುತ್ತದೆ. ಅದನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬುದು ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಸಂಕೇತಿಸಲಾಗುತ್ತದೆ. ಪರಸ್ಪರರು ಹಂಚಿಕೊಂಡು ಶುಭಕೋರುವಾಗ ನಿಮ್ಮ ಜೀವನದಲ್ಲಿ ಬೆಲ್ಲದ ಪ್ರಮಾಣ ಹೆಚ್ಚಾಗಿರಲಿ ಎಂದು ಅಥವಾ ಬೇವಿನ ಕಹಿಯನ್ನು ಬೆಲ್ಲದ ಸಿಹಿಯು ಮರೆಸಲಿ ಎಂದು ಹಾರೈಸುವುದು ವಾಡಿಕೆ.
ಗಣೇಶ ಚತುರ್ಥಿಯಂದು ಚಂದ್ರ ದರ್ಶನ ಮಾಡಿ ಶಾಪಕ್ಕೆ ಅಥವಾ ಸಮಸ್ಯೆಗೆ ಸಿಲುಕಿದವರು ಯುಗಾದಿ ಚಂದ್ರನನ್ನು ದರ್ಶಿಸುವ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಇದು ಸ್ವತಃ ವಿಘ್ನ ನಿವಾರಕನೇ ನೀಡಿದ ಪರಿಹಾರವಾಗಿದೆ. ಯುಗಾದಿಯು ಧಾರ್ಮಿಕ ನಂಬಿಕೆಗಳೊಂದಿಗೆ, ಪ್ರಕೃತಿಯ ಸಂಕೇತವಾಗಿ ಕೂಡ ಆಚರಿಸಲಾಗುತ್ತದೆ. ಅಲ್ಲದೆ ಆಹಾರದ ಮೂಲಕ ಷಡ್ರಸಗಳಾದ ಉಪ್ಪು, ಹುಳಿ, ಖಾರ, ಒಗರು, ಸಿಹಿ, ಕಹಿ ಅಂಶಗಳು ನಮ್ಮ ದೇಹವನ್ನು ಸೇರುವ ಮೂಲಕ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವೆನಿಸಿದೆ. ಯುಗಾದಿ ಆಚರಣೆ ಎಲ್ಲಾ ಮೂಲಗಳಿಂದ ಅರ್ಥಪ್ರಧಾನವಾಗಿದೆ.
ಸಾಮರಸ್ಯಕ್ಕೆ ಸಾಕ್ಷಿಯಾದ ಯುಗಾದಿ ಹಬ್ಬ!
ಈ ಬಾರಿಯ ಯುಗಾದಿ ಸಾಮರಸ್ಯದ ಸಂಕೇತ ಕೂಡ ಆಗಿರುವುದು ಗಮನಾರ್ಹ. ಮರು ದಿನ ಮುಸ್ಲೀ ಬಾಂಧವರ ಪ್ರಧಾನ ಹಬ್ಬವಾದ ರಂಜಾನ್ ಕೂಡ ಬಂದಿರುವುದು ಕಾಕತಾಳೀಯ. ಇಬ್ಬರೂ ಚಂದ್ರ ದರ್ಶನಕ್ಕಾಗಿ ಕಾಯುವುದು ಇದರ ವಿಶೇಷ. ಹಿಂದೂ ಧರ್ಮದವರು ಹಬ್ಬ ಆಚರಿಸಿ ಚಂದ್ರ ದರ್ಶನ ಮಾಡಿದರೆ, ಮುಸಲ್ಮಾನರು ಚಂದ್ರ ದರ್ಶನದ ಬಳಿಕ ಹಬ್ಬವನ್ನು ಆಚರಿಸುತ್ತಾರೆ. ವಿಧಗಳು ಬೇರೆಯಾದರೂ ಪ್ರಕೃತಿಯ ಒಂದು ಅಂಶವಾದ ದರ್ಶನ ನೀಡುವ ಚಂದ್ರ ಒಬ್ಬನೇ ಆಗಿದ್ದಾನೆ. ಇದು ನಿಸರ್ಗದ ಮತ್ತೊಂದು ವಿಸ್ಮಯ.